ಭರತ್ ತಿವಾರಿ ಎನ್ಕೌಂಟರ್ ನ್ಯಾಯಾಂಗ ತನಿಖೆಗೆ: ಬಿಹಾರ ಸರ್ಕಾರ ಆದೇಶ

ಭರತ್ ತಿವಾರಿ x.com/Indic_God
ಪಾಟ್ನಾ: ಪೊಲೀಸರಿಗೆ ಶರಣಾದ ಬಳಿಕ ನಡೆದ ಸಾಮಾಜಿಕ ಕಾರ್ಯಕರ್ತ ಭರತ್ ಭೂಷಣ್ ತಿವಾರಿ ಅವರ ಎನ್ಕೌಂಟರ್ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸಲು ಬಿಹಾರ ಸರ್ಕಾರ ಆದೇಶಿಸಿದೆ.
ಭೋಜಪುರ ಜಿಲ್ಲೆಯ ಶಾಹ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬಿಲೌತಿ ಗ್ರಾಮದಲ್ಲಿ ಜೂನ್ 17ರಂದು ನಡೆದ ಪೊಲೀಸ್ ಎನ್ಕೌಂಟರ್ ಕುರಿತು ಪಾಟ್ನಾ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದ್ದು, ಆಡಳಿತಾರೂಢ ಬಿಜೆಪಿ–ಜೆಡಿಯು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಎನ್ಕೌಂಟರ್ ನ ಬಗ್ಗೆ ಪ್ರಶ್ನೆ ಎತ್ತಿದ ಬೆನ್ನಲ್ಲೇ ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ.
‘ಘಟನೆಯ ಎಲ್ಲ ಆಯಾಮಗಳ ಬಗ್ಗೆ ಸ್ವತಂತ್ರ, ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆ ನಡೆಸುವುದು ನ್ಯಾಯಾಂಗ ತನಿಖೆಯ ಉದ್ದೇಶ’ ಎಂದು ಸಾಮ್ರಾಟ್ ಚೌಧರಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹೇಳಿದ್ದಾರೆ.
ಆದರೆ, ಎನ್ಕೌಂಟರ್ ನಡೆದ ದಿನವೇ ಪಾಟ್ನಾದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಅವರು, ಭರತ್ ಅವರನ್ನು ಬಂಧಿಸಿ ಕೊಯ್ಲ್ವಾರ್ ನ ಮಾನಸಿಕ ಆಸ್ಪತ್ರೆಗೆ ದಾಖಲಿಸಿದ್ದಕ್ಕಾಗಿ ಪೊಲೀಸರನ್ನು ಶ್ಲಾಘಿಸಿದ್ದರು. ಅಷ್ಟರಲ್ಲಾಗಲೇ ಭರತ್ ಅವರ ಮೇಲೆ ಹಲವು ಸುತ್ತು ಗುಂಡು ಹಾರಿಸಲಾಗಿತ್ತು. ಅವರು ಪೊಲೀಸರಿಗೆ ಶರಣಾದ ಬಳಿಕವೂ ಗುಂಡು ಹಾರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಜೆಡಿಯು ರಾಷ್ಟ್ರೀಯ ಕಾರ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಝಾ, ‘ಹೊರಬಂದಿರುವ ವೀಡಿಯೋಗಳು ಘಟನೆಯ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟುಹಾಕಿವೆ. ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿರುವುದು ಸ್ವಾಗತಾರ್ಹವಾದರೂ, ಅದು ಸಾಕಾಗುವುದಿಲ್ಲ. ಹಿರಿಯ ಅಧಿಕಾರಿಗಳು ನಿಗದಿತ ಅವಧಿಯೊಳಗೆ ತನಿಖೆ ಪೂರ್ಣಗೊಳಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
‘ಸರ್ಕಾರ ಯಾವುದೇ ಅಪರಾಧಿಯನ್ನು ಬಿಡುವುದಿಲ್ಲ ಎಂದು ಹೇಳಿದರೆ, ತಪ್ಪು ಮಾಡಿದ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದೂ ಅವರು ಹೇಳಿದ್ದಾರೆ.
