ಮುಂಬೈ ವಿಮಾನ ನಿಲ್ದಾಣದಲ್ಲಿ ಪ್ರತಿಕೂಲ ಹವಾಮಾನ: ರನ್ ವೇಗೆ ತಾಕಿದ ಇಂಡಿಗೊ ವಿಮಾನದ ಬಾಲ

ಸಾಂದರ್ಭಿಕ ಚಿತ್ರ|PC : Reuters
ಮುಂಬೈ: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣದಲ್ಲಿನ ಪ್ರತಿಕೂಲ ಹವಾಮಾನದಿಂದಾಗಿ, ಇಂಡಿಗೊ ವಿಮಾನ ಯಾನ ಸಂಸ್ಥೆಯ ವಿಮಾನವೊಂದು ಭೂಸ್ಪರ್ಶ ಮಾಡುವಾಗ, ಅದರ ಬಾಲ ರನ್ ವೇಗೆ ತಾಕಿರುವ ಘಟನೆ ಶನಿವಾರ ನಡೆದಿದೆ ಎಂದು ವರದಿಯಾಗಿದೆ.
ಬ್ಯಾಂಕಾಕ್ ನಿಂದ ಮುಂಬೈಗೆ ಆಗಮಿಸಿದ ವಿಮಾನ ವಿಮಾನ ಭೂಸ್ಪರ್ಶ ಮಾಡಿದಾಗ ಅದರ ಬಾಲ ರನ್ ವೇಗೆ ತಾಕಿದೆ.
ಈ ಕುರಿತು ಪ್ರತಿಕ್ರಿಯಿಸಿದ ಇಂಡಿಗೊ ವಿಮಾನ ಯಾನ ಸಂಸ್ಥೆಯ ವಕ್ತಾರರು, “ಮುಂಬೈನಲ್ಲಿನ ಪ್ರತಿಕೂಲ ಹವಾಮಾನದಿಂದಾಗಿ ಕಡಿಮೆ ಎತ್ತರದಲ್ಲಿ ಹಾರಾಡುತ್ತಿದ್ದ ಇಂಡಿಗೊ ಏರ್ ವಿಮಾನದ ಬಾಲವು ಆಗಸ್ಟ್ 16, 2025ರಂದು ರನ್ ವೇಗೆ ತಾಕಿದೆ. ಇದಾದ ನಂತರ, ವಿಮಾನವನ್ನು ಮತ್ತೊಂದು ದಿಕ್ಕಿಗೆ ಕರೆದೊಯ್ದು, ಸುರಕ್ಷಿತವಾಗಿ ಭೂಸ್ಪರ್ಶ ಮಾಡಿಸಲಾಯಿತು” ಎಂದು ಹೇಳಿದ್ದಾರೆ.
“ಪ್ರಮಾಣೀಕೃತ ಶಿಷ್ಟಾಚಾರದ ಪ್ರಕಾರ, ವಿಮಾನವು ಮತ್ತೆ ತನ್ನ ಕಾರ್ಯಾಚರಣೆಯನ್ನು ಆರಂಭಿಸುವುದಕ್ಕೂ ಮುನ್ನ, ಅಗತ್ಯವಿರುವ ಪರಿಶೀಲನೆ/ದುರಸ್ತಿ ಹಾಗೂ ಹಾರಾಟಕ್ಕೆ ಅನುಮತಿ ಸಿಗಬೇಕು. ಇಂಡಿಗೊದಲ್ಲಿ ನಮ್ಮ ಗ್ರಾಹಕರು, ಸಿಬ್ಬಂದಿಗಳು ಹಾಗೂ ವಿಮಾನ ನಮ್ಮ ಪ್ರಮುಖ ಆದ್ಯತೆಯಾಗಿದೆ. ಈ ಘಟನೆಯಿಂದ ಭವಿಷ್ಯದಲ್ಲಿ ಆಗಬಹುದಾದ ಪರಿಣಾಮವನ್ನು ತಗ್ಗಿಸಲು ನಾವು ಎಲ್ಲ ಬಗೆಯ ಪ್ರಯತ್ನಗಳನ್ನು ನಡೆಸುತ್ತಿದ್ದೇವೆ” ಎಂದೂ ಅವರು ತಿಳಿಸಿದ್ದಾರೆ.
ಈ ಘಟನೆಯ ಕುರಿತು ಡಿಜಿಸಿಎ ಗೆ ಮಾಹಿತಿ ನೀಡಲಾಗಿದೆ.







