ಬಾಂಗ್ಲಾದೇಶದಲ್ಲಿ ಕಾಲೇಜು ಕಟ್ಟಡಕ್ಕೆ ವಿಮಾನ ಢಿಕ್ಕಿ: ಮೃತರ ಸಂಖ್ಯೆ 19ಕ್ಕೆ ಏರಿಕೆ
ಮೃತರಲ್ಲಿ 16 ವಿದ್ಯಾರ್ಥಿಗಳು; 100ಕ್ಕೂ ಅಧಿಕ ಮಂದಿಗೆ ಗಾಯ

PC : PTI
ಢಾಕಾ: ಕಾಲೇಜು ಕಟ್ಟಡಕ್ಕೆ ಯುದ್ಧ ವಿಮಾನವೊಂದು ಢಿಕ್ಕಿ ಹೊಡೆದ ಪರಿಣಾಮ, 16 ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರು ಹಾಗೂ ಓರ್ವ ಪೈಲಟ್ ಸೇರಿದಂತೆ ಒಟ್ಟು 19 ಮಂದಿ ಮೃತಪಟ್ಟಿರುವ ಘಟನೆ ಸೋಮವಾರ ಬಾಂಗ್ಲಾದೇಶದ ರಾಜಧಾನಿ ಢಾಕಾದ ಪಕ್ಕದಲ್ಲಿರುವ ಮೈಲ್ ಸ್ಟೋನ್ ಸ್ಕೂಲ್ ಆ್ಯಂಡ್ ಕಾಲೇಜು ಆವರಣದಲ್ಲಿ ನಡೆದಿದೆ.
ಮೃತ ಪೈಲಟ್ ನನ್ನು ವಿಮಾನದ ಲೆಫ್ಟಿನೆಂಟ್ ಮುಹಮ್ಮದ್ ತೌಕಿರ್ ಇಸ್ಲಾಂ ಎಂದು ಗುರುತಿಸಲಾಗಿದ್ದು, ಇಬ್ಬರು ಶಿಕ್ಷಕರೂ ಕೂಡಾ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನುಸ್ ಈ ಘಟನೆಯ ಕುರಿತು ತೀವ್ರ ಸಂತಾಪ ಮತ್ತು ದುಃಖ ವ್ಯಕ್ತಪಡಿಸಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, “ಈ ಅಪಘಾತದಲ್ಲಿ ವಾಯುಪಡೆಗೆ, ವಿದ್ಯಾರ್ಥಿಗಳಿಗೆ, ಪೋಷಕರಿಗೆ, ಶಿಕ್ಷಕರಿಗೆ ಹಾಗೂ ಮೈಲ್ ಸ್ಟೋನ್ ಸ್ಕೂಲ್ ಆ್ಯಂಡ್ ಕಾಲೇಜಿನ ಸಿಬ್ಬಂದಿಗಳಿಗೆ ಆಗಿರುವ ನಷ್ಟವನ್ನು ಭರಿಸಲು ಅಸಾಧ್ಯ. ಇದು ದೇಶದ ಪಾಲಿಗೆ ಅಪಾರ ದುಃಖದ ಗಳಿಗೆಯಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಅಪಘಾತಕ್ಕೀಡಾದ ವಿಮಾನವನ್ನು ಎಫ್-7ಬಿಜಿಐ ಎಂದು ಗುರುತಿಸಲಾಗಿದ್ದು, ಇದು ಚೀನಾದ ಜೆ-7 ಯುದ್ಧ ವಿಮಾನದ ಸುಧಾರಿತ ಮಾದರಿಯಾಗಿದೆ. ಮಧ್ಯಾಹ್ನ 1.06 ಗಂಟೆಗೆ ಟೇಕಾಫ್ ಆದ ಈ ಯುದ್ಧ ವಿಮಾನವು ವಿದ್ಯಾರ್ಥಿಗಳಿದ್ದ ಕಾಲೇಜು ಕಟ್ಟಡಕ್ಕೆ ಢಿಕ್ಕಿ ಹೊಡೆಯಿತು ಎಂದು ಅಗ್ನಿ ಶಾಮಕ ಸೇವೆ ಅಧಿಕಾರಿಯೊಬ್ಬರು Associated Press ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.