ರಾಜ್ಯ ಶಿಕ್ಷಣ ಸಚಿವ ಮಿಥಿಲೇಶ್ ತಿವಾರಿ, ‘ಭರತ್ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ ಎಂದು ಘಟನೆಯ ಒಂದು ದಿನ ಮೊದಲು ಪೊಲೀಸರು ಹೇಳಿದ್ದರು. ಅವರು ಶಸ್ತ್ರಾಸ್ತ್ರವನ್ನು ಕೆಳಗಿಟ್ಟ ನಂತರ ಯಾವ ಸಂದರ್ಭದಲ್ಲಿ ಎನ್ಕೌಂಟರ್ ನಡೆಸಲಾಯಿತು ಎಂಬುದು ತನಿಖೆಯಿಂದ ಸ್ಪಷ್ಟವಾಗಬೇಕು’ ಎಂದು ಹೇಳಿದ್ದಾರೆ.
ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ, ‘ಶಸ್ತ್ರಾಸ್ತ್ರವನ್ನು ಒಪ್ಪಿಸಿ ಶರಣಾದ ವ್ಯಕ್ತಿಯನ್ನು ಎನ್ಕೌಂಟರ್ ಮಾಡಿರುವುದು ಸಂಪೂರ್ಣ ತಪ್ಪು ಮತ್ತು ಅಮಾನವೀಯ ಕೃತ್ಯ. ಕಾನೂನಿನ ಚೌಕಟ್ಟಿನೊಳಗೆ ಕ್ರಮ ಕೈಗೊಳ್ಳಬೇಕಾಗಿತ್ತು. ಪ್ರಕರಣದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಒತ್ತಾಯಿಸಿದ್ದಾರೆ.
ಇಂತಹ ನಕಲಿ ಎನ್ಕೌಂಟರ್ ಗಳು ಕಾನೂನು ಸುವ್ಯವಸ್ಥೆ ಮತ್ತು ಪೊಲೀಸರ ಮೇಲಿನ ಜನರ ವಿಶ್ವಾಸವನ್ನು ಕುಂದಿಸುತ್ತವೆ ಎಂದು ಅವರು ಹೇಳಿದ್ದಾರೆ. ಜೊತೆಗೆ ಭರತ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆಯೂ ಒತ್ತಾಯಿಸಿದ್ದಾರೆ.
ಆರಾ ಕ್ಷೇತ್ರದ ಸಿಪಿಐ(ಎಂಎಲ್) ಸಂಸದ ಸುದಾಮಾ ಪ್ರಸಾದ್ ಪಕ್ಷದ ನಾಯಕರ ನಿಯೋಗದೊಂದಿಗೆ ಬಿಲೌತಿ ಗ್ರಾಮಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರನ್ನು ಭೇಟಿಯಾದರು.
‘ಇದು ಅತ್ಯಂತ ಗಂಭೀರ ಮತ್ತು ಖಂಡನೀಯ ಘಟನೆ. ಪೊಲೀಸರ ಕ್ರಮ ಅನುಮಾನಾಸ್ಪದವಾಗಿದೆ. ಭರತ್ ಅವರನ್ನು ಉಳಿಸಬಹುದಾಗಿತ್ತು. ಆದರೆ ಅನಗತ್ಯವಾಗಿ ಅತಿಯಾದ ಬಲಪ್ರಯೋಗ ನಡೆಸಲಾಗಿದೆ ಎಂಬ ಅನುಮಾನವಿದೆ. ಅವರು ವಂಚಿತ ಜನರ ಧ್ವನಿಯಾಗಿದ್ದರು’ ಎಂದು ಸುದಾಮಾ ಪ್ರಸಾದ್ ಹೇಳಿದ್ದಾರೆ.
ಬಿಹಾರದಲ್ಲಿ ‘ಎನ್ಕೌಂಟರ್ ರಾಜ್’ ನಡೆಯುತ್ತಿದ್ದು, ಇತ್ತೀಚೆಗೆ ಇಂತಹ ಹಲವು ಅನುಮಾನಾಸ್ಪದ ಘಟನೆಗಳು ಬೆಳಕಿಗೆ ಬಂದಿವೆ ಎಂದೂ ಅವರು ಆರೋಪಿಸಿದ್ದಾರೆ.
