ಮದ್ಯ, ಮಾಂಸ ಮಾರಾಟ ನಿಷೇಧಿಸುವ ನಿರ್ಣಯ ಅಂಗೀಕರಿಸಿದ ಅಯೋಧ್ಯೆ ಮಹಾನಗರ ಪಾಲಿಕೆ

Photo | NDTV
ಉತ್ತರಪ್ರದೇಶ: ಅಯೋಧ್ಯೆ ಮತ್ತು ಫೈಝಾಬಾದ್ ನಗರಗಳನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿ ರಾಮ್ ಪಥ್ನ 14 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ನಿಷೇಧಿಸುವ ನಿರ್ಣಯವನ್ನು ಅಯೋಧ್ಯೆ ಮಹಾನಗರ ಪಾಲಿಕೆ ಅಂಗೀಕರಿಸಿದೆ.
ಇದಲ್ಲದೆ ಪಾನ್, ಗುಟ್ಕಾ, ಬೀಡಿ, ಸಿಗರೇಟ್ ಮತ್ತು ಒಳ ಉಡುಪುಗಳ ಜಾಹೀರಾತಿಗೂ ನಿರ್ಬಂಧವನ್ನು ವಿಧಿಸಲಾಗಿದೆ. ರಾಮ ಮಂದಿರ ರಾಮ್ ಪಥ್ನಲ್ಲಿದೆ. ಹೊಸದಾಗಿ ಅಂಗೀಕರಿಸಲ್ಪಟ್ಟ ನಿರ್ಣಯವು ಫೈಝಾಬಾದ್ ನಗರ ಪ್ರದೇಶಗಳನ್ನು ಒಳಗೊಂಡಂತೆ ಇಡೀ ರಾಮ್ ಪಥ್ಗೆ ಅನ್ವಯವಾಗಲಿದೆ.
ಅಯೋಧ್ಯೆ ಮೇಯರ್ ಗಿರೀಶ್ ತ್ರಿಪಾಠಿ ಗುರುವಾರ ಈ ಕುರಿತ ನಿರ್ಧಾರವನ್ನು ಪ್ರಕಟಿಸಿದರು. ಮೇಯರ್, ಉಪಮೇಯರ್ ಮತ್ತು 12 ಕಾರ್ಪೊರೇಟರ್ಗಳನ್ನು ಒಳಗೊಂಡ ಅಯೋಧ್ಯೆ ಮುನ್ಸಿಪಲ್ ಕಾರ್ಪೊರೇಶನ್ನ ಕಾರ್ಯಕಾರಿ ಸಮಿತಿಯು ಮದ್ಯ ಮತ್ತು ಮಾಂಸ ಮಾರಾಟವನ್ನು ನಿಷೇಧಿಸುವ ನಿರ್ಣಯವನ್ನು ಅಂಗೀಕರಿಸಿತು ಎಂದು ಹೇಳಿದರು.
ನಿರ್ಣಯದಿಂದಾಗಿ ಪ್ರಸ್ತುತ ಈ ಭಾಗದಲ್ಲಿ ಮಾಂಸ ಮತ್ತು ಮದ್ಯ ಮಾರಾಟ ಮಾಡುವ ಹಲವಾರು ಮಳಿಗೆಗಳು ಬಂದ್ ಆಗಲಿವೆ.





