ಮರಾಠಿ ವಿರೋಧಿ ಹೇಳಿಕೆ : ಶಿವಸೇನಾ ಕಾರ್ಯಕರ್ತರಿಂದ ಆಟೊ ರಿಕ್ಷಾ ಚಾಲಕನಿಗೆ ಥಳಿತ; ವೀಡಿಯೊ ವೈರಲ್

Credit: Instagram @/spsc358
ಪಾಲ್ಗಾರ್: ‘ಮರಾಠಿ ವಿರೋಧಿ’ ಹೇಳಿಕೆ ನೀಡಿರುವುದಕ್ಕಾಗಿ ಶಿವಸೇನಾ (ಯುಬಿಟಿ) ಕಾರ್ಯಕರ್ತರು ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯಲ್ಲಿ ಆಟೋ ರಿಕ್ಷಾ ಚಾಲಕನೋರ್ವನಿಗೆ ಥಳಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದು ರಾಜ್ಯದಲ್ಲಿ ಭಾಷೆಯ ಕುರಿತು ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ.
ನಾವು ವೀಡಿಯೊ ನೋಡಿದ್ದೇವೆ. ಆದರೆ, ಈ ವಿಷಯದ ಕುರಿತು ಯಾವುದೇ ಔಪಚಾರಿಕ ದೂರು ಸ್ವೀಕರಿಸಿಲ್ಲ. ಆದುದರಿಂದ ಇದುವರೆಗೆ ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ)ದ ಸ್ಥಳೀಯ ಕಾರ್ಯಕರ್ತನೋರ್ವ, ಆಟೋ ರಿಕ್ಷಾ ಚಾಲಕನಿಗೆ ಸೂಕ್ತ ಪಾಠ ಕಲಿಸಲಾಗಿದೆ ಎಂದು ಹೇಳಿದ್ದಾರೆ. ಯಾರೇ ಆದರೂ ಮರಾಠಿ ಭಾಷೆ ಹಾಗೂ ರಾಜ್ಯಕ್ಕೆ ಅವಮಾನ ಮಾಡಿದರೆ, ‘‘ನಿಜವಾದ ಶಿವಸೇನಾ ಶೈಲಿ’’ಯಲ್ಲಿ ಉತ್ತರ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪಾಲ್ಗಾರ್ ನ ವಿರಾರ್ ಪ್ರದೇಶದಲ್ಲಿ ವಾಸಿಸುತ್ತಿರುವ ವಲಸಿಗ ಆಟೋ ರಿಕ್ಷಾ ಚಾಲಕ ಮರಾಠಿ ಭಾಷೆ, ಮಹಾರಾಷ್ಟ್ರದ ವಿರುದ್ಧ ಅವಮಾನಕರ ಹೇಳಿಕೆ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಹೇಳಿಕೆಯ ವೀಡಿಯೊ ಕೂಡ ಈ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಆನ್ ಲೈನ್ ಹಾಗೂ ಸ್ಥಳೀಯ ರಾಜಕೀಯ ಗುಂಪುಗಳಿಂದ ತೀವ್ರ ಟೀಕೆಗೆ ಗುರಿಯಾಗಿತ್ತು.
ಅನಂತರ ಆಟೋ ರಿಕ್ಷಾ ಚಾಲಕ ಈ ಹಿಂದೆ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾದ ಓರ್ವ ವ್ಯಕ್ತಿ ಹಾಗೂ ಅವರ ಸಹೋದರಿಯೊಂದಿಗೆ ಬಹಿರಂಗವಾಗಿ ಕ್ಷಮೆ ಯಾಚಿಸುವಂತೆ ಒತ್ತಾಯಿಸಲಾಗಿತ್ತು. ರಾಜ್ಯದ ಭಾಷೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಅವಮಾನಿಸಿರುವುದಕ್ಕಾಗಿ ರಾಜ್ಯದ ಕ್ಷಮೆ ಯಾಚಿಸುವಂತೆ ಬಲವಂತಪಡಿಸಲಾಗಿತ್ತು.
ಸ್ಥಳದಲ್ಲಿದ್ದ ಶಿವಸೇನಾ (ಯುಬಿಟಿ) ವಿರಾರ್ ನಗರದ ಮುಖ್ಯಸ್ಥ ಉದ್ಧವ್ ಜಾಧವ್ ಅನಂತರ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.







