ಕಿವೀಸ್ ವಿರುದ್ಧ ಭರ್ಜರಿ ವಿಜಯದತ್ತ ಬಾಂಗ್ಲಾದೇಶ

Photo: @TheYorkerBall \ X
ಸಿಲ್ಹೆಟ್: ಮೊದಲ ಟೆಸ್ಟ್ ನ ನಾಲ್ಕನೇ ದಿನವಾದ ಶುಕ್ರವಾರ ಆತಿಥೇಯ ಬಾಂಗ್ಲಾದೇಶವು ನ್ಯೂಝಿಲ್ಯಾಂಡ್ ಮೇಲೆ ಸಂಪೂರ್ಣ ನಿಯಂತ್ರಣವನ್ನು ಸಾಧಿಸಿದ್ದು, ವಿಜಯದತ್ತ ದಾಪುಗಾಲಿಟ್ಟಿದೆ. ಎರಡನೇ ಇನ್ನಿಂಗ್ಸ್ ನಲ್ಲಿ, ಪ್ರವಾಸಿ ನ್ಯೂಝಿಲ್ಯಾಂಡ್ ತಂಡವನ್ನು ಅದು ಏಳು ವಿಕೆಟ್ ಗಳ ನಷ್ಟಕ್ಕೆ ಕೇವಲ 113 ರನ್ ಗೆ ಕಟ್ಟಿಹಾಕಿದೆ.
ಬಾಂಗ್ಲಾದೇಶವು ನ್ಯೂಝಿಲ್ಯಾಂಡ್ ನ ಗೆಲುವಿಗೆ 332 ರನ್ ಗಳ ಗುರಿಯನ್ನು ನೀಡಿತ್ತು. ಸ್ಪಿನ್ ಗೆ ಪೂರಕವಾಗಿರುವ ಪಿಚ್ ನಲ್ಲಿ ಈ ಗುರಿಯನ್ನು ತಲುಪುವುದು ಕಿವೀಸ್ ಗೆ ಸವಾಲಾಗಿತ್ತು. ನಿರೀಕ್ಷಿಸಿದಂತೆಯೇ, ತಿರುವು ನೀಡುವ ಪಿಚ್ ನಲ್ಲಿ ಆತಿಥೇಯ ಸ್ಪಿನ್ ಬೌಲರ್ಗಳು ವಿಜೃಂಭಿಸಿದ್ದು, ತಂಡವನ್ನು ಗೆಲುವಿನ ಸನಿಹಕ್ಕೆ ಒಯ್ದಿದ್ದಾರೆ.
ನ್ಯೂಝಿಲ್ಯಾಂಡ್ ಪರವಾಗಿ ಡ್ಯಾರಿಲ್ ಮಿಚೆಲ್ ಏಕಾಂಗಿ ವೀರನಾಗಿ ಹೋರಾಡಿದರು. ಮಂದ ಬೆಳಕಿನಿಂದಾಗಿ ದಿನದಾಟವು ಬೇಗನೇ ನಿಂತಾಗ ಅವರು 44 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು.
ನ್ಯೂಝಿಲ್ಯಾಂಡ್ ಎರಡನೇ ಇನ್ನಿಂಗ್ಸ್ ನಲ್ಲಿ, ಎದುರಾಳಿ ಸ್ಪಿನ್ನರ್ಗಳ ದಾಳಿಗೆ ಅಗ್ರ ಬ್ಯಾಟಿಂಗ್ ಕ್ರಮಾಂಕವು ಕುಸಿಯಿತು. ಈ ಕುಸಿತದಲ್ಲಿ ಬಾಂಗ್ಲಾದೇಶದ ಎಡಗೈ ಸ್ಪಿನ್ನರ್ ತೈಜುಲ್ ಇಸ್ಲಾಮ್ ಮಹತ್ವದ ಪಾತ್ರವನ್ನು ವಹಿಸಿದರು. ಅವರು ಕೇವಲ 40 ರನ್ ಗಳನ್ನು ನೀಡಿ 4 ವಿಕೆಟ್ ಗಳನ್ನು ಉರುಳಿಸಿದರು.
ನ್ಯೂಝಿಲ್ಯಾಂಡ್ ನ ಮೊದಲ ಓವರ್ನಲ್ಲೇ ಟಾಮ್ ಲ್ಯಾತಮ್ ನಿರ್ಗಮಿಸಿದರು. 11 ರನ್ ಗಳಿಸಿದ್ದ ಕೇನ್ ವಿಲಿಯಮ್ಸ್ ರ ವಿಕೆಟನ್ನು ತೈಜುಲ್ ಉರುಳಿಸಿದ ನಂತರ ತಂಡವು ಚೇತರಿಸಿಕೊಳ್ಳಲಿಲ್ಲ.
ಒಂದು ಹಂತದಲ್ಲಿ ನ್ಯೂಝಿಲ್ಯಾಂಡ್ 60 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಆದಾಗ್ಯೂ, ಸ್ವಲ್ಪ ಚೇತರಿಸಿಕೊಂಡು ಇನಿಂಗ್ಸನ್ನು ಕೊನೆಯ ದಿನವಾದ ಶನಿವಾರಕ್ಕೆ ಒಯ್ಯುವಲ್ಲಿ ಯಶಸ್ವಿಯಾಯಿತು.
ಇದಕ್ಕೂ ಮೊದಲು, ಬಾಂಗ್ಲಾದೇಶವು 3 ವಿಕೆಟ್ ಗಳ ನಷ್ಟಕ್ಕೆ 212 ರನ್ ಇದ್ದಲ್ಲಿಂದ ತನ್ನ ಎರಡನೇ ಇನಿಂಗ್ಸನ್ನು ಮುಂದುವರಿಸಿತು. ಅಂತಿಮವಾಗಿ ಅದು 338 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು.
ಮುಶ್ಫೀಕುರ್ರಹೀಮ್ (67) ಅರ್ಧ ಶತಕವನ್ನು ಪೂರ್ಣಗೊಳಿಸಿದರು ಮತ್ತು ಮೆಹಿದಿ ಹಸನ್ ಮಿರಾಝ್ 50 ರನ್ ಗಳನ್ನು ಗಳಿಸಿ ಅಜೇಯರಾಗಿ ಉಳಿದರು. ಆ ಮೂಲಕ ಬಾಂಗ್ಲಾದೇಶದ ಮೊತ್ತಕ್ಕೆ ಮಹತ್ವದ ಕೊಡುಗೆ ನೀಡಿದರು.
ನ್ಯೂಝಿಲ್ಯಾಂಡ್ ಪರವಾಗಿ ಅಜಾಜ್ ಪಟೇಲ್ ನಾಲ್ಕು ವಿಕೆಟ್ ಗಳನ್ನು ಪಡೆದರು. ಆದರೆ, ಅವರು ಓವರಿಗೆ ನಾಲ್ಕಕ್ಕಿಂತಲೂ ಅಧಿಕ ರನ್ ಗಳನ್ನು ನೀಡಿದರು.







