ದಿಲ್ಲಿಯಲ್ಲಿ ಬಾಂಗ್ಲಾದೇಶದ ಪ್ರಧಾನಿಯ ಸಲಹೆಗಾರರೊಂದಿಗೆ ಅನುಚಿತ ವರ್ತನೆ ಆರೋಪ: ಭಾರತೀಯ ರಾಜತಾಂತ್ರಿಕರಿಗೆ ಸಮನ್ಸ್

ಝಹೇದ್ ಉರ್ ರಹ್ಮಾನ್ - Photo Credit: X/@NewBangladesh2
ಢಾಕಾ: ಬಾಂಗ್ಲಾದೇಶದ ಪ್ರಧಾನಿ ತಾರೀಖ್ ರಹ್ಮಾನ್ ಅವರ ಹಿರಿಯ ಸಲಹೆಗಾರ ಝಹೇದ್ ಉರ್ ರಹ್ಮಾನ್ ರನ್ನು ಹೊಸದಿಲ್ಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದು, ಹಲವು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ ಕ್ರಮದ ಪ್ರತಿಭಟನಾರ್ಥವಾಗಿ ಸೋಮವಾರ ಢಾಕಾದಲ್ಲಿನ ಭಾರತೀಯ ಉಪ ಹೈಕಮಿಷನರ್ ಪವನ್ ಬಾಧೆಗೆ ಬಾಂಗ್ಲಾದೇಶ ಸಮನ್ಸ್ ಜಾರಿಗೊಳಿಸಿದೆ.
ವಿಚಾರಗೋಷ್ಠಿಯೊಂದರಲ್ಲಿ ಪಾಲ್ಗೊಳ್ಳಲು ಹೊಸ ದಿಲ್ಲಿಗೆ ಬಂದ ಬಾಂಗ್ಲಾದೇಶದ ಪ್ರಧಾನ ಮಂತ್ರಿಯ ಸಲಹೆಗಾರ ಝಹೇದ್ ಉರ್ ರಹ್ಮಾನ್ ರೊಂದಿಗೆ ಅನುಚಿತ ವರ್ತನೆ ತೋರಲಾಗಿದೆ ಎಂದು ಭಾರತೀಯ ರಾಜತಾಂತ್ರಿಕರ ಬಳಿ ಬಾಂಗ್ಲಾದೇಶ ತನ್ನ ಕಳವಳ ವ್ಯಕ್ತಪಡಿಸಿದೆ.
ಹೊಸದಿಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಝಹೇದ್ ಉರ್ ರಹ್ಮಾನ್ ರನ್ನು ಅಧಿಕಾರಿಗಳು ತಡೆದಿದ್ದು, ಗಂಟೆಗಟ್ಟಲೆ ವಿಚಾರಣೆಯ ಬಳಿಕ ಅವರಿಗೆ ತಮ್ಮ ಪ್ರವಾಸ ಮುಂದುವರಿಸಲು ಅವಕಾಶ ನೀಡಿದ್ದಾರೆ ಎಂದು ಬಾಂಗ್ಲಾದೇಶದ ಅಧಿಕಾರಿಗಳು ಆರೋಪಿಸಿದ್ದಾರೆ.
ಈ ಘಟನೆಯನ್ನು ರಾಜತಾಂತ್ರಿಕ ಕಳವಳದ ಅಧ್ಯಾಯ ಎಂದು ಬಣ್ಣಿಸಿರುವ ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ಸಚಿವ ಖಲೀಲುರ್ ರಹ್ಮಾನ್, “ಇದೊಂದು ಅನಿರೀಕ್ಷಿತ ಮತ್ತು ದುರದೃಷ್ಟಕರ ಘಟನೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದರೆ, ಈ ಘಟನೆಯ ಕುರಿತು ಭಾರತ ಸರಕಾರ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಈ ಸಂಬಂಧ ಯಾವುದೇ ತಕ್ಷಣದ ಹೇಳಿಕೆ ಹೊರ ಬಿದ್ದಿಲ್ಲ.






