Ayodhya Ram Mandir ದೇಣಿಗೆ ಅಕ್ರಮ ಆರೋಪ: ಸ್ವತಂತ್ರ ತನಿಖೆಗೆ ಆಗ್ರಹಿಸಿ ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಪತ್ರ

Photo | PTI
ಹೊಸದಿಲ್ಲಿ, ಜು. 19: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಭಕ್ತರು ನೀಡಿದ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಆರೋಪ ಕುರಿತು ತಕ್ಷಣ ಸ್ವತಂತ್ರ ಹಾಗೂ ಸಮಗ್ರ ತನಿಖೆಗೆ ಆದೇಶಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಈ ವಿಚಾರದಲ್ಲಿ ಪ್ರಧಾನಿಯವರ ಮೌನ ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
ಶನಿವಾರ ಪ್ರಧಾನಿ ಮೋದಿಗೆ ಬರೆದಿರುವ ಪತ್ರದಲ್ಲಿ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಹಾಗೂ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ವಿಶ್ವಾಸಾರ್ಹತೆ ಈ ಆರೋಪಗಳ ಬಗ್ಗೆ ಎಷ್ಟು ಪಾರದರ್ಶಕವಾಗಿ ಮತ್ತು ತ್ವರಿತವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದು ತಿಳಿಸಿದ್ದಾರೆ. ದೇಣಿಗೆ ದುರ್ಬಳಕೆಯ ಆರೋಪದ ಮೊತ್ತ ಸಾವಿರಾರು ಕೋಟಿ ರೂ.ಗಳಿಗೆ ತಲುಪಿದೆ ಎಂದು ಹೇಳಿರುವ ಅವರು, ಈ ಬೆಳವಣಿಗೆಯನ್ನು ದೇಶದ ಜನರು ಗಮನಿಸುತ್ತಿದ್ದಾರೆ ಎಂದಿದ್ದಾರೆ.
ಭಕ್ತಿ, ನಂಬಿಕೆ ಮತ್ತು ವಿಶ್ವಾಸದಿಂದ ಲಕ್ಷಾಂತರ ಭಕ್ತರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆಯಾಗಿ ನೀಡಿದ್ದು, ಆ ಭಕ್ತರ ವಿಶ್ವಾಸಕ್ಕೆ ದ್ರೋಹವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಸಂಸತ್ತಿನಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಚನೆಯನ್ನು ಪ್ರಧಾನಿ ಮೋದಿ ಘೋಷಿಸಿದ್ದರು ಎಂಬುದನ್ನು ಅವರು ನೆನಪಿಸಿದ್ದಾರೆ.
‘ಆದರೆ ಟ್ರಸ್ಟ್ನ ಸದಸ್ಯರನ್ನು ನಿಮ್ಮ ಸರಕಾರವೇ ನೇಮಕ ಮಾಡಿದೆ. ಟ್ರಸ್ಟ್ನ ಸದಸ್ಯರು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS), ವಿಶ್ವ ಹಿಂದೂ ಪರಿಷತ್ (VHP) ಹಾಗೂ ಅದರ ಅಂಗಸಂಸ್ಥೆಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬುದು ಸಾರ್ವಜನಿಕವಾಗಿ ತಿಳಿದಿರುವ ವಿಷಯ. ಟ್ರಸ್ಟ್ ನ ಅವಮಾನಿತ ಮಾಜಿ ಪ್ರಧಾನ ಕಾರ್ಯದರ್ಶಿಯೂ ನಿಮ್ಮ ಆಪ್ತರಾಗಿದ್ದರು’ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.
‘ಇಂತಹ ಗಂಭೀರ ಆರೋಪದ ಸಂದರ್ಭದಲ್ಲಿ ನಿಮ್ಮ ಮೌನ ಸ್ವೀಕಾರಾರ್ಹವಲ್ಲ. ಹೊಣೆಗಾರಿಕೆಯನ್ನು ನಿಗದಿಪಡಿಸಿ, ದುರ್ಬಳಕೆಯಾದ ಹಣವನ್ನು ಮರಳಿ ಪಡೆಯುವಂತೆ ನೋಡಿಕೊಳ್ಳುವುದು ನಿಮ್ಮ ಕರ್ತವ್ಯ’ ಎಂದು ಅವರು ಹೇಳಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂಬ ಕಾಂಗ್ರೆಸ್ ನ ಆರೋಪವನ್ನೂ ಪುನರುಚ್ಚರಿಸಿದ್ದಾರೆ.
ಟ್ರಸ್ಟ್ ನ ಹಣಕಾಸಿನ ವ್ಯವಹಾರಗಳ ಕುರಿತು ನಗದು, ಚಿನ್ನ, ಬೆಳ್ಳಿ ಸೇರಿದಂತೆ ಎಲ್ಲ ರೀತಿಯ ಕಾಣಿಕೆಗಳ ನಿರ್ವಹಣೆಯನ್ನು ಒಳಗೊಂಡಂತೆ ತಕ್ಷಣ ಸ್ವತಂತ್ರ ಮತ್ತು ಸಮಗ್ರ ತನಿಖೆಗೆ ಆದೇಶಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಜೊತೆಗೆ, ತನಿಖೆಯ ವರದಿ ಮತ್ತು ಟ್ರಸ್ಟ್ ನ ಲೆಕ್ಕಪತ್ರಗಳನ್ನು ಸಾರ್ವಜನಿಕಗೊಳಿಸಬೇಕು. ಪ್ರತಿಯೊಬ್ಬ ಭಕ್ತರೂ ತಮ್ಮ ಕಾಣಿಕೆಯನ್ನು ಹೇಗೆ ಬಳಸಲಾಗಿದೆ ಎಂಬುದನ್ನು ತಿಳಿದುಕೊಳ್ಳುವಂತಾಗಬೇಕು. ತನಿಖೆಯಲ್ಲಿ ತಪ್ಪಿತಸ್ಥರೆಂದು ಕಂಡುಬರುವ ಎಲ್ಲರನ್ನೂ ಅವರ ಹುದ್ದೆ ಅಥವಾ ಪ್ರಭಾವವನ್ನು ಲೆಕ್ಕಿಸದೆ ಕಾನೂನಿನ ಪ್ರಕಾರ ಹೊಣೆಗಾರರನ್ನಾಗಿ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.






