ಉತ್ತರ ಪ್ರದೇಶ| ಇಸೋಟಾ ಗ್ರಾಮಕ್ಕೆ ತೆರಳದಂತೆ ಚಂದ್ರಶೇಖರ್ ಆಝಾದ್ಗೆ ಪೊಲೀಸರಿಂದ ತಡೆ

Photo | NDTV
ಪ್ರಯಾಗ್ರಾಜ್ : ನಾಗಿನಾ ಕ್ಷೇತ್ರದ ಸಂಸದ ಚಂದ್ರಶೇಖರ್ ಆಝಾದ್ ಅವರಿಗೆ ಇಸೋಟಾ ಗ್ರಾಮಕ್ಕೆ ತೆರಳದಂತೆ ಪೊಲೀಸರು ತಡೆದಿದ್ದಾರೆ. ಇದರಿಂದ ಕೋಪಗೊಂಡ ಚಂದ್ರಶೇಖರ್ ಆಝಾದ್ ಅವರ ಬೆಂಬಲಿಗರು ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಹಾನಿಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇಸೋಟಾ ಗ್ರಾಮದ ನಿವಾಸಿ ದಲಿತ ರೈತ ದೇವಿಶಂಕರ್ ಎಂಬವರನ್ನು ಕೊಲೆಗೈದು ಸುಟ್ಟು ಹಾಕಲಾಗಿದೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದರು. ಈ ಹಿನ್ನೆಲೆ ಚಂದ್ರಶೇಖರ್ ಅವರು ಇಸೋಟಾ ಗ್ರಾಮಕ್ಕೆ ತೆರಳಿ ಅವರ ಕುಟುಂಬಸ್ಥರನ್ನು ಭೇಟಿ ಮಾಡಲು ಮುಂದಾಗಿದ್ದರು. ಆದರೆ ಪೊಲೀಸರು ಅವರನ್ನು ತಡೆದಿದ್ದಾರೆ.
́ಚಂದ್ರಶೇಖರ್ ಅವರು ಇಸೋಟಾ ಗ್ರಾಮಕ್ಕೆ ಬರುವ ಬಗ್ಗೆ ಮಾಹಿತಿ ತಿಳಿದ ಆಝಾದ್ ಸಮಾಜ್ ಪಾರ್ಟಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಚಂದ್ರಶೇಖರ್ ಅವರಿಗೆ ಗ್ರಾಮಕ್ಕೆ ಬರಲು ಅವಕಾಶ ನೀಡಿಲ್ಲ ಎಂದು ತಿಳಿದಾಗ ಆಕ್ರೋಶಗೊಂಡ ಕಾರ್ಯಕರ್ತರು ಕಲ್ಲು ತೂರಾಟ ನಡೆಸಲು ಪ್ರಾರಂಭಿಸಿದರು. ಗುಂಪೊಂದು ಪೊಲೀಸ್ ವಾಹನವನ್ನು ಹಾನಿಗೊಳಿಸಿದೆʼ ಎಂದು ಯಮುನಾ ನಗರ ಡಿಸಿಪಿ ವಿವೇಕ್ ಚಂದ್ರ ಯಾದವ್ ಹೇಳಿದ್ದಾರೆ.





