ಅಲಿಗಢ ವಿವಿ ಊಟದ ಮೆನುವಿನಲ್ಲಿ 'ಬೀಫ್ ಬಿರಿಯಾನಿ' ವಿವಾದ : ಪ್ರಕರಣ ದಾಖಲು

Photo | PTI
ಹೊಸದಿಲ್ಲಿ: ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಮಧ್ಯಾಹ್ನದ ಭೋಜನಕ್ಕೆ 'ಬೀಫ್ ಬಿರಿಯಾನಿ' ವಿವಾದ ಭುಗಿಲೆದ್ದ ಬೆನ್ನಲ್ಲೇ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಮೂವರ ವಿರುದ್ಧ ಎಫ್ ಐಆರ್ ದಾಖಲಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಸರ್ ಶಾ ಸುಲೈಮಾನ್ ಹಾಲ್ ನಲ್ಲಿ ಮಧ್ಯಾಹ್ನದ ಭೋಜನಕ್ಕೆ ʼಚಿಕನ್ ಬಿರಿಯಾನಿʼ ಬದಲು 'ಬೀಫ್ ಬಿರಿಯಾನಿ' ಎಂಬ ನೋಟಿಸ್ ಹಾಕಲಾಗಿತ್ತು. ನೋಟಿಸ್ ಪೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಬಳಿಕ ವಿವಾದ ಭುಗಿಲೆದ್ದಿತ್ತು.
ವಿವಿ ವಿದ್ಯಾರ್ಥಿಗಳಾದ ಮೊಹಮ್ಮದ್ ಫೈಝುಲ್ಲಾ ಮತ್ತು ಮುಜಾಸ್ಸಿಮ್ ಅಹ್ಮದ್ ಹಾಗೂ ಸರ್ ಶಾ ಸುಲೈಮಾನ್ ಹಾಲ್ ಉಸ್ತುವಾರಿ ಎಫ್ಆರ್ ಗೌಹರ್ ವಿರುದ್ಧ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 270 ಮತ್ತು 353ರಡಿ ಎಫ್ ಐಆರ್ ದಾಖಲಾಗಿದೆ.
ಕರ್ಣಿ ಸೇನೆಯ ಉತ್ತರಪ್ರದೇಶ ಘಟಕದ ಮುಖ್ಯಸ್ಥ ಜ್ಞಾನೇಂದ್ರ ಸಿಂಗ್ ಈ ಕುರಿತು ಪ್ರತಿಕ್ರಿಯಿಸಿ, ʼಸರ್ ಶಾ ಸುಲೈಮಾನ್ ಹಾಲ್ ನಲ್ಲಿ ಎಎಂಯು ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಒಳಗೊಂಡ 'ಬೀಫ್ ಪಾರ್ಟಿ'ಯ ಸಂದೇಶ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಬೆಳವಣಿಗೆಯು ಎಎಂಯುನಲ್ಲಿರುವ ಹಿಂದೂ ವಿದ್ಯಾರ್ಥಿಗಳ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದೆ. ಆದ್ದರಿಂದ ತಪ್ಪಿತಸ್ಥರ ವಿರುದ್ಧ ಕ್ರಮವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.







