ಸುಸ್ಥಿರ ವಾಣಿಜ್ಯ ಯೋಜನೆ : ಬ್ಯಾರೀಸ್ ಗ್ರೂಪ್ಗೆ CREDAI ರಾಷ್ಟ್ರೀಯ ಪ್ರಶಸ್ತಿ

Photo Credit : X \ @CREDAINational
ಹೊಸದಿಲ್ಲಿ: ಸುಸ್ಥಿರ ವಾಣಿಜ್ಯ ಅಭಿವೃದ್ಧಿ ಕ್ಷೇತ್ರದಲ್ಲಿ (Best Sustainable / Eco-Friendly Project commercial) ಶ್ರೇಷ್ಠ ಸಾಧನೆಗಾಗಿ ಬ್ಯಾರೀಸ್ ಗ್ರೂಪ್ CREDAI ನ್ಯಾಷನಲ್ ರಿಯಲ್ ಎಸ್ಟೇಟ್ ಎಕ್ಸಲೆನ್ಸ್ ಅವಾರ್ಡ್ 2025 ಪಾತ್ರವಾಗಿದೆ.
ಡಿಸೆಂಬರ್ 19ರಂದು ಹೊಸದಿಲ್ಲಿಯ ತಾಜ್ ಪ್ಯಾಲೇಸ್ ನಲ್ಲಿ ನಡೆದ CREDAI ನ್ಯಾಷನಲ್ ರಿಯಲ್ ಎಸ್ಟೇಟ್ ಎಕ್ಸಲೆನ್ಸ್ ಅವಾರ್ಡ್ 2025 ಸಮಾರಂಭದಲ್ಲಿ ಈ ಗೌರವ ಪ್ರದಾನ ಮಾಡಲಾಯಿತು. ಪ್ರಶಸ್ತಿಗಳ ಮೊದಲ ಆವೃತ್ತಿಯಲ್ಲಿ ದೇಶದಾದ್ಯಂತ 500ಕ್ಕೂ ಹೆಚ್ಚು ಖ್ಯಾತ ಡೆವಲಪರ್ಗಳು ಭಾಗವಹಿಸಿದ್ದು, 800ಕ್ಕೂ ಹೆಚ್ಚು ಯೋಜನೆಗಳನ್ನು ಪರಿಗಣನೆಗೆ ಸಲ್ಲಿಸಲಾಗಿತ್ತು. ಮೌಲ್ಯಮಾಪನದ ಬಳಿಕ 175 ಯೋಜನೆಗಳನ್ನು ಶಾರ್ಟ್ಲಿಸ್ಟ್ ಮಾಡಲಾಗಿದ್ದು, ಅವುಗಳಲ್ಲಿ 25 ಯೋಜನೆಗಳಿಗೆ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗಿದೆ.
ಬ್ಯಾರೀಸ್ ಗ್ರೂಪ್ ಪರವಾಗಿ ಸಂಸ್ಥೆಯ ಉಪ ಆಡಳಿತ ನಿರ್ದೇಶಕ ಸಿದ್ದೀಕ್ ಬ್ಯಾರಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಬ್ಯಾರೀಸ್ ಗ್ರೂಪ್ ಅನುಷ್ಠಾನಗೊಳಿಸಿದ ಸುಸ್ಥಿರ ಕ್ರಮಗಳು, ಅತ್ಯುನ್ನತ ಸುರಕ್ಷತಾ ಮಾನದಂಡಗಳು ಮತ್ತು ತಂತ್ರಜ್ಞಾನಗಳನ್ನು ಅಳವಡಿಸಿಕೊಂಡ ದೇಶದಲ್ಲೇ ಅತ್ಯಾಧುನಿಕ ಹಾಗೂ ಪರಿಸರ ಸ್ನೇಹಿ ಡೇಟಾ ಸೆಂಟರ್ ಯೋಜನೆಗಳ ವಿನ್ಯಾಸ ಮತ್ತು ನಿರ್ಮಾಣಕ್ಕೆ ಈ ಗೌರವ ದೊರೆತಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬ್ಯಾರೀಸ್ ಗ್ರೂಪ್ ಉಪ ಆಡಳಿತ ನಿರ್ದೇಶಕ ಸಿದ್ದೀಕ್ ಬ್ಯಾರಿ, CREDAI ರಾಷ್ಟ್ರೀಯ ಪ್ರಶಸ್ತಿಗಳ ಮೊದಲ ಆವೃತ್ತಿಯಲ್ಲೇ ತೀವ್ರ ಸ್ಪರ್ಧೆಯಲ್ಲಿ ಲಭಿಸಿದ ಈ ಗೌರವ ಬ್ಯಾರೀಸ್ ಗ್ರೂಪ್ಗೆ ಮಹತ್ವದ ಮೈಲಿಗಲ್ಲು. ಸುಸ್ಥಿರ ಅಭಿವೃದ್ಧಿ ಹಾಗೂ ಶ್ರೇಷ್ಠ ಇಂಜಿನಿಯರಿಂಗ್ ಹಾಗೂ ಜವಾಬ್ದಾರಿಯುತ ನಿರ್ಮಾಣಕ್ಕೆ ಸಂಸ್ಥೆ ನೀಡುತ್ತಿರುವ ಆದ್ಯತೆಯ ಪ್ರತಿಫಲವೇ ಈ ಮನ್ನಣೆ ಎಂದು ಹೇಳಿದ್ದಾರೆ.







