ಕೋಲ್ಕತಾದಲ್ಲಿ ಕೊಲೆಯಾದ ಬಾಂಗ್ಲಾದೇಶ ಸಂಸದ | 3 ಆರೋಪಿಗಳ ಬಂಧನ

ಅನ್ವರುಲ್ ಅಝೀಮ್ ಅನಾರ್ | PC : X
ಕೋಲ್ಕತಾ: ಭಾರತದಲ್ಲಿ ನಾಪತ್ತೆಯಾಗಿದ್ದ ಬಾಂಗ್ಲಾದೇಶದ ಹಿರಿಯ ಸಂಸದ ಅನ್ವರುಲ್ ಅಝೀಮ್ ಅನರ್ ಕೋಲ್ಕತಾದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಬಾಂಗ್ಲಾದೇಶದ ಗೃಹ ಸಚಿವ ಅಸಾದುಝಮಾನ್ ಖಾನ್ ಬುಧವಾರ ಬಾಂಗ್ಲಾದೇಶದ ಢಾಕಾದಲ್ಲಿ ತಿಳಿಸಿದ್ದಾರೆ. ಕೊಲೆಗೆ ಸಂಬಂಧಿಸಿ ಬಾಂಗ್ಲಾದೇಶದಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
‘‘ಭಾರತದಲ್ಲಿ ನಾಪತ್ತೆಯಾಗಿದ್ದ ಆಡಳಿತಾರೂಢ ಅವಾಮಿ ಲೀಗ್ ಪಕ್ಷದ ಸಂಸದ ಅನ್ವರುಲ್ ಅಝೀಮ್ ಅನರ್ ಕೋಲ್ಕತಾದ ಫ್ಲ್ಯಾಟ್ ಒಂದರಲ್ಲಿ ಕೊಲೆಗೀಡಾಗಿದ್ದಾರೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಖಾನ್ ಹೇಳಿದರು.
‘‘ಈವರೆಗೆ ನಮಗೆ ಸಿಕ್ಕಿದ ಮಾಹಿತಿಗಳ ಪ್ರಕಾರ, ಎಲ್ಲಾ ಹಂತಕರು ಬಾಂಗ್ಲಾದೇಶೀಯರಾಗಿದ್ದಾರೆ. ಅದೊಂದು ಯೋಜಿತ ಕೊಲೆಯಾಗಿತ್ತು’’ ಎಂದು ಅವರು ತಿಳಿಸಿದರು.
56 ವರ್ಷದ ಸಂಸದನ ಕೊಲೆಗೆ ಸಂಬಂಧಿಸಿ ಬಾಂಗ್ಲಾದೇಶಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ ಎಂದು ಸಚಿವರು ಹೇಳಿದರು. ಮೃತದೇಹ ಎಲ್ಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಬಗ್ಗೆ ಇನ್ನೂ ಮಾಹಿತಿ ಬಂದಿಲ್ಲ ಎಂದರು.
‘‘ಕೊಲೆಗೆ ಕಾರಣವನ್ನು ನಾವು ಶೀಘ್ರವೇ ಬಹಿರಂಗಪಡಿಸುತ್ತೇವೆ’’ ಎಂದು ಹೇಳಿದ ಅವರು, ಭಾರತೀಯ ಪೊಲೀಸರು ಈ ಪ್ರಕರಣದಲ್ಲಿ ಸಹಕಾರ ನೀಡುತ್ತಿದ್ದಾರೆ ಎಂದರು.
ಮೂರು ಬಾರಿಯ ಸಂಸದ ಹಾಗೂ ಅವಾಮಿ ಲೀಗ್ನ ಕಾಲಿಗಂಜ್ ಉಪಜಿಲ್ಲಾ ಘಟಕದ ಮುಖ್ಯಸ್ಥ ಚಿಕಿತ್ಸೆ ಪಡೆಯುವುದಕ್ಕಾಗಿ ಮೇ 12ರಂದು ಭಾರತಕ್ಕೆ ಹೊರಟಿದ್ದರು. ಅವರು ನಾಪತ್ತೆಯಾಗಿರುವ ಬಗ್ಗೆ ಮೇ 18ರಂದು ಉತ್ತರ ಕೋಲ್ಕತಾದ ಬಾರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಅವರು ಕೊನೆಯದಾಗಿ ಕಾಣಿಸಿದ್ದು ಮೇ 13ರ ಮಧ್ಯಾಹ್ನ. ಅಂದು ಅವರು ಚಿಕಿತ್ಸೆಗಾಗಿ ಕೋಲ್ಕತಾ ಸಮೀಪದ ಬಿದನ್ನಗರ್ನಲ್ಲಿರುವ ಮನೆಯೊಂದಕ್ಕೆ ಸ್ನೇಹಿತರೊಂದಿಗೆ ಹೋಗಿದ್ದರು.
‘‘ಮೃತ ಸಂಸದ ಝೆನೈದ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಅದು ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗುವ ಗಡಿ ಪ್ರದೇಶವಾಗಿದೆ. ಅವರು ಚಿಕಿತ್ಸೆಗಾಗಿ ಭಾರತಕ್ಕೆ ಹೋಗಿದ್ದಾಗ ಕೊಲೆ ಸಂಭವಿಸಿದೆ. ನಮಗೆ ಈಗ ಗೊತ್ತಿರುವ ಮಟ್ಟಿಗೆ, ಅವರು ಅಲ್ಲಿ ಕೊಲೆಗೀಡಾಗಿದ್ದಾರೆ’’ ಎಂದು ಗೃಹ ಸಚಿವರು ಹೇಳಿದ್ದಾರೆ.
ಬಾಂಗ್ಲಾ ಪ್ರಧಾನಿ ಆಘಾತ
ಅಝೀಮ್ರ ಸಾವಿನ ಬಗ್ಗೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ತೀವ್ರ ಆಘಾತ ಮತ್ತು ದುಃಖ ವ್ಯಕ್ತಪಡಿಸಿದ್ದಾರೆ.







