ಶೇಖ್ ಹಸೀನಾರನ್ನು ಹಸ್ತಾಂತರಿಸುವಂತೆ ಕೋರಿ ಭಾರತಕ್ಕೆ ಬಾಂಗ್ಲಾದೇಶ ಪತ್ರ

Photo Credit: The Hindu
ಹೊಸದಿಲ್ಲಿ : ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಕೋರಿ ಭಾರತದ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಕಳುಹಿಸಿದ್ದೇವೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರಕಾರದ ವಿದೇಶಾಂಗ ವ್ಯವಹಾರಗಳ ಸಲಹೆಗಾರ ತೌಹಿದ್ ಹುಸೇನ್ ರವಿವಾರ ಹೇಳಿದ್ದಾರೆ.
ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ಇತ್ತೀಚೆಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು.
ಹದಿನಾರು ವರ್ಷಗಳ ಅಧಿಕಾರಾವಧಿಯಲ್ಲಿ ರಾಜಕೀಯ ಕಾರ್ಯಕರ್ತರು ಮತ್ತು ವಿಮರ್ಶಕರ ಬಲವಂತದ ಕಣ್ಮರೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಹಸೀನಾ ಅವರು ಭಾಗಿಯಾಗಿದ್ದಾರೆ ಎಂಬ ಆರೋಪದ ಬಗ್ಗೆ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ಮತ್ತೊಂದು ವಿಚಾರಣೆಯನ್ನು ಘೋಷಿಸಿದ ದಿನವೇ ಹುಸೇನ್ ಅವರು ಪತ್ರ ಬರೆದಿರುವ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ.
2024ರ ಜುಲೈ, ಆಗಸ್ಟ್ ತಿಂಗಳಲ್ಲಿ ನಿರಾಯುಧ ಪ್ರತಿಭಟನಾಕಾರರ ದಮನದಲ್ಲಿ ಹಸೀನಾ ಅವರ ಪಾತ್ರದ ಕುರಿತು ನ್ಯಾಯಾಲಯದ ತೀರ್ಪಿನ ವಿವರಗಳನ್ನು ಹೊಂದಿರುವ ಪತ್ರವನ್ನು ಭಾರತಕ್ಕೆ ಕಳುಹಿಸಲಾಗಿದೆ ಎಂದು ತೌಹಿದ್ ಹುಸೇನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಕುರಿತು ಭಾರತದ ವಿದೇಶಾಂಗ ಸಚಿವಾಲಯ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.