ಜವೈನೀಯಾ ಗ್ರಾಮದ ಪ್ರವಾಹ ಸಂತ್ರಸ್ತರ ಪುನರ್ವಸತಿ ವಿಷಯವನ್ನು ಭರತ್ ನಿರಂತರವಾಗಿ ಎತ್ತುತ್ತಿದ್ದರು. ರಾಜ್ಯ ಸರ್ಕಾರ ಸ್ಥಳಾಂತರಗೊಂಡ ಜನರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಸಂಪೂರ್ಣ ಪುನರ್ವಸತಿ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಜನ್ ಸುರಾಜ್ ಪಾರ್ಟಿ (ಜೆಎಸ್ಪಿ) ರಾಜ್ಯಾಧ್ಯಕ್ಷ ಹಾಗೂ ಮಾಜಿ ಅಧಿಕಾರಿ ಮನೋಜ್ ಭಾರ್ತಿ ಕೂಡ ಪಕ್ಷದ ನಿಯೋಗದೊಂದಿಗೆ ಬಿಲೌತಿ ಗ್ರಾಮಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರನ್ನು ಭೇಟಿಯಾದರು.
‘ಭರತ್ ಎನ್ಕೌಂಟರ್ ಪ್ರಕರಣದಲ್ಲಿ ನ್ಯಾಯಾಂಗ ತನಿಖೆಗೆ ಆದೇಶಿಸುವಂತೆ ನಾವು ಸರ್ಕಾರದ ಮೇಲೆ ಒತ್ತಡ ಹೇರಿದ್ದೆವು. ಆದರೆ ಅಷ್ಟರಿಂದ ಸಾಲದು. ನ್ಯಾಯ ದೊರೆಯುವವರೆಗೆ ಹೋರಾಟ ಮುಂದುವರಿಸುತ್ತೇವೆ. ಬಿಹಾರದ ಜನರ ಪರವಾಗಿ ಹೋರಾಟ ನಡೆಸುತ್ತಲೇ ಇರುತ್ತೇವೆ’ ಎಂದು ಅವರು ಹೇಳಿದ್ದಾರೆ.
ಭರತ್ ತಿವಾರಿ ಎನ್ಕೌಂಟರ್ ಪ್ರಕರಣ
ಪ್ರವಾಹದಿಂದ ರಕ್ಷಣೆ, ಪರಿಹಾರ ಮತ್ತು ಸಮಾಜದ ವಂಚಿತ ವರ್ಗಗಳ ಸಮಸ್ಯೆಗಳ ಕುರಿತು ಭರತ್ ಭೂಷಣ್ ತಿವಾರಿ ನಿರಂತರವಾಗಿ ಧ್ವನಿ ಎತ್ತುತ್ತಿದ್ದರು. ವಿಶೇಷವಾಗಿ ಪ್ರವಾಹದಿಂದ ಮನೆ ಕಳೆದುಕೊಂಡ ಜವೈನೀಯಾ ಗ್ರಾಮದ ನಿವಾಸಿಗಳ ಪುನರ್ವಸತಿ ವಿಚಾರವನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿದ್ದರು.
ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಉದ್ದೇಶದಿಂದ ಪಿಸ್ತೂಲ್ ಹಿಡಿದು ಫೋಟೊ ತೆಗೆಸಿಕೊಂಡು ಅದರ ವೀಡಿಯೊವನ್ನು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಈ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಜೂನ್ 16ರಂದು ಪೊಲೀಸರು ಅವರ ಮನೆಗೆ ಭೇಟಿ ನೀಡಿದ್ದರು.
