West Bengal | ಒಂದು ವರ್ಷದಲ್ಲಿ RSSನ 1,000 ವಿದ್ಯಾಭಾರತಿ ಶಾಲೆ ತೆರೆಯುವ ಗುರಿ: CM ಸುವೇಂದು ಅಧಿಕಾರಿ
‘ವಂದೇ ಮಾತರಂ’ ಪೂರ್ಣವಾಗಿ ಹಾಡದ ಶಾಲೆಗಳಿಗೆ ಸರ್ಕಾರಿ ನೆರವು ನಿಲ್ಲಿಸುವ ಎಚ್ಚರಿಕೆ

ಸುವೇಂದು ಅಧಿಕಾರಿ | Photo Credit : PTI
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಶಿಕ್ಷಣ ವಿಭಾಗವಾದ ವಿದ್ಯಾಭಾರತಿ ನಡೆಸುವ ಕನಿಷ್ಠ 1,000 ಶಾಲೆಗಳನ್ನು ಒಂದು ವರ್ಷದೊಳಗೆ ತೆರೆಯುವ ಗುರಿ ಹೊಂದಿರುವುದಾಗಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಹೇಳಿದ್ದಾರೆ.
ಪ್ರತಿ ಜಿಲ್ಲೆ, ಪುರಸಭೆ ಮತ್ತು ಪಂಚಾಯಿತಿಯಲ್ಲಿ ವಿದ್ಯಾಭಾರತಿಯ ಶಾಲೆಗಳನ್ನು ಸ್ಥಾಪಿಸಬೇಕು ಎಂದು ಅವರು ಹೇಳಿದ್ದಾರೆ.
ಕೋಲ್ಕತ್ತಾದಲ್ಲಿ ಗುರುವಾರ ನಡೆದ ವಿದ್ಯಾಭಾರತಿಯ 74ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಅಧಿಕಾರಿ, ‘ವಂದೇ ಮಾತರಂ’ನ ಪೂರ್ಣ ಆವೃತ್ತಿಯನ್ನು ಹಾಡಲು ನಿರಾಕರಿಸುವ ಶಿಕ್ಷಣ ಸಂಸ್ಥೆಗಳಿಗೆ ನೀಡುವ ಸರ್ಕಾರಿ ನೆರವನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾಗಿ ಹೇಳಿದ್ದಾರೆ ಎಂದು ‘ದಿ ಟೆಲಿಗ್ರಾಫ್’ ವರದಿ ಮಾಡಿದೆ.
“ಸರ್ಕಾರಿ ನೆರವು ನಿಲ್ಲುತ್ತದೆ ಎಂದು ನಾನು ಅವರಿಗೆ ಹೇಳಿದೆ. ಬಳಿಕ ಅವರು ಎದ್ದು ನಿಂತರು. ಆದರೆ ತುಟಿಗಳನ್ನು ಅಲುಗಾಡಿಸಲಿಲ್ಲ. ಆಗ ತುಟಿಗಳನ್ನೂ ಅಲುಗಾಡಿಸಬೇಕು ಎಂದು ಹೇಳಿದೆ” ಎಂದು ಅಧಿಕಾರಿ ಹೇಳಿದ್ದಾಗಿ ವರದಿ ಉಲ್ಲೇಖಿಸಿದೆ.
ಮುರ್ಷಿದಾಬಾದ್ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳಲ್ಲಿ ಹೆಚ್ಚಿನ ಶಾಲೆಗಳನ್ನು ಸ್ಥಾಪಿಸುವಂತೆ ವಿದ್ಯಾಭಾರತಿಗೆ ಸುವೇಂದು ಅಧಿಕಾರಿ ಒತ್ತಾಯಿಸಿದ್ದಾರೆ. ಈ ಜಿಲ್ಲೆಗಳಲ್ಲಿ ‘ಹೆಚ್ಚು ರಾಷ್ಟ್ರವಿರೋಧಿ ಚಟುವಟಿಕೆಗಳು ನಡೆಯುತ್ತಿವೆ’ ಎಂದು ಅವರು ಆರೋಪಿಸಿದ್ದಾರೆ ಎಂದು ‘Times of India’ ವರದಿ ಮಾಡಿದೆ.
ಹಿಂದಿನ ತೃಣಮೂಲ ಕಾಂಗ್ರೆಸ್ ಸರ್ಕಾರವು ಶಿಕ್ಷಣ ಸಂಸ್ಥೆಗಳನ್ನು ‘ಕಲುಷಿತಗೊಳಿಸಿದೆ’. ವಿದ್ಯಾರ್ಥಿಗಳಿಗೆ ‘ರಾಷ್ಟ್ರೀಯತಾವಾದಿ ಶಿಕ್ಷಣ’ ನೀಡುವ ಜವಾಬ್ದಾರಿಯನ್ನು ವಿದ್ಯಾಭಾರತಿ ವಹಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಹೇಳಿದ್ದಾರೆ.
ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ‘ಒಂದು ರಾಷ್ಟ್ರ, ಒಂದು ಸಂವಿಧಾನ, ಒಂದು ಧ್ವಜ, ಒಬ್ಬ ನಾಯಕ’ ಎಂಬ ಘೋಷಣೆಯನ್ನು ಶಿಕ್ಷಣ ಕ್ಷೇತ್ರದಲ್ಲಿಯೂ ಅನ್ವಯಿಸಬೇಕು ಎಂದು ಸುವೇಂದು ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.
ಶ್ಯಾಮ್ ಪ್ರಸಾದ್ ಮುಖರ್ಜಿ ಅವರು BJPಯ ಪ್ರಮುಖ ಸೈದ್ಧಾಂತಿಕ ನಾಯಕರಲ್ಲಿ ಒಬ್ಬರು. BJPಯ ಪೂರ್ವವರ್ತಿಯಾದ ಭಾರತೀಯ ಜನಸಂಘದ ಸಂಸ್ಥಾಪಕರಾಗಿದ್ದರು.






