ಬಾಬಾ ಸಿದ್ದೀಕಿ ಹತ್ಯೆ ಪ್ರಕರಣ: ಅನ್ಮೋಲ್ ಬಿಷ್ಣೋಯಿ ಭಾರತಕ್ಕೆ ಗಡೀಪಾರು

PC: x.com/the_hindu
ಹೊಸದಿಲ್ಲಿ: ಎನ್ಸಿಪಿ ಮುಖಂಡ ಬಾಬಾ ಸಿದ್ದೀಕಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಅನ್ಮೋಲ್ ಬಿಷ್ಣೋಯಿಯನ್ನು ಅಮೆರಿಕದಿಂದ ಭಾರತಕ್ಕೆ ಗಡೀಪಾರು ಮಾಡಲಾಗಿದೆ. ಈ ಬಗ್ಗೆ ಅಧಿಕೃತ ದೃಢೀಕರಣ ಬಂದಿಲ್ಲವಾದರೂ, ಮಂಗಳವಾರ ಆರೋಪಿಯನ್ನು ಅಮೆರಿಕದಿಂದ ಗಡೀಪಾರು ಮಾಡಲಾಗಿದ್ದು, ಬುಧವಾರ ಬೆಳಿಗ್ಗೆ 10 ಗಂಟೆ ವೇಳೆಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಕರೆತರಲಾಗುವುದು ಎಂದು ಉನ್ನತ ಮೂಲಗಳು ಹೇಳಿವೆ. ರಾಷ್ಟ್ರೀಯ ತನಿಖಾ ಸಂಸ್ಥೆ ಗಡೀಪಾರು ಪ್ರಕ್ರಿಯೆಯನ್ನು ಸಂಯೋಜಿಸುತ್ತಿದೆ.
ಅಮೆರಿಕದಿಂದ ಗಡೀಪಾರು ಮಾಡಲಾಗಿರುವ 200 ಮಂದಿ ಅಕ್ರಮ ವಾಸಿಗಳನ್ನು ಹೊತ್ತ ವಿಶೇಷ ವಿಮಾನದಲ್ಲಿ ಬಿಷ್ಣೋಯಿ ಕೂಡಾ ಇದ್ದಾನೆ ಎಂದು ಮೂಲಗಳು ಹೇಳಿದ್ದು, ಭಾರತದ ಪೊಲೀಸರಿಗೆ ಬೇಕಿದ್ದ ಪಂಜಾಬ್ ನ ಇಬ್ಬರು ದೇಶಭ್ರಷ್ಟರು ಕೂಡಾ ಇದರಲ್ಲಿ ಸೇರಿದ್ದಾರೆ ಎನ್ನಲಾಗಿದೆ. ಮೃತ ಬಾಬಾ ಸಿದ್ದೀಕಿ ಅವರ ಮಗ ಝೀಷಾನ್ ಈ ಗಡೀಪಾರನ್ನು ದೃಢಪಡಿಸಿದ್ದು, ಅಮೆರಿಕದ ಹೋಮ್ ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಇ-ಮೇಲ್ ಮೂಲಕ ಅಧಿಕೃತವಾಗಿ ಗಡೀಪಾರನ್ನು ದೃಢಪಡಿಸಿದೆ ಎಂದು ಹೇಳಿದ್ದಾರೆ.
ರಹಸ್ಯ ವೆಬ್ ಆಧರಿತ ಡಿಎಚ್ಎಸ್-ವಿಐಎನ್ಇ ಎಂಬ ವ್ಯವಸ್ಥೆ ಮೂಲಕ ಈ ಇ-ಮೇಲ್ ಕಳುಹಿಸಲಾಗಿದ್ದು, ಅಮೆರಿಕದ ವಶದಲ್ಲಿರುವ ಅಕ್ರಮ ವಲಸೆಯವರು ಎಸಗಿದ ಅಪರಾಧಗಳಿಂದ ಸಂತ್ರಸ್ತರಾಗಿ ನೋಂದಾಯಿತರಾದವರಿಗೆ ಅಧಿಕೃತ ಅಧಿಸೂಚನೆಯನ್ನು ಈ ವ್ಯವಸ್ಥೆ ಮೂಲಕ ಕಳುಹಿಸಲಾಗುತ್ತದೆ.
ಬಿಷ್ಣೋಯಿ ಚಲನ ವಲನಗಳ ಬಗ್ಗೆ ಮುಂಬೈ ಪೊಲೀಸರಿಂದ ಯಾವುದೇ ಮಾಹಿತಿ ದೊರಕದ ಹಿನ್ನೆಲೆಯಲ್ಲಿ ಝೀಷಾನ್ ಸಿದ್ದೀಕಿ ಅವರು ಅಮೆರಿಕದ ಅಧಿಕಾರಿಗಳಿಂದ ಮಾಹಿತಿ ಕೋರಿದ್ದರು. ಅಮೆರಿಕದ ಫೆಡರಲ್ ಸರ್ಕಾರ ಅನ್ಮೋಲ್ ಬಿಷ್ಣೋಯಿಯನ್ನು ಅಮೆರಿಕದ ನೆಲದಿಂದ ಕಳುಹಿಸಿದೆ ಎಂಬ ಮಾಹಿತಿಯನ್ನು ಒಳಗೊಂಡ ಇ-ಮೇಲ್ ಸಂದೇಶವನ್ನು ಸಿದ್ದೀಕಿ ಹಂಚಿಕೊಂಡಿದ್ದಾರೆ.







