ಅಯೋಧ್ಯೆ ತೀರ್ಪು ಕುರಿತು ಮತ್ತೆ ಚರ್ಚೆ : ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದ ಮಾಜಿ ಸಿಜೆಐ ಡಿ.ವೈ. ಚಂದ್ರಚೂಡ್ ಹೇಳಿಕೆ

ಹೊಸದಿಲ್ಲಿ: 2019ರ ಅಯೋಧ್ಯೆ ತೀರ್ಪು ಮತ್ತೆ ಚರ್ಚೆಗೆ ಗ್ರಾಸವಾಗಿದೆ. ದೇಶದ ದೀರ್ಘಕಾಲದ ವಿವಾದಕ್ಕೆ ಅಂತಿಮ ಉತ್ತರ ಸಿಕ್ಕಂತೆಯೇ ಕಂಡಿದ್ದ ತೀರ್ಪಿನ ಪ್ರಾಮಾಣಿಕತೆ ಕುರಿತು ಪ್ರಶ್ನೆಗಳು ಉದ್ಭವಿಸಿದೆ. ಮಾಜಿ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಬಾಬರಿ ಮಸೀದಿ ಕುರಿತು ನೀಡಿರುವ ಹೇಳಿಕೆ ಬಗ್ಗೆ ಮಾಜಿ ನ್ಯಾಯಾಧೀಶರು, ಕಾನೂನು ತಜ್ಞರು ಮತ್ತು ರಾಜಕಾರಣಿಗಳು ಪ್ರಶ್ನೆಯನ್ನೆತ್ತಿದ್ದಾರೆ.
ಬಾಬರಿ ಮಸೀದಿ ನಿರ್ಮಾಣವನ್ನು ಮಾಜಿ ನ್ಯಾಯಮೂರ್ತಿ ಚಂದ್ರಚೂಡ್ ಅವರು ʼಮೂಲಭೂತವಾಗಿ ಅಪವಿತ್ರ ಕೃತ್ಯʼ ಎಂದು ಹೇಳಿದ್ದರು. ಈ ಹೇಳಿಕೆ ಗಮನಾರ್ಹವಾಗಿದೆ. ಏಕೆಂದರೆ 2019ರ ತೀರ್ಪಿನಲ್ಲಿ ಐವರು ನ್ಯಾಯಮೂರ್ತಿಗಳ ಪೀಠವು, ʼಮಸೀದಿಯನ್ನು ದೇವಾಲಯ ಕೆಡವಿ ನಿರ್ಮಿಸಿರುವುದಕ್ಕೆ ಸಾಕ್ಷಿ ಇಲ್ಲʼವೆಂದು ಹೇಳಿತ್ತು. ಆದರೆ ಭೂಮಿಯನ್ನು ರಾಮಮಂದಿರ ನಿರ್ಮಾಣಕ್ಕೆ ನೀಡುವಂತೆ ಆದೇಶಿಸಿತ್ತು. ತೀರ್ಪಿನಲ್ಲಿ ಹೇಳಿರುವ ವಿಚಾರಗಳು ಮತ್ತು ಈಗ ಮಾಜಿ ಸಿಜೆಐ ಹೇಳಿರುವ ಮಾತುಗಳು ವಿವಾದಕ್ಕೆ ಕಾರಣವಾಗಿವೆ.
ಇದಕ್ಕೂ ಮೊದಲು ಮಂಗಳೂರಿನಲ್ಲಿ ನಡೆದ ಬಿ.ವಿ. ಕಕ್ಕಿಲಾಯ ಸ್ಮಾರಕ ಉಪನ್ಯಾಸದಲ್ಲಿ ಅಲಹಾಬಾದ್ ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ಗೋವಿಂದ್ ಮಥುರ್ ಅವರು ಮಾತನಾಡಿ, ಅಯೋಧ್ಯೆ ವಿವಾದವು ಮೂಲತಃ ಸಿವಿಲ್ ಮೊಕದ್ದಮೆಯಾಗಿದೆ. ಸಿವಿಲ್ ಮೊಕದ್ದಮೆಯಲ್ಲಿ ಪ್ರತಿಯೊಂದು ವಿಷಯಕ್ಕೂ ತೀರ್ಪು ಬರಬೇಕು. ಆದರೆ ಇದು ಸರಿಯಾಗಿ ಆಗಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
2010ರಲ್ಲಿ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡುವಾಗ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡದಿರುವುದನ್ನು ಒಪ್ಪಿಕೊಂಡಿತ್ತು. ಆದರೆ, ಸುಪ್ರೀಂ ಕೋರ್ಟ್ ಪ್ರತಿಯೊಂದು ವಿಚಾರವನ್ನು ಸಿವಿಲ್ ಮೊಕದ್ದಮೆಯಡಿ ನಿರ್ಣಯಿಸಬೇಕಿತ್ತು ಎಂದು ಮಥುರ್ ಅಭಿಪ್ರಾಯಪಟ್ಟಿದ್ದಾರೆ.
