‘ನನ್ನೊಂದಿಗೆ ಸೇರಿದರೆ ಇನ್ನಷ್ಟು ವೇಗದಲ್ಲಿ ಅಭಿವೃದ್ಧಿ ಸಾಧಿಸಬಹುದು’: ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಸಲಹೆ ನೀಡಿದ ಪ್ರಧಾನಿ ಮೋದಿ

ನರೇಂದ್ರ ಮೋದಿ | Photo Credit : PTI
ಹೈದರಾಬಾದ್, ಮೇ 11: ತೆಲಂಗಾಣದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ತ್ವರಿತ ಅನುಮತಿ ನೀಡುವಂತೆ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಮಾಡಿದ ಮನವಿಗೆ ಪ್ರಧಾನಿ ನರೇಂದ್ರ ಮೋದಿ ಅವರು, ‘ನನ್ನೊಂದಿಗೆ ಸೇರಿದರೆ ಇನ್ನಷ್ಟು ವೇಗದಲ್ಲಿ ಅಭಿವೃದ್ಧಿ ಸಾಧಿಸಬಹುದು’ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.
ರವಿವಾರ ಇಲ್ಲಿ ನಡೆದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮೊದಲು ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಪ್ರಧಾನಿ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಾಗೂ ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ “ಗುಜರಾತ್ ಮಾದರಿ” ಅಭಿವೃದ್ಧಿಯ ಮೂಲಕ ಯಶಸ್ಸು ಸಾಧಿಸಿದ್ದರು ಎಂದು ಸ್ಮರಿಸಿದರು.
ಅದೇ ರೀತಿಯಲ್ಲಿ ಈಗ ತೆಲಂಗಾಣದ ಜನರು “ತೆಲಂಗಾಣ ಮಾದರಿ” ಅಭಿವೃದ್ಧಿಯ ಮೂಲಕ ತಮ್ಮ ಆಕಾಂಕ್ಷೆಗಳನ್ನು ನನಸಾಗಿಸಿಕೊಳ್ಳಲು ನಿರೀಕ್ಷಿಸುತ್ತಿದ್ದಾರೆ. 2034ರೊಳಗೆ ತೆಲಂಗಾಣವನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಜ್ಯವನ್ನಾಗಿ ಹಾಗೂ 2047ರ ವೇಳೆಗೆ 3 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ರೂಪಿಸುವ ಗುರಿ ಹೊಂದಿರುವುದಾಗಿ ರೇವಂತ್ ತಿಳಿಸಿದರು.
ಮನಮೋಹನ್ ಸಿಂಗ್ ಅವರು ನಿಮಗೆ ನೀಡಿದ ಬೆಂಬಲದಂತೆಯೇ ನೀವು ತೆಲಂಗಾಣಕ್ಕೂ ಆಶೀರ್ವಾದ ನೀಡಬೇಕು. ಆಗ ಮಾತ್ರ ನಾವು ವೇಗವಾಗಿ ಅಭಿವೃದ್ಧಿ ಸಾಧಿಸಬಹುದು. ದಿಲ್ಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು ಮತ್ತು ಹೈದರಾಬಾದ್ ಸೇರಿದಂತೆ ಆರು ಮಹಾನಗರಗಳಿಗೆ ಸಂಬಂಧಿಸಿದ ರಾಷ್ಟ್ರೀಯ ಮಹತ್ವದ ಯೋಜನೆಗಳಿಗೆ ತ್ವರಿತ ಅನುಮೋದನೆ ದೊರೆಯುವಂತೆ ಪ್ರಧಾನ ಮಂತ್ರಿ ಕಚೇರಿಯಲ್ಲಿ ವಿಶೇಷ ‘ಏಕ ಗವಾಕ್ಷಿ ಕಾರ್ಯಪಡೆ’ ರಚಿಸುವಂತೆ ರೇವಂತ್ ರೆಡ್ಡಿ ಪ್ರಸ್ತಾಪಿಸಿದರು.
ಮುಸಿ ನದಿ ಪುನರುಜ್ಜೀವನ ಯೋಜನೆ, ಮೆಟ್ರೊ ರೈಲು ವಿಸ್ತರಣೆ ಹಾಗೂ ಪ್ರಸ್ತಾವಿತ 12 ಪಥದ ಹೈದರಾಬಾದ್–ಮಚಿಲಿಪಟ್ಟಣಂ ಎಕ್ಸ್ಪ್ರೆಸ್ ಹೆದ್ದಾರಿ ಸೇರಿದಂತೆ ಹಲವು ಪ್ರಮುಖ ಯೋಜನೆಗಳು ಬಾಕಿ ಉಳಿದಿರುವುದನ್ನು ಉಲ್ಲೇಖಿಸಿದ ಅವರು, ಅವುಗಳ ಅನುಮೋದನೆಗಾಗಿ ಎರಡು ಗಂಟೆಗಳ ವಿಶೇಷ ಸಭೆ ನಡೆಸುವಂತೆ ಮೋದಿಯವರನ್ನು ವಿನಂತಿಸಿದರು.
