West Bengal ಚುನಾವಣಾ ಫಲಿತಾಂಶ | ಎಸ್ಐಆರ್ನಲ್ಲಿ ಮತದಾರರ ಪಟ್ಟಿಯಿಂದ ಅಳಿಸಲ್ಪಟ್ಟು ನಂತರ ಸೇರಿಸಲಾಗಿದ್ದ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು

ಮೋತಾಬ್ ಶೇಖ್ | Photo Credit : Motab Shaikh/Facebook
ಕೋಲ್ಕತಾ: ಪಶ್ಚಿಮ ಬಂಗಾಳದ ಫರಕ್ಕಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೋತಾಬ್ ಶೇಖ್ ಅವರು ತನ್ನ ನಿಕಟ ಪ್ರತಿಸ್ಪರ್ಧಿ ಬಿಜೆಪಿಯ ಸುಧೀರ್ ಚೌಧುರಿಯವರನ್ನು 8,000ಕ್ಕೂ ಅಧಿಕ ಮತಗಳ ಅಂತರದಲ್ಲಿ ಸೋಲಿಸಿ ಜಯಭೇರಿಯನ್ನು ಬಾರಿಸಿದ್ದಾರೆ. ವಿಶೇಷವೆಂದರೆ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್ಐಆರ್) ಸಂದರ್ಭದಲ್ಲಿ ಶೇಖ್ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿತ್ತು,ನಂತರ ಮೇಲ್ಮನವಿ ನ್ಯಾಯಾಧಿಕರಣದ ಆದೇಶದಂತೆ ಅವರ ಹೆಸರನ್ನು ಮರಳಿ ಸೇರಿಸಲಾಗಿತ್ತು.
ಎ.5ರಂದು ಕೋಲ್ಕತಾದ ಮೇಲ್ಮನವಿ ನ್ಯಾಯಾಧಿಕರಣವು ಹೆಚ್ಚುವರಿ ಮತದಾರರ ಪಟ್ಟಿಯ ಮೂಲಕ ಶೇಖ್ ಅವರನ್ನು ಮುರ್ಷಿದಾಬಾದ್ನ ಮಾನ್ಯ ಮತದಾರ ಎಂದು ಘೋಷಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು. ಇದು ನ್ಯಾಯಾಧಿಕರಣವು ತೀರ್ಮಾನಿಸಿದ್ದ ಇಂತಹ ಮೊದಲ ಪ್ರಕರಣವಾಗಿತ್ತು.
ಕಲಕತ್ತಾ ಉಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶ ಟಿ.ಶಿವಜ್ಞಾನಂ ಅವರು ತನ್ನ ಆದೇಶದಲ್ಲಿ,ಚುನಾವಣಾ ಆಯೋಗವು ಶೇಖ್ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿದ್ದಕ್ಕೆ ತಾಂತ್ರಿಕ ಕಾರಣಗಳನ್ನು ನೀಡಿತ್ತು,ಆದರೆ ಸ್ಪಷ್ಟ ವಿವರಗಳನ್ನು ಒದಗಿಸಿರಲಿಲ್ಲ. ಶೇಖ್ ಅವರ ಪಾಸ್ಪೋರ್ಟ್ ಸಾಕಷ್ಟು ಪುರಾವೆಯಾಗಿದೆ ಮತ್ತು ಯಾವುದೇ ದಾಖಲೆಯಲ್ಲಿ ಅವರ ತಂದೆಯ ಹೆಸರಿನಲ್ಲಿ ವ್ಯತ್ಯಾಸವಿಲ್ಲ ಎಂದು ಹೇಳಿದ್ದರು.
ಇಂತಹುದೇ ಮತ್ತೊಂದು ಪ್ರಕರಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುಹಮ್ಮದ್ ಮುತ್ತಕೀನ್ ಆಲಂ ಅವರ ಹೆಸರನ್ನೂ ಮತದಾರರ ಪಟ್ಟಿಗಳಿಂದ ಅಳಿಸಲಾಗಿತ್ತಾದರೂ ನ್ಯಾಯಾಧಿಕರಣವು ಅದನ್ನು ಮರುಸ್ಥಾಪಿಸಿತ್ತು.
ರತುವಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಆಲಂ 31,000ಕ್ಕೂ ಅಧಿಕ ಮತಗಳನ್ನು ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಅಲ್ಲಿ ಟಿಎಂಸಿ ಅಭ್ಯರ್ಥಿ ಸಮರ ಮುಖರ್ಜಿಯವರು ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ.






