ಲೈವ್ ಆ್ಯಕ್ಷನ್ ಕಿರುಚಿತ್ರ ವಿಭಾಗದಲ್ಲಿ ‘ಐ ಯಾಮ್ ನಾಟ್ ಎ ರೊಬಾಟ್’ ಡಚ್ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿಯ ಗರಿ
ಕೂದಲೆಳೆಯ ಅಂತರದಲ್ಲಿ ಪ್ರಶಸ್ತಿಯಿಂದ ವಂಚಿತಗೊಂಡ ಪ್ರಿಯಾಂಕಾ ಚೋಪ್ರಾ ನಿರ್ಮಾಣದ ‘ಅನುಜಾ’

Photo: X/@netflixgolden
ಲಾಸ್ ಏಂಜಲೀಸ್: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ನಿರ್ಮಿಸಿದ್ದ ದಿಲ್ಲಿ ಮೂಲದ ‘ಅನುಜಾ’ ಕಿರುಚಿತ್ರ ಲೈವ್ ಆ್ಯಕ್ಷನ್ ಕಿರುಚಿತ್ರ ವಿಭಾಗದಲ್ಲಿ ಕೂದಲೆಳೆಯ ಅಂತರದಲ್ಲಿ ಆಸ್ಕರ್ ಪ್ರಶಸ್ತಿಯಿಂದ ವಂಚಿತಗೊಂಡಿದ್ದು, ಡಚ್ ಭಾಷೆಯ ‘ಐ ಯಾಮ್ ನಾಟ್ ಎ ರೊಬಾಟ್’ ಕಿರುಚಿತ್ರ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
‘ಐ ಯಾಮ್ ನಾಟ್ ಎ ರೊಬಾಟ್’ ವೈಜ್ಞಾನಿಕ ಕಾಲ್ಪನಿಕ ಕಿರುಚಿತ್ರವಾಗಿದ್ದು, ಇದನ್ನು ವಿಕ್ಟೋರಿಯಾ ವಾರ್ಮೆರ್ಡಮ್ ಬರೆದು, ನಿರ್ದೇಶಿಸಿದ್ದಾರೆ.
‘ಅನುಜಾ’ ಚಿತ್ರವನ್ನು ಆ್ಯಡಮ್ ಜೆ. ಗ್ರೇವ್ಸ್ ಹಾಗೂ ಸುಚಿತ್ರಾ ಮಟ್ಟಾಯಿ ನಿರ್ದೇಶಿಸಿದ್ದು, ತನ್ನ ಹಾಗೂ ತನ್ನ ಸಹೋದರಿಯ ಭವಿಷ್ಯಗಳೆರಡನ್ನೂ ರೂಪಿಸುವ ವಿದ್ಯೆ ಅಥವಾ ತನ್ನ ಸಹೋದರಿಯೊಂದಿಗೆ ಕಾರ್ಖಾನೆಯಲ್ಲಿ ಉದ್ಯೋಗ ಮಾಡುವ ಆಯ್ಕೆಯ ನಿರ್ಧಾರವನ್ನು ಕೈಗೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕುವ ಒಂಬತ್ತು ವರ್ಷದ ಅನುಜಾ ಎಂಬ ಬಾಲಕಿಯ ಸುತ್ತ ಈ ಕಿರುಚಿತ್ರದ ಕತೆಯನ್ನು ಹೆಣೆಯಲಾಗಿದೆ. ಸಜ್ದಾ ಪಠಾಣ್ ಹಾಗೂ ಅನನ್ಯ ಶಾನ್ ಭಾಗ್ ಈ ಕಿರುಚಿತ್ರದ ಪ್ರಮುಖ ಪಾತ್ರಧಾರಿಗಳಾಗಿ ನಟಿಸಿದ್ದಾರೆ.
ಸದ್ಯ ನೆಟ್ ಫ್ಲಿಕ್ಸ್ ನಲ್ಲಿ ಪ್ರದರ್ಶನಗೊಳ್ಳುತ್ತಿರುವ ‘ಅನುಜಾ’ ಕಿರುಚಿತ್ರಕ್ಕೆ ಎರಡು ಬಾರಿಯ ಅಸ್ಕರ್ ಪ್ರಶಸ್ತಿ ವಿಜೇತ ನಿರ್ಮಾಪಕ ಗುನೀತ್ ಮೊಂಗಾ ಹಾಗೂ ನಟಿ ಪ್ರಿಯಾಂಕಾ ಚೋಪ್ರಾ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಹಾಲಿವುಡ್ ನ ತಾರಾ ಬರಹಗಾರ ಮಿಂಡಿ ಕೈಲಿಂಗ್ ನಿರ್ಮಾಪಕರಾಗಿದ್ದಾರೆ.
ಬೀದಿಬದಿಯ ಮಕ್ಕಳು ಹಾಗೂ ಕೆಲಸ ಮಾಡುವ ಮಕ್ಕಳ ನೆರವಿಗೆ ನಿಂತಿರುವ ಚಿತ್ರ ನಿರ್ಮಾಪಕಿ ಮೀರಾ ನಾಯರ್ ಕುಟುಂಬ ಸ್ಥಾಪಿಸಿರುವ ಲಾಭರಹಿತ ಸಲಾಂ ಬಾಲಕ್ ಟ್ರಸ್ಟ್, ಶಿಂದೆ ಗ್ಲೋಬಲ್ ಹಾಗೂ ಕೃಷನ್ ನಾಯಕ್ ಫಿಲ್ಮ್ಸ್ ಸಹಯೋಗದಲ್ಲಿ ಈ ಕಿರುಚಿತ್ರವನ್ನು ನಿರ್ಮಿಸಲಾಗಿದೆ.
‘ಎ ಲಯನ್’, “ದಿ ಲಾಸ್ಟ್ ರೇಂಜರ್’ ಹಾಗೂ ‘ದಿ ಮ್ಯಾನ್ ಹೂ ಕುಡ್ ನಾಟ್ ರಿಮೇನ್ ಸೈಲೆಂಟ್’ ಈ ವಿಭಾಗಕ್ಕೆ ನಾಮಕರಣಗೊಂಡಿದ್ದ ಇನ್ನಿತರ ಕಿರುಚಿತ್ರಗಳಾಗಿವೆ.