ಕೇಂದ್ರ ಸಚಿವರಾದ ಕಿಶನ್ ರೆಡ್ಡಿ ಮತ್ತು ಬಂಡಿ ಸಂಜಯ್ ಕುಮಾರ್ ಅವರು ನೀವು ವಿಶಾಲ ಹೃದಯದ ನಾಯಕ ಎಂದು ಹೇಳುತ್ತಿರುತ್ತಾರೆ. ತೆಲಂಗಾಣದ ವಿಷಯದಲ್ಲೂ ಅದನ್ನು ತೋರಿಸಬೇಕು ಎಂಬುದು ನಮ್ಮ ಮನವಿ. ಅಭಿವೃದ್ಧಿ ಮನವಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ರೇವಂತ್ ರೆಡ್ಡಿ ಸ್ಪಷ್ಟಪಡಿಸಿದರು.
ನಂತರ ಮಾತನಾಡಿದ ಪ್ರಧಾನಿ ಮೋದಿ, ಅಭಿವೃದ್ಧಿಯಲ್ಲಿ ರಾಜಕೀಯ ಇರಬಾರದು ಎಂಬ ರೇವಂತ್ ರೆಡ್ಡಿ ಅವರ ಮಾತುಗಳನ್ನು ಉಲ್ಲೇಖಿಸಿ, ತಾವು ಕೂಡ ರಾಜಕೀಯ ಟೀಕೆಗಳನ್ನು ಮಾಡುವುದಿಲ್ಲ. ತೆಲಂಗಾಣದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡುತ್ತೇನೆ. ಅಭಿವೃದ್ಧಿಯ ಪ್ರಯಾಣದಲ್ಲಿ ನನ್ನೊಂದಿಗೆ ಸೇರಿ ಎಂದು ರೇವಂತ್ ರೆಡ್ಡಿ ಅವರನ್ನು ಉದ್ದೇಶಿಸಿ ವ್ಯಂಗಗ್ಯವಾಗಿ ಪ್ರತಿಕ್ರಿಯಿಸಿದರು.
“ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ 10 ವರ್ಷಗಳಲ್ಲಿ ಗುಜರಾತ್ಗೆ ಕೇಂದ್ರ ನೀಡಿದಷ್ಟು ನೆರವನ್ನು ತೆಲಂಗಾಣಕ್ಕೂ ನೀಡಲು ನಾನು ಸಿದ್ಧನಿದ್ದೇನೆ. ಆದರೆ ಹಾಗೆ ಮಾಡಿದರೆ ಈಗ ನೀವು ಪಡೆಯುತ್ತಿರುವ ನೆರವಿನ ಅರ್ಧದಷ್ಟೇ ಸಿಗಬಹುದು. ಆಗ ನೀವು ತಲುಪಬೇಕೆಂದಿರುವ ಗುರಿ ತಲುಪಲು ಸಾಧ್ಯವಾಗದಿರಬಹುದು. ಅದಕ್ಕಾಗಿಯೇ ನೀವು ನನ್ನೊಂದಿಗೆ ಸೇರುವುದು ಉತ್ತಮ” ಎಂದು ಮೋದಿ ಹೇಳಿದರು.
ಪ್ರಜಾಪ್ರಭುತ್ವದಲ್ಲಿ ವಿವಿಧ ಪಕ್ಷಗಳು ವಿವಿಧ ರಾಜ್ಯಗಳಲ್ಲಿ ಆಡಳಿತ ನಡೆಸುವುದು ಸಹಜ. ರಾಜ್ಯಗಳ ಅಭಿವೃದ್ಧಿಯೇ ರಾಷ್ಟ್ರದ ಅಭಿವೃದ್ಧಿಗೆ ಆಧಾರ. ರಾಜ್ಯಗಳ ಅಭಿವೃದ್ಧಿಯಿಲ್ಲದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. 2047ರ ವಿಕ್ಷಿತ್ ಭಾರತ್ ಗುರಿ ಸಾಧಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ಪ್ರಧಾನಿ ಮೋದಿ ಕರೆ ನೀಡಿದರು.
ಭಾರತವು ವೇಗವಾಗಿ ಸುಧಾರಣೆಗಳನ್ನು ಜಾರಿಗೆ ತರುತ್ತಿದ್ದು, ಆಧುನಿಕ ಮೂಲಸೌಕರ್ಯ ನಿರ್ಮಾಣದತ್ತ ಸಾಗುತ್ತಿದೆ. ತೆಲಂಗಾಣದ ಪ್ರತಿಯೊಂದು ಕುಟುಂಬದ ಕನಸು ನನಸಾಗಿಸಲು ಕೇಂದ್ರ ಸರ್ಕಾರ ಹೆಚ್ಚಿನ ವೇಗದಲ್ಲಿ ಕೆಲಸ ಮುಂದುವರಿಸಲಿದೆ ಎಂದು ಮೋದಿ ಭರವಸೆ ನೀಡಿದರು.