ನ್ಯಾಯಮೂರ್ತಿ ಮಾಥುರ್ ಅವರ ಪ್ರಕಾರ, ಸುಪ್ರೀಂ ಕೋರ್ಟ್ ಅಯೋಧ್ಯೆ ಪ್ರಕರಣದಲ್ಲಿ ಮೂಲಭೂತ ವಿಚಾರಗಳನ್ನು ಪರಿಶೀಲಿಸದೆ ಭಾವನೆಗಳ ಆಧಾರದಲ್ಲಿ ತೀರ್ಪನ್ನು ನೀಡಿದೆ. ಸುಪ್ರೀಂ ಕೋರ್ಟ್ ನಿಜವಾದ ವಿವಾದವನ್ನು ಸ್ಪರ್ಶಿಸದೆ, ವಿವಾದವನ್ನು ಪರಿಹರಿಸಿದೆ.
ಅಯೋಧ್ಯೆಯ ಬಾಬರಿ ಮಸೀದಿ ವಿವಾದ ಕುರಿತಾಗಿ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೀಡಿದ ಇತ್ತೀಚಿನ ಹೇಳಿಕೆಗಳ ಹಿನ್ನೆಲೆ 2019ರ ಅಯೋಧ್ಯೆ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಕ್ಯುರೇಟಿವ್ ಅರ್ಜಿ ಸಲ್ಲಿಸಬೇಕಾಗಬಹುದು ಎಂದು ಕಾನೂನು ತಜ್ಞ ಹಾಗೂ ಪ್ರಾಧ್ಯಾಪಕ ಜಿ. ಮೋಹನ್ ಗೋಪಾಲ್ ಹೇಳಿದ್ದಾರೆ.
ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ನಡೆದ ಸಿಎಚ್ ಮುಹಮ್ಮದ್ ಕೋಯಾ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಪ್ರೊ. ಗೋಪಾಲ್, ನ್ಯಾಯಾಲಯದ ತೀರ್ಪು ವಿಶ್ವಾಸಾರ್ಹವಾಗಿರಬೇಕು. ನನ್ನ ಅಭಿಪ್ರಾಯದಲ್ಲಿ ಅಯೋಧ್ಯೆ ತೀರ್ಪು ತಪ್ಪಾಗಿದೆ. ಚಂದ್ರಚೂಡ್ ಅವರ ಹೇಳಿಕೆಗಳ ಆಧಾರದ ಮೇಲೆ ನಾವು ಕ್ಯುರೇಟಿವ್ ಅರ್ಜಿ ಸಲ್ಲಿಸಬೇಕೇ ಎಂಬ ಪ್ರಶ್ನೆ ಎದುರಾಗಿದೆ. ಬಹುಶಃ ಸಲ್ಲಿಸಬೇಕಾಗಬಹುದು” ಎಂದು ಅಭಿಪ್ರಾಯಪಟ್ಟರು.
“ಈ ವಿಷಯವನ್ನು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬಳಸಬೇಕು. ಜನರಿಗೆ ನಿಜವಾಗಿ ಏನಾಯಿತು ಎಂಬುದನ್ನು ತಿಳಿಸಲು ಮತ್ತು ಮರು ವಿಚಾರಣೆಗೆ ಒತ್ತಾಯಿಸಲು ಇದು ಸೂಕ್ತ ಸಂದರ್ಭವಾಗಿದೆ” ಎಂದು ಅವರು ಹೇಳಿದ್ದಾರೆ.
ಅಯೋಧ್ಯೆ ತೀರ್ಪಿನಲ್ಲಿ, ದೇವಾಲಯ ಕೆಡವಿರುವುದಕ್ಕೆ ಸಾಕ್ಷಿ ಇಲ್ಲವೆಂದು ಹೇಳಿದ ಅದೇ ನ್ಯಾಯಮೂರ್ತಿ ಈಗ ಮಸೀದಿಯ ನಿರ್ಮಾಣವನ್ನು ʼಅಪವಿತ್ರ ಕೃತ್ಯʼ ಎಂದು ಹೇಳಿದ್ದಾರೆ. ಈ ವ್ಯತ್ಯಾಸವು ತೀರ್ಪಿನ ವಿಶ್ವಾಸಾರ್ಹತೆಯನ್ನು ಕುಂದಿಸುವುದಷ್ಟೇಯಲ್ಲ. ನ್ಯಾಯಾಂಗದ ಮೇಲಿನ ಜನರ ನಂಬಿಕೆಯನ್ನು ದುರ್ಬಲಗೊಳಿಸುವ ಅಪಾಯವಿದೆ ಎಂದು ಹೇಳಿದರು.
