ಭೋಗಪುರಂ ಏರ್ಪೋರ್ಟ್ ಜಾಗಕ್ಕೆ ಅಧಿಕ ಪರಿಹಾರಕ್ಕಾಗಿ ಧರಣಿ | ಜೆಸಿಬಿ ಬಕೆಟ್ನಲ್ಲಿ ಕುಳಿತಿದ್ದ ಹಿರಿಯರನ್ನು ಯಂತ್ರದ ಮೂಲಕವೇ ಸ್ಥಳಾಂತರಿಸಿದ ಆಪರೇಟರ್!; ವಿಡಿಯೊ ವೈರಲ್

Photo : x
ವಿಝಿಯನಗರಂ: ಭೋಗಪುರಂ ವಿಮಾನ ನಿಲ್ದಾಣಕ್ಕಾಗಿ ಸ್ವಾಧೀನಪಡಿಸಿಕೊಂಡ ಜಮೀನಿಗೆ ಅಧಿಕ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಜೆಸಿಬಿ ಬಕೆಟ್ ನಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದ ಇಬ್ಬರು ಹಿರಿಯರನ್ನು ಎಕ್ಸ್ಕವೇಟರ್ ಯಂತ್ರದ ಮೂಲಕವೇ ಸ್ಥಳಾಂತರಿಸಿದ ಘಟನೆ ಆಂಧ್ರಪ್ರದೇಶದ ವಿಝಿಯನಗರಂ ಜಿಲ್ಲೆಯ ಭೋಗಪುರಂ ಮಂಡಲದ ಬೈರೆಡ್ಡಿಪಾಲೆಂ ಗ್ರಾಮದಲ್ಲಿ ನಡೆದಿದೆ.
ಈ ಘಟನೆ ಶುಕ್ರವಾರ ಸಂಜೆ ನಡೆದಿದ್ದರೂ, ಎಕ್ಸ್ಕವೇಟರ್ ಆಪರೇಟರ್ ಪ್ರತಿಭಟನಾಕಾರರನ್ನು ಜೆಸಿಬಿ ಮೂಲಕ ಸ್ಥಳಾಂತರಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಶನಿವಾರ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಯ ವೇಳೆ ಕಂದಾಯ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳದಲ್ಲೇ ಇದ್ದರು ಎನ್ನಲಾಗಿದೆ.
ಭೋಗಪುರಂ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ಬೈರೆಡ್ಡಿಪಾಲೆಂ ಗ್ರಾಮದ ಕನಿಷ್ಠ 39 ಕುಟುಂಬಗಳ ಜಮೀನುಗಳನ್ನು ಕೆಲ ತಿಂಗಳ ಹಿಂದೆ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಭೂಸ್ವಾಧೀನ ನಿಯಮಗಳ ಅನ್ವಯ ಸರ್ಕಾರ ಪರಿಹಾರ ಧನ ವಿತರಿಸಿತ್ತು. ಈ ಪೈಕಿ 15 ಕುಟುಂಬಗಳು ಪರಿಹಾರ ಮೊತ್ತ ಸ್ವೀಕರಿಸಿದ್ದರೆ, ಉಳಿದ ಕುಟುಂಬಗಳು ಹೆಚ್ಚುವರಿ ವಸತಿ ನಿವೇಶನ ನೀಡಬೇಕು ಎಂದು ಆಗ್ರಹಿಸಿ ಪರಿಹಾರವನ್ನು ನಿರಾಕರಿಸಿದ್ದವು.
ನಂತರ ಕಂದಾಯ ಅಧಿಕಾರಿಗಳು ಪರಿಹಾರ ಮೊತ್ತವನ್ನು ಭೂಸ್ವಾಧೀನ, ಪುನರ್ವಸತಿ ಪ್ರಾಧಿಕಾರಕ್ಕೆ ವರ್ಗಾಯಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ ನ್ಯಾಯಾಲಯಗಳಿಗೆ ಬೇಸಿಗೆ ರಜೆ ಇರುವುದರಿಂದ ಸ್ಥಳಾಂತರಗೊಂಡ ಕುಟುಂಬಗಳು ಪ್ರಾಧಿಕಾರದಿಂದ ಪರಿಹಾರ ಮೊತ್ತ ಪಡೆಯಲು ಸಾಧ್ಯವಾಗಿರಲಿಲ್ಲ ಎಂದು ತಿಳಿದುಬಂದಿದೆ.
ಶುಕ್ರವಾರ ಕಂದಾಯ ಹಾಗೂ ಪೊಲೀಸ್ ಸಿಬ್ಬಂದಿಯ ಸಮ್ಮುಖದಲ್ಲಿ ಗುತ್ತಿಗೆದಾರ ಸಂಸ್ಥೆ ರಸ್ತೆ ಕಾಮಗಾರಿ ಆರಂಭಿಸಿತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕೆಲವು ಕುಟುಂಬಗಳು ರಸ್ತೆ ತಡೆ ನಡೆಸಿ ಧರಣಿ ಕುಳಿತವು. ಈ ವೇಳೆ ಬೈರೆಡ್ಡಿ ಅಪ್ಪಲನರಸಯ್ಯ ಮತ್ತು ತೋಟಮಲ್ಲು ಎಂಬ ಇಬ್ಬರು ಹಿರಿಯರು ಜೆಸಿಬಿ ಬಕೆಟ್ ನಲ್ಲಿ ಕುಳಿತು ಕಾಮಗಾರಿ ತಡೆಯಲು ಮುಂದಾದರು. ಆಗ ಎಕ್ಸ್ಕವೇಟರ್ ಆಪರೇಟರ್ ಅವರನ್ನು ಅಲ್ಲಿಂದ ತೆರವುಗೊಳಿಸಲು ಯಂತ್ರವನ್ನೇ ಬಳಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ರೈತರು ಹಾಗೂ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾಕಾರರೊಂದಿಗೆ ಅಮಾನವೀಯವಾಗಿ ವರ್ತಿಸಲಾಗಿದೆ ಎಂದು ಆರೋಪಿಸಿರುವ ಅವರು, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
#SadistChandraBabu
— YSR Congress Party (@YSRCParty) May 16, 2026
పరిహారం చెల్లించకుండా.. వృద్ధ దంపతులతో పరిహాసమా @ncbn ?
విజయనగరం జిల్లా భోగాపురం మండలం బైరెడ్డిపాలెం వద్ద ఎయిర్పోర్ట్ అప్రోచ్ రోడ్డు కోసం భారీగా భూముల స్వాధీనం
పరిహారం చెల్లించకుండా భూములను స్వాధీనం చేసుకోవడాన్ని అడ్డుకుంటున్న గ్రామస్థులు. అలా అడ్డుకున్న… pic.twitter.com/U93oEgb34b






