ಬಿಹಾರ | ಮಹಿಳಾ ರೋಝ್ಗಾರ್ ಯೋಜನೆಯಡಿ 25 ಲಕ್ಷ ಮಹಿಳೆಯರ ಖಾತೆಗಳಿಗೆ ತಲಾ 10 ಸಾವಿರ ರೂ.ವರ್ಗಾವಣೆ

ನಿತೀಶ್ ಕುಮಾರ್ | Photo Credit : PTI
ಪಾಟ್ನಾ, ಅ.3: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯದಲ್ಲಿ ಇತ್ತೀಚೆಗೆ ಆರಂಭಿಸಲಾದ ಮುಖ್ಯಮಂತ್ರಿ ಮಹಿಳಾ ರೋಝ್ಗಾರ್ ಯೋಜನೆಯಡಿ 25 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ 10 ಸಾವಿರ ರೂ.ಗಳನ್ನು ಶುಕ್ರವಾರ ವರ್ಗಾಯಿಸಿದ್ದಾರೆ. ಒಟ್ಟಾರೆಯಾಗಿ 2, 500 ಕೋಟಿ ರೂ.ಗಳನ್ನು ನೇರ ಫಲಾನುಭವಿ ವರ್ಗಾವಣೆ (ಯುಬಿಟಿ) ಮೂಲಕ ವರ್ಗಾಯಿಸಲಾಗಿದೆ.
ರಾಜ್ಯದ ವಿವಿಧ ಭಾಗಗಳ ಫಲಾನುಭವಿ ಮಹಿಳೆಯರೊಂದಿಗೆ ನಿತೀಶ್ ಕುಮಾರ್ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆಯನ್ನು ಕೂಡ ನಡೆಸಿದರು. ಸ್ವ ಉದ್ಯೋಗ ಹಾಗೂ ಸಣ್ಣ ಉದ್ಯಮಗಳನ್ನು ನಡೆಸಲು ಆಸಕ್ತರಾಗಿರುವ ಮಹಿಳೆಯರಿಗೆ ಆರ್ಥಿಕ ನೆರವನ್ನು ಒದಗಿಸುವುದೇ ಈ ಯೋಜನೆಯ ಉದ್ದೇಶವಾಗಿದೆಯೆಂದು ಅವರು ಹೇಳಿದರು. ಯಶಸ್ವಿಯಾಗಿ ತಮ್ಮ ಉದ್ಯಮಗಳನ್ನು ನಡೆಸುವ ಮಹಿಳೆಯರಿಗೆ ಹೆಚ್ಚುವರಿ ಎರಡು ಲಕ್ಷ ರೂ.ಗಳನ್ನು ನೀಡಲಾಗುವುದೆಂದು ಅವರು ತಿಳಿಸಿದರು.
ಈಗಾಗಲೇ 1 ಕೋಟಿ ಫಲಾನುಭವಿಗಳು ಸಣ್ಣ ಉದ್ಯಮಗಳನ್ನು ಆರಂಭಿಸಲು 10 ಸಾವಿರ ಕೋಟಿ ರೂ.ಗಳನ್ನು ಪಡೆದುಕೊಂಡಿದ್ದಾರೆ. ತಮ್ಮ ಉದ್ಯಮಗಳನ್ನು ಯಶಸ್ವಿಯಾಗಿ ನಡೆಸುವವರು, ಹೆಚ್ಚುವರಿಯಾಗಿ ಎರಡು ಲಕ್ಷ ರೂ.ಗಳ ನೆರವನ್ನು ಪಡೆಯಲು ಅರ್ಹರಾಗಿದ್ದಾರೆಂದು ಅವರು ತಿಳಿಸಿದರು.
‘‘ಬಿಹಾರದ ಅತಿ ದೊಡ್ಡ ಸ್ವಸಹಾಯ ಸಂಘದ ಉಪಕ್ರಮ ‘ಜೀವಿಕಾ’ದ ಸದಸ್ಯರ ಸಂಖ್ಯೆ ಗ್ರಾಮಾಂತರ ಪ್ರದೇಶಗಳಲ್ಲಿ 40 ಲಕ್ಷವನ್ನು ದಾಟಿದೆ. ಗ್ರಾಮಾಂತರ ಪ್ರದೇಶಗಳಲ್ಲೂ ಇದು ಯಶಸ್ವಿಯಾಗಿದ್ದು, ಸ್ವಸಹಾಯ ಸಂಘಗಳ 3.85 ಲಕ್ಷ ಮಂದಿ ಜೀವಿಕಾ ದೀದಿಯರಾಗಿ ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ ತಾನು ಮತ್ತೆ ಅಧಿಕಾರಕ್ಕೆ ಮರಳಿದಲ್ಲಿ ಎನ್ಡಿಎ ಸರಕಾರವು ಈ ಯೋಜನೆಯನ್ನು ಇನ್ನಷ್ಟು ಬಲಪಡಿಸಲಿದೆ ಹಾಗೂ ವಿಸ್ತರಿಸಲಿದೆ’’ ಎಂದು ನಿತೀಶ್ ಕುಮಾರ್ ಹೇಳಿದರು.







