ವಿಧಾನ ಪರಿಷತ್ ಚುನಾವಣೆಯನ್ನು ಭಾರತ-ಪಾಕಿಸ್ತಾನ ಪಂದ್ಯಕ್ಕೆ ಹೋಲಿಸಿದ ಕೇಂದ್ರ ಸಚಿವ ಬಂಡಿ ಸಂಜಯ್: ಕಾಂಗ್ರೆಸ್ ಆಕ್ರೋಶ

Photo Credit: X/@bandisanjay_bjp
ಹೈದರಾಬಾದ್: ಫೆಬ್ರವರಿ 27ರಂದು ತೆಲಂಗಾಣದಲ್ಲಿ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿನ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಸ್ಪರ್ಧೆಯನ್ನು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಬಂಡಿ ಸಂಜಯ್ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಹೋಲಿಸಿದ್ದು, ಈ ಹೇಳಿಕೆಯ ವಿರುದ್ಧ ಆಡಳಿತಾರೂಢ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಕರೀಂನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಇತ್ತೀಚಿನ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತ ತಂಡವು ಅಭಿಮಾನಿಗಳ ಆಸೆಯನ್ನು ಪೂರೈಸಿದಂತೆ, ಪದವೀಧರರು ಹಾಗೂ ಶಿಕ್ಷಕರು ಮತದಾರರಾಗಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅವರ ಆಕಾಂಕ್ಷೆಯನ್ನು ಪೂರೈಸಲಿದೆ” ಎಂದು ಹೇಳಿದ್ದಾರೆ.
“ನಾವು (ಬಿಜೆಪಿ) ಭಾರತ ತಂಡವಾಗಿದ್ದು, ಅವರು (ಕಾಂಗ್ರೆಸ್) ಪಾಕಿಸ್ತಾನ ತಂಡವಾಗಿದ್ದಾರೆ. ಭಾರತದ ಗೆಲುವಿಗೆ ಮತ ಚಲಾಯಿಸಬೇಕೊ, ಅಥವಾ ಪಾಕಿಸ್ತಾನದ ಗೆಲುವಿಗೆ ಮತ ಚಲಾಯಿಸಬೇಕೊ ಎಂಬುದನ್ನು ಮತದಾರರು ನಿರ್ಧರಿಸಬೇಕು” ಎಂದು ಅವರು ಕರೆ ನೀಡಿದ್ದಾರೆ.
ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನ ತಂಡಕ್ಕೆ ಹೀನಾಯ ಸೋಲುಣಿಸಿದಂತೆ, ರಾಜಕೀಯ ಪಂದ್ಯದಲ್ಲಿ ಮತದಾರರು ಬಿಜೆಪಿಯನ್ನು ಬೆಂಬಲಿಸುವ ಮೂಲಕ ಅದೇ ರೀತಿ ಕಾಂಗ್ರೆಸ್ ಪಕ್ಷಕ್ಕೆ ಸೋಲುಣಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಬಂಡಿ ಸಂಜಯ್ ರ ಈ ಹೋಲಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಬಿ.ಮಹೇಶ್ ಕುಮಾರ್ ಗೌಡ್, ರಾಜಕೀಯ ಲಾಭ ಪಡೆಯಲು ಪ್ರತಿ ಚುನಾವಣೆಯಲ್ಲೂ ಕೋಮು ದ್ವೇಷವನ್ನು ಹೆಚ್ಚಿಸುವುದು ಹಾಗೂ ಭಾರತಕ್ಕೆ ಪಾಕಿಸ್ತಾನದೊಂದಿಗೆ ಸಂಬಂಧ ಕಲ್ಪಿಸುವುದು ಬಿಜೆಪಿಗೆ ಸಾಮಾನ್ಯ ಅಭ್ಯಾಸವಾಗಿಬಿಟ್ಟಿದೆ” ಎಂದು ಕಿಡಿ ಕಾರಿದ್ದಾರೆ. ಕ್ರಿಕೆಟ್ ಕೇವಲ ಒಂದು ಕ್ರೀಡೆಯಾಗಿದ್ದು, ಕ್ರಿಕೆಟ್ ಹಾಗೂ ರಾಜಕಾರಣದೊಂದಿಗೆ ಹೇಗೆ ಸಂಬಂಧ ಕಲ್ಪಿಸಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.
“ಕ್ರಿಕೆಟ್ ಅನ್ನು ರಾಜಕೀಯಕ್ಕೆ ಎಳೆದು ತರುವ ಮೂಲಕ ರಾಜಕೀಯ ಲಾಭ ಪಡೆಯಲು ಬಿಜೆಪಿ ನಾಯಕರು ಯತ್ನಿಸುತ್ತಿರುವುದು ನಾಚಿಕೆಗೇಡಾಗಿದೆ” ಎಂದೂ ಅವರು ವಾಗ್ದಾಳಿ ನಡೆಸಿದ್ದಾರೆ.
ಈ ನಡುವೆ, ಫೆಬ್ರವರಿ 27ರಂದು ನಡೆಯಲಿರುವ ಮೂರು ವಿಧಾನ ಪರಿಷತ್ ಚುನಾವಣೆಗಳಿಗೆ ಬಿಜೆಪಿ ಹಾಗೂ ಬಿ ಆರ್ ಎಸ್ ನಡುವೆ ಒಳ ಒಪ್ಪಂದವಾಗಿದೆ ಎಂದು ಸೋಮವಾರ ಮುಖ್ಯಮಂತ್ರಿ ರೇವಂತ್ ರೆಡ್ಡಿ ಆರೋಪಿಸಿದ್ದಾರೆ.







