ಪ್ರಧಾನಿಯನ್ನು ನಿಂದಿಸಿದ್ದಕ್ಕೆ ಬಿಹಾರದ ಯುವಕನಿಗೆ ಜೈಲು | “ದೇವರೇ ನ್ಯಾಯ ಕೊಡಬೇಕು” ಎಂದ ತಂದೆ

Photo: AICC via PTI
ದರ್ಭಂಗಾ (ಬಿಹಾರ): ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ನಿಂದನಾತ್ಮಕ ಶಬ್ದಗಳನ್ನು ಬಳಸಿ ಮಾತನಾಡಿದ ಆರೋಪದ ಮೇಲೆ ಜೈಲಿನಲ್ಲಿರುವ ಬಿಹಾರದ ಯುವಕ ಮುಹಮ್ಮದ್ ರಿಝ್ವಿ ಅವರ ಕುಟುಂಬ ಸಂಕಷ್ಟ ಎದುರಿಸುತ್ತಿದೆ. “ನನ್ನ ಮಗ ಬಡ ಕುಟುಂಬದವನು ಎಂಬುದೇ ಅಪರಾಧ. ದೇವರು ಮಾತ್ರ ನ್ಯಾಯ ಕೊಡಬಲ್ಲರು,” ಎಂದು ಹೇಳುವಾಗ ರಿಝ್ವಿ ಅವರ ತಂದೆ ಮುಹಮ್ಮದ್ ಅನೀಶ್ ಅವರ ಕಣ್ಣಂಚಿನಲ್ಲಿ ನೀರು ತುಂಬಿತ್ತು.
ದರ್ಭಂಗಾ ಜಿಲ್ಲೆಯ ಭರ್ವಾರಾ ಗ್ರಾಮದಲ್ಲಿ ಸಣ್ಣ ದ್ವಿಚಕ್ರ ವಾಹನ ದುರಸ್ತಿ ಅಂಗಡಿ ನಡೆಸುತ್ತಿರುವ ಅನೀಶ್, ತಮ್ಮ ಮಗನ ಬಂಧನದ ನಂತರ ಜೀವನವೇ ತಲೆಕೆಳಗಾಗಿದೆ ಎಂದು ದುಃಖ ವ್ಯಕ್ತಪಡಿಸಿದರು.
“ಪೊಲೀಸರು ಅವನನ್ನು ಎಷ್ಟು ಹೊಡೆದಿದ್ದರೋ ಏನೋ? ಸತ್ತವನಂತೆಯೇ ಕಾಣುತ್ತಿದ್ದ. ನನಗೆ ಎಫ್ಐಆರ್ ಪ್ರತಿಯನ್ನೂ ಕೊಡಲಿಲ್ಲ. ವಕೀಲರನ್ನು ನೇಮಿಸಲು ನನ್ನ ಬಳಿ ಹಣವೂ ಇಲ್ಲ,” ಎಂದು ಬೇಸರದಿಂದ ಹೇಳಿದರು.
ಆಗಸ್ಟ್ 27ರಂದು ನಡೆದ ಕಾಂಗ್ರೆಸ್ ಪಕ್ಷದ ಮತದಾರರ ಅಧಿಕಾರ ಯಾತ್ರೆ ವೇಳೆ ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ವೇದಿಕೆಯಿಂದ ಇಳಿದ ನಂತರ, ರಿಝ್ವಿ ಪ್ರಧಾನಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು ಎಂದು arposiskq. ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಬಿಜೆಪಿ ನಾಯಕರ ಆಕ್ರೋಶದ ಹಿನ್ನೆಲೆ, ಆಗಸ್ಟ್ 28ರಂದು ಸಿಮ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ರಾತ್ರಿಯೇ ರಿಝ್ವಿ ಯನ್ನು ಬಂಧಿಸಿದರು.
“ಅವನನ್ನು ಬಂಧಿಸಿದ ದಿನದಿಂದ ನಾನು ಅಥವಾ ಅವನ ತಾಯಿ ಅವನನ್ನು ನೋಡಿಲ್ಲ. ಇತರ ಕುಟುಂಬದವರು ದರ್ಭಂಗಾ ಜೈಲಿಗೆ ಭೇಟಿ ನೀಡಿ ಬಂದಿದ್ದೇವೆ; ಅವನು ತುಂಬಾ ದುರ್ಬಲನಾಗಿದ್ದಾನೆ", ಎಂದು ಅನೀಶ್ ಕಣ್ಣೀರು ಒರೆಸಿಕೊಂಡು ಹೇಳಿದರು.
ಹೃದಯದ ಕಾಯಿಲೆಯಿಂದ ಬಳಲುತ್ತಿರುವ ಪತ್ನಿ ಚಾಂದ್ ಬೀಬಿ ಮತ್ತು ಎಂಟು ಮಕ್ಕಳಲ್ಲಿ ಮೂರನೆಯವನಾದ ರಿಝ್ವಿ ಕುಟುಂಬದ ಆರ್ಥಿಕ ಆಧಾರವಾಗಿದ್ದ. ಕಾರು ಚಾಲಕರಾಗಿ ಸಾಂದರ್ಭಿಕವಾಗಿ ಕೆಲಸ ಮಾಡುತ್ತಿದ್ದ ಅವನು ತಂದೆಗೆ ಸಹಾಯ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
“ಈಗ ನನ್ನ ಅಂಗಡಿಯೇ ಜೀವನೋಪಾಯ. ಆದರೆ ಘಟನೆ ಬಳಿಕ ಗ್ರಾಹಕರು ಬರೋದನ್ನೇ ನಿಲ್ಲಿಸಿದ್ದಾರೆ. 15,000 ಬಾಡಿಗೆ ಪಾವತಿಸಲು ಸಾಧ್ಯವಾಗುತ್ತಿಲ್ಲ. ಕೆಲವೊಮ್ಮೆ ಖಾಲಿ ಕೈಯಲ್ಲಿ ಮನೆಗೆ ಹೋಗುತ್ತೇನೆ,” ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಅನೀಶ್ ಈಗ ತಮ್ಮ ಮಗನ ಪ್ರಕರಣದ ಬಗ್ಗೆ ಮಾತನಾಡುವಂತಿಲ್ಲವೆಂದು ಅಲ್ಲಾಹನ ಹೆಸರಿನಲ್ಲಿ ಪ್ರಮಾಣ ಮಾಡಿದ್ದಾರೆ. “ನಾನು ಬಡವ. ಉಪರ್ವಲ್ಲಾ ಪರ್ ಭರವಸಾ ಹೈ (ದೇವರ ಮೇಲೆ ಭರವಸೆ ಇದೆ). ನ್ಯಾಯ ಸಿಗುವುದಾದರೆ, ಅದು ದೇವರ ಇಚ್ಛೆಯಿಂದಲೇ ಸಿಗುತ್ತದೆ,” ಎಂದು ಅವರು ದುಃಖದಿಂದ ಹೇಳಿದರು.
ಸೌಜನ್ಯ: thehindu.com