ನ್ಯಾಯಾಲಯದ ಅಂತಿಮ ಜವಾಬ್ದಾರಿಯೆಂದರೆ ಜನರಲ್ಲಿ ನಂಬಿಕೆ ಮೂಡಿಸುವ ತೀರ್ಪುಗಳನ್ನು ನೀಡುವುದು. ನ್ಯಾಯ ಸಿಗಬೇಕು. ವಿಶೇಷವಾಗಿ ಪ್ರಕರಣದಲ್ಲಿ ಸೋತವರಿಗೆ ನ್ಯಾಯ ಸಿಗಬೇಕು . ವೈಯಕ್ತಿಕ ಅಭಿಪ್ರಾಯದಲ್ಲಿ ಅಯೋಧ್ಯೆ ತೀರ್ಪು ʼತಪ್ಪಾಗಿ ನಿರ್ಧರಿಸಲ್ಪಟ್ಟಿದೆʼ ಎಂದು ಹೇಳಿದರು.
ಈ ತೀರ್ಪನ್ನು ಕಲ್ಪಿತ ಮತ್ತು ವಿವೇಚನಾರಹಿತ ಎಂದು ಬಣ್ಣಿಸಿದ ಪ್ರೊ.ಗೋಪಾಲ್, ತೀರ್ಪಿನೊಂದಿಗೆ ಸಹಿ ಮಾಡದ ಹೆಚ್ಚುವರಿ ಟಿಪ್ಪಣಿಯನ್ನು ʼಶುದ್ಧ ದೇವಪ್ರಭುತ್ವʼ ಎಂದು ಕರೆದರು. ನ್ಯಾಯಾಂಗದಲ್ಲಿ ಸಿದ್ಧಾಂತದಲ್ಲಿ ಪಾರದರ್ಶಕತೆ ಅತ್ಯಗತ್ಯ ಎಂದು ಹೇಳಿದರು. ಉದಾಹರಣೆಗೆ ನ್ಯಾಯಮೂರ್ತಿ ಚಿನ್ನಪ್ಪ ರೆಡ್ಡಿ ಒಮ್ಮೆ ತಮ್ಮನ್ನು ತಾವು ಮಾರ್ಕ್ಸಿಸ್ಟ್ ಎಂದು ಬಹಿರಂಗವಾಗಿ ಘೋಷಿಸಿಕೊಂಡಿದ್ದರು. ಇಡಬ್ಲ್ಯೂಎಸ್ ಕೋಟಾದಂತಹ ಇತ್ತೀಚಿನ ಪ್ರಕರಣಗಳಲ್ಲಿಯೂ ನ್ಯಾಯಮೂರ್ತಿಗಳು ತಮ್ಮ ಪ್ರಾಥಮಿಕ ಸಂದೇಹಗಳನ್ನು ಬಹಿರಂಗಪಡಿಸಿದ್ದರು ಎಂದು ಅವರು ನೆನಪಿಸಿದರು.
ಬಾಬರಿ ಮಸೀದಿ ನಿರ್ಮಾಣದ ಬಗ್ಗೆ ನ್ಯಾಯಮೂರ್ತಿ ಚಂದ್ರಚೂಡ್ ಅವರಿಗೆ ಅಂತಹ ನಂಬಿಕೆ ಇದ್ದರೆ, ಅವರು ಪ್ರಕರಣದಿಂದ ಹಿಂದೆ ಸರಿಯಬೇಕಿತ್ತು.ಇಲ್ಲದಿದ್ದರೆ, ಇದು ಪೀಠದ ಸಮಗ್ರತೆ ಮತ್ತು ಪಾರದರ್ಶಕತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಮೋಹನ್ ಗೋಪಾಲ್ ಹೇಳಿದರು.
2019ರ ಅಯೋಧ್ಯೆ ತೀರ್ಪನ್ನು ಹಲವು ವರ್ಷಗಳ ವಿವಾದಕ್ಕೆ ತೆರೆ ಎಂದು ಹೇಳಲಾಗಿತ್ತು. ಆದರೆ ಚಂದ್ರಚೂಡ್ ಅವರ ಇತ್ತೀಚಿನ ಹೇಳಿಕೆಯಿಂದ ಇದೀಗ ಮತ್ತೆ ಚರ್ಚೆಯ ಕೇಂದ್ರ ಬಿಂದುವಾಗಿದೆ.