ಆ ವೇಳೆ ಭರತ್ ಪೊಲೀಸರ ಕಡೆಗೆ ಪಿಸ್ತೂಲ್ ಗುರಿ ಇಟ್ಟು ತಮ್ಮ ಬೇಡಿಕೆಗಳನ್ನು ಪುನರುಚ್ಚರಿಸಿದ್ದರು. ನಂತರ ಪೊಲೀಸರು ಹಿಂದಿರುಗಿದ್ದರೂ, ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳು ಮತ್ತು ಸುದ್ದಿಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಮರುದಿನ ಜೂನ್ 17ರಂದು ಪೊಲೀಸರು ಮತ್ತೆ ಗ್ರಾಮಕ್ಕೆ ತೆರಳಿ ಅವರ ಮನೆಯನ್ನು ಸುತ್ತುವರಿದರು. ಈ ವೇಳೆ ಭರತ್ ಫೇಸ್ಬುಕ್ನಲ್ಲಿ ನೇರಪ್ರಸಾರ ಆರಂಭಿಸಿ, ಶಸ್ತ್ರಾಸ್ತ್ರ ಪ್ರದರ್ಶಿಸುತ್ತಲೇ ಗ್ರಾಮದ ಹೊರವಲಯಕ್ಕೆ ತೆರಳಿದ್ದರು.
ಅಲ್ಲಿ ಅವರು ಜವೈನೀಯಾ ಗ್ರಾಮದ ಪ್ರವಾಹ ಸಂತ್ರಸ್ತರಿಗೆ ಸೂಕ್ತ ಪುನರ್ವಸತಿ ಹಾಗೂ ಪ್ರವಾಹ ರಕ್ಷಣಾ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.
ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಮ್ಮ ಬೇಡಿಕೆಗಳನ್ನು ತಂದು ಪರಿಹರಿಸುವುದಾಗಿ ಪೊಲೀಸರು ಭರವಸೆ ನೀಡಿದ ನಂತರ ಭರತ್ ಶಸ್ತ್ರಾಸ್ತ್ರವನ್ನು ಕೆಳಗಿಟ್ಟು ಶರಣಾದರು. ಆದರೆ, ತಮ್ಮ ಸುರಕ್ಷತೆಯ ಬಗ್ಗೆ ಆತಂಕವನ್ನೂ ವ್ಯಕ್ತಪಡಿಸಿದ್ದರು.
ಶರಣಾದ ಬಳಿಕ ಪೊಲೀಸರು ಅವರನ್ನು ತೀವ್ರವಾಗಿ ಹಲ್ಲೆ ನಡೆಸಿ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ. ನಾಲ್ಕು ಗುಂಡುಗಳು ತಗುಲಿದ್ದ ಭರತ್ ಅವರನ್ನು ಮೊದಲು ಜಿಲ್ಲಾ ಆಸ್ಪತ್ರೆಗೆ, ನಂತರ ಪಾಟ್ನಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಈ ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಆರಾ–ಬಕ್ಸರ್ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು. ನ್ಯಾಯಾಂಗ ಅಥವಾ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕು ಹಾಗೂ ಘಟನೆಯಲ್ಲಿ ಭಾಗಿಯಾಗಿರುವ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಎನ್ಕೌಂಟರ್ ಮತ್ತು ನಂತರದ ಪ್ರತಿಭಟನೆಗೆ ಸಂಬಂಧಿಸಿ ಪೊಲೀಸರು ಮೂರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಆದರೆ, ನಕಲಿ ಎನ್ಕೌಂಟರ್ನಲ್ಲಿ ಭಾಗಿಯಾಗಿರುವ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಭರತ್ ಅವರ ತಾಯಿ ಸಲ್ಲಿಸಿರುವ ಅರ್ಜಿಯ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ಆರ್ಜೆಡಿ ಕಾರ್ಯಾಧ್ಯಕ್ಷ ಹಾಗೂ ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಪ್ರಸಾದ್ ಯಾದವ್, ‘ಭರತ್ ಎನ್ಕೌಂಟರ್ ನಕಲಿ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಕುಟುಂಬದವರಲ್ಲಿ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದ್ದಾರೆ.
‘ಒಂದು ಕಡೆ ಸರ್ಕಾರ ನ್ಯಾಯಾಂಗ ತನಿಖೆಯ ಮಾತು ಹೇಳುತ್ತಿದೆ. ಇನ್ನೊಂದು ಕಡೆ ಪೊಲೀಸರು ಭರತ್ ಕುಟುಂಬದವರ ವಿರುದ್ಧವೇ ಎಫ್ಐಆರ್ ದಾಖಲಿಸುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸ್ಪಷ್ಟನೆ ನೀಡಬೇಕು’ ಎಂದು ತೇಜಸ್ವಿ ಹೇಳಿದ್ದಾರೆ.






