ಬಾಬರಿ ಧ್ವಂಸದ ಬಗ್ಗೆ ದುಃಖ, ಸಿಖ್ ಹತ್ಯಾಕಾಂಡ–ಗೋದ್ರಾ ದುರಂತದ ಬಗ್ಗೆ ಮೌನವೇಕೆ?: ಸೋನಿಯಾ ಗಾಂಧಿ ಪ್ರಶ್ನಿಸಿದ ಬಿಜೆಪಿ

ಸೋನಿಯಾ ಗಾಂಧಿ | Photo Credit : PTI
ಹೊಸದಿಲ್ಲಿ: ಬಾಬರಿ ಮಸೀದಿ ಧ್ವಂಸದ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, 1984ರ ಸಿಖ್ ವಿರೋಧಿ ದಂಗೆ ಮತ್ತು 2002ರ ಗೋದ್ರಾ ರೈಲು ದುರಂತದ ಬಗ್ಗೆಯೂ ಇದೇ ರೀತಿಯ ವಿಷಾದವನ್ನು ಏಕೆ ವ್ಯಕ್ತಪಡಿಸಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ.
ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆಯಲ್ಲಿ ಪ್ರಾಮಾಣಿಕತೆಯ ಕೊರತೆಯಿದೆ ಎಂದು ಆರೋಪಿಸಿರುವ ಅವರು, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ನಡೆದ ಪ್ರಮುಖ ಘಟನೆಗಳ ಪೈಕಿ ಕೆಲವನ್ನು ಮಾತ್ರ ಉಲ್ಲೇಖಿಸಿ, ಇನ್ನು ಕೆಲವು ಘಟನೆಗಳ ಬಗ್ಗೆ ಮೌನ ನಿಲುವು ತಾಳಿದ್ದಾರೆ ಎಂದು ಟೀಕಿಸಿದ್ದಾರೆ.
“ಪ್ರತಿಯೊಬ್ಬರಿಗೂ ತಮ್ಮ ಜೀವನದ ಬಗ್ಗೆ ಪುಸ್ತಕ ಬರೆಯುವ ಹಕ್ಕಿದೆ. ಆದರೆ, ಅಂತಹ ಪುಸ್ತಕದಲ್ಲಿ ಸ್ವಲ್ಪವಾದರೂ ಪ್ರಾಮಾಣಿಕತೆ ಇರಬೇಕು. ಈ ಪುಸ್ತಕದಲ್ಲಿ ಅದು ಕಾಣಿಸುತ್ತಿಲ್ಲ” ಎಂದು ತಮ್ಮ ಲೋಕಸಭಾ ಕ್ಷೇತ್ರ ಪಾಟ್ನಾ ಸಾಹಿಬ್ನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಇಂದಿರಾ ಗಾಂಧಿ ಹತ್ಯೆಯ ಬಳಿಕ 1984ರಲ್ಲಿ ದಿಲ್ಲಿಯಲ್ಲಿ ಸಾವಿರಾರು ಸಿಖ್ಖರ ಹತ್ಯೆ ನಡೆದಿತ್ತು. ಈ ದುರಂತದ ಬಗ್ಗೆ ಸೋನಿಯಾ ಗಾಂಧಿ ಏಕೆ ಕಣ್ಣೀರು ಹಾಕಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಸಿಖ್ ವಿರೋಧಿ ದಂಗೆಯ ಹಲವು ಸಂತ್ರಸ್ತರ ಪರವಾಗಿ ವಕೀಲರಾಗಿ ಕಾರ್ಯನಿರ್ವಹಿಸಿದ್ದನ್ನು ಸ್ಮರಿಸಿದ ಅವರು, ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರ ವಿವಾದಾತ್ಮಕ ಹೇಳಿಕೆಯನ್ನೂ ಉಲ್ಲೇಖಿಸಿದ್ದಾರೆ. “ದೊಡ್ಡ ಮರವೊಂದು ಉರುಳಿ ಬಿದ್ದಾಗ ನೆಲ ಅಲುಗಾಡುತ್ತದೆ” ಎಂಬ ಹೇಳಿಕೆಯನ್ನು ರಾಜೀವ್ ಗಾಂಧಿ ನೀಡಿದ್ದರು ಎಂದು ನೆನಪಿಸಿದ್ದಾರೆ.
2002ರ ಗುಜರಾತ್ ಗಲಭೆಗಳನ್ನು ನಿಭಾಯಿಸಿದ ರೀತಿಯನ್ನು ಸೋನಿಯಾ ಗಾಂಧಿ ಟೀಕಿಸಿರುವುದಕ್ಕೂ ರವಿಶಂಕರ್ ಪ್ರಸಾದ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗೋದ್ರಾದಲ್ಲಿ ಸಾಬರಮತಿ ಎಕ್ಸ್ಪ್ರೆಸ್ ರೈಲಿನ ಬೋಗಿಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಸುಮಾರು 60 ಕರಸೇವಕರು ಮೃತಪಟ್ಟಿದ್ದರು. ಈ ಘಟನೆಯ ಬಗ್ಗೆ ಸೋನಿಯಾ ಗಾಂಧಿ ಏಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಶಾ ಬಾನೊ ಪ್ರಕರಣದಲ್ಲೂ ರಾಜೀವ್ ಗಾಂಧಿ ಅವರನ್ನು ಸೋನಿಯಾ ಗಾಂಧಿ ಬಲವಾಗಿ ಟೀಕಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ. ವಿಚ್ಛೇದಿತ ಮುಸ್ಲಿಂ ಮಹಿಳೆಗೆ ಜೀವನಾಂಶ ನೀಡುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ರಾಜೀವ್ ಗಾಂಧಿ ನೇತೃತ್ವದ ಸರ್ಕಾರ ಕಾನೂನು ರೂಪಿಸುವ ಮೂಲಕ ಅಸಿಂಧುಗೊಳಿಸಿತ್ತು ಎಂಬುದನ್ನೂ ಪ್ರಸ್ತಾಪಿಸಿದ್ದಾರೆ.
ಸೋನಿಯಾ ಗಾಂಧಿ ಅವರ 526 ಪುಟಗಳ ಆತ್ಮಚರಿತ್ರೆ 'Belonging: A Journey of Love' ಮಂಗಳವಾರ ಭಾರತದಲ್ಲಿ ಬಿಡುಗಡೆಯಾಗಿದೆ.






