ಭೀಮಾ-ಕೋರೆಗಾಂವ್ ಪ್ರಕರಣ: ವರ್ನಾನ್ ಗೊನ್ಸಾಲ್ವೆಸ್, ಅರುಣ್ ಫೆರೇರಾಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್

ವರ್ನಾನ್ ಗೊನ್ಸಾಲ್ವೆಸ್ ಹಾಗೂ ಅರುಣ್ ಫೆರೇರಾ, Credit: PTI File Photos
ಹೊಸದಿಲ್ಲಿ: ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಆರೋಪ ಹೊತ್ತಿರುವ ಸಾಮಾಜಿಕ ಹೋರಾಟಗಾರರಾದ ವರ್ನಾನ್ ಗೊನ್ಸಾಲ್ವೆಸ್ ಹಾಗೂ ಅರುಣ್ ಫೆರೇರಾ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.
ಇವರಿಬ್ಬರು ಐದು ವರ್ಷಗಳಿಂದ ಕಸ್ಟಡಿಯಲ್ಲಿದ್ದಾರೆ ಎಂದು ಉಲ್ಲೇಖಿಸಿದ ಸುಪ್ರೀಂ ಕೋರ್ಟ್, ಅವರ ವಿರುದ್ಧದ ಆರೋಪಗಳು ಗಂಭೀರವಾಗಿದ್ದರೂ ಅದು , ಜಾಮೀನು ನಿರಾಕರಿಸುವ ಏಕೈಕ ಕಾರಣವಾಗುವುದಿಲ್ಲ ಎಂದು ಕಾನೂನು ವೆಬ್ಸೈಟ್ LIve Law ವರದಿ ಮಾಡಿದೆ.
ಗೊನ್ಸಾಲ್ವೆಸ್ ಮತ್ತು ಫೆರೇರಾ ಅವರನ್ನು 2018 ರಿಂದ ಮುಂಬೈನ ತಲೋಜಾ ಜೈಲಿನಲ್ಲಿ ಇರಿಸಲಾಗಿದೆ ಹಾಗೂ ಅವರ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ನಿರಾಕರಿಸಿದ ನಂತರ ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿದ್ದರು.
ಸಹ ಆರೋಪಿ ಸುಧಾ ಭಾರದ್ವಾಜ್ ಅವರಿಗೆ ಜಾಮೀನು ಮಂಜೂರು ಮಾಡಿದ್ದರೂ ಕೂಡ ಬಾಂಬೆ ಹೈಕೋರ್ಟ್ ಜಾಮೀನು ನಿರಾಕರಿಸಿದೆ ಎಂದು ಇಬ್ಬರೂ ವಾದಿಸಿದರು.
ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಹಾಗೂ ಸುಧಾಂಶು ಧುಲಿಯಾ ಅವರ ಪೀಠವು ಗೊನ್ಸಾಲ್ವೆಸ್ ಹಾಗೂ ಫೆರೇರಾ ಮಹಾರಾಷ್ಟ್ರವನ್ನು ಬಿಟ್ಟು ಹೋಗಬಾರದು. ತಮ್ಮ ಪಾಸ್ ಪೋರ್ಟ್ ಗಳನ್ನು ಪೊಲೀಸರಿಗೆ ಒಪ್ಪಿಸಬೇಕು ಎಂದು ಹೇಳಿದೆ.
ಇಬ್ಬರು ಹೋರಾಟಗಾರರಿಗೆ ತಲಾ ಒಂದು ಮೊಬೈಲ್ ಬಳಸಬೇಕು ಮತ್ತು ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ ಐಎ) ಅವರ ವಿಳಾಸಗಳನ್ನು ತಿಳಿಸುವಂತೆ ಅದು ನಿರ್ದೇಶಿಸಿದೆ.
ಈ ಪ್ರಕರಣವು ಪುಣೆಯಲ್ಲಿ ಡಿಸೆಂಬರ್ 31, 2017 ರಂದು ನಡೆದ ಎಲ್ಗರ್ ಪರಿಷತ್ ಸಮಾವೇಶಕ್ಕೆ ಸಂಬಂಧಿಸಿದೆ, ಅಲ್ಲಿ ಮಾಡಿದ ಉದ್ರೇಕಕಾರಿ ಭಾಷಣಗಳು ಮರುದಿನ ಪುಣೆಯ ಕೋರೆಗಾಂವ್-ಭೀಮಾ ಯುದ್ಧ ಸ್ಮಾರಕದಲ್ಲಿ ಹಿಂಸಾಚಾರಕ್ಕೆ ಕಾರಣವಾಯಿತು ಎಂದು ಪೊಲೀಸರು ಆರೋಪಿಸಿದ್ದಾರೆ.







