ವೈದ್ಯಕೀಯ ತಜ್ಞರ ನೇಮಕಕ್ಕೆ ಬಿಸಿಸಿಐ ಹೆಣಗಾಟ ಆಶ್ಚರ್ಯಕರ: ಮುಹಮ್ಮದ್ ಕೈಫ್

ಮುಹಮ್ಮದ್ ಕೈಫ್ Photo: PTI
ಹೊಸದಿಲ್ಲಿ: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯು ಪ್ರಮುಖ ವೈದ್ಯಕೀಯ ಮತ್ತು ಪುನಶ್ಚೇತನ ತಜ್ಞರನ್ನು ನೇಮಿಸಿಕೊಳ್ಳಲು ಹೆಣಗಾಡುತ್ತಿರುವುದು ಆಶ್ಚರ್ಯಕರ ಎಂದು ಮಾಜಿ ಕ್ರಿಕೆಟಿಗ ಮುಹಮ್ಮದ್ ಕೈಫ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡದಲ್ಲಿ ಹೆಚ್ಚುತ್ತಿರುವ ಗಾಯದ ಸಮಸ್ಯೆಗಳ ನಡುವೆಯೇ ಕೈಫ್ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ನ ಮುಖ್ಯಸ್ಥ ವಿ.ವಿ.ಎಸ್. ಲಕ್ಷ್ಮಣ್, ಸರಿಯಾದ ಸಿಬ್ಬಂದಿಯನ್ನು ಹುಡುಕುವಲ್ಲಿ ಬಿಸಿಸಿಐ ತೊಂದರೆಗಳನ್ನು ಎದುರಿಸುತ್ತಿದೆ ಎಂದು ಹೇಳಿದ್ದರು. ಈ ಬೆನ್ನಲ್ಲೇ ಕೈಫ್ ಅವರು, “ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ ಕಾರ್ಯವೈಖರಿಯ ಬಗ್ಗೆ ಹೊಸ ಪ್ರಶ್ನೆಗಳು ಹುಟ್ಟಿಕೊಂಡಿವೆ”ಎಂದು ಹೇಳಿದ್ದಾರೆ.
ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ಮಾತನಾಡಿದ ಕೈಫ್, “ನಾವು ಹಲವರನ್ನು ಸಂಪರ್ಕಿಸಿದ್ದೇವೆ. ಆ ಬಗ್ಗೆ ಕೆಲಸಗಳು ನಡೆಯುತ್ತಿದ್ದವು. ಆದರೆ ಕೊನೆಯ ಕ್ಷಣದಲ್ಲಿ ಅವರು ತಿರಸ್ಕರಿಸಿದರು ಎಂದು ವಿ.ವಿ.ಎಸ್. ಲಕ್ಷ್ಮಣ್ ಅವರ ಹೇಳಿಕೆ ಬಂದಿತ್ತು. ಆದ್ದರಿಂದ, ಏನು ನಡೆಯುತ್ತಿದೆಯೋ ಅದನ್ನು ಸರಿಪಡಿಸಬೇಕಾಗಿದೆ. ನಾನು ಇದರಲ್ಲಿ ಪರಿಣತನಲ್ಲ. ಬಿಸಿಸಿಐ ನೇಮಿಸಿದ ತಜ್ಞರು ತಮ್ಮ ಕೆಲಸವನ್ನು ಮಾಡಬೇಕು. ಆದರೆ ಇದರಿಂದ ಗಮನಾರ್ಹ ಪರಿಣಾಮ ಬೀರುತ್ತಿದೆ ಎಂದು ನಾನು ನಿಮಗೆ ಹೇಳುತ್ತಿದ್ದೇನೆ” ಎಂದರು.
ಬಿಸಿಸಿಐನ ಆರ್ಥಿಕ ಬಲ ಮತ್ತು ಭಾರತೀಯ ಕ್ರಿಕೆಟ್ನೊಂದಿಗೆ ಕೆಲಸ ಮಾಡುವ ಪ್ರತಿಷ್ಠೆಯನ್ನು ಗಮನಿಸಿದರೆ, ಈ ಪರಿಸ್ಥಿತಿಯು ತಮಗೆ ವಿಶೇಷವಾಗಿ ಆಶ್ಚರ್ಯ ಮೂಡಿಸಿದೆ ಎಂದು ಕೈಫ್ ಹೇಳಿದರು.
“ಈಗ ನನಗೆ ಆಶ್ಚರ್ಯವಾಗುತ್ತಿದೆ. ಏಕೆಂದರೆ ಬಹಳಷ್ಟು ಜನರು ಬಿಸಿಸಿಐ ಜೊತೆ ಕೆಲಸ ಮಾಡಲು ಉತ್ಸುಕರಾಗಿದ್ದಾರೆ. ನಮ್ಮ ಬಳಿ ಎಷ್ಟು ಹಣವಿದೆ ಎಂದರೆ ನಾವು ಯಾರನ್ನಾದರೂ ಕರೆದರೆ ಅವರು ಓಡಿ ಬರುತ್ತಾರೆ. ಆಟಗಾರರನ್ನೇ ನೋಡಿ. ಆಟಗಾರರು ತಮ್ಮ ದೇಶದ ಪಂದ್ಯಗಳನ್ನು ಬಿಟ್ಟು ಬಂದು ಐಪಿಎಲ್ ಆಡುತ್ತಾರೆ” ಎಂದು ಕೈಫ್ ಹೇಳಿದರು.
ಪ್ರಮುಖ ಫಿಸಿಯೋಥೆರಪಿಸ್ಟ್ಗಳು ಮತ್ತು ವೈದ್ಯಕೀಯ ತಜ್ಞರೊಂದಿಗೆ ಒಪ್ಪಂದಗಳನ್ನು ಅಂತಿಮಗೊಳಿಸಲು ಬಿಸಿಸಿಐಗೆ ಏಕೆ ಸಾಧ್ಯವಾಗಿಲ್ಲ ಎಂದು ಅವರು ಪ್ರಶ್ನಿಸಿದರು.
ಕಾಲ್ಬೆರಳಿನ ಗಾಯದ ಸಮಸ್ಯೆಯಿಂದಾಗಿ ಶ್ರೀಲಂಕಾ ವಿರುದ್ಧದ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಸಾಯಿ ಸುದರ್ಶನ್ ಹೊರಗುಳಿದಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಜೊತೆಗೆ, ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ ಕೂಡ ಗಾಯದ ಕಾರಣದಿಂದ ಶ್ರೀಲಂಕಾ ಸರಣಿಗೆ ಲಭ್ಯವಿಲ್ಲದ ಆಟಗಾರರ ಪಟ್ಟಿಯಲ್ಲಿದ್ದಾರೆ.






