ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ ಜೆಎಂಎಂ

ಹೇಮಂತ್ ಸೊರೇನ್ | Photo Credit : PTI
ರಾಂಚಿ: ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸೋಮವಾರ ಘೋಷಿಸಿರುವ ಜಾರ್ಖಂಡ್ ಆಡಳಿತಾರೂಢ ಪಕ್ಷ ಜಾರ್ಖಂಡ್ ಮುಕ್ತಿ ಮೋರ್ಚಾ (JMM), ತನ್ನ ಈ ನಿರ್ಧಾರಕ್ಕೆ ಆರ್ಜೆಡಿ-ಕಾಂಗ್ರೆಸ್ ಪಿತೂರಿ ಕಾರಣ ಎಂದು ಆರೋಪಿಸಿದೆ.
ಈ ಎರಡು ಪಕ್ಷಗಳು ತನಗೆ ಸ್ಥಾನಗಳನ್ನು ನಿರಾಕರಿಸಿವೆ ಎಂದೂ ಮಹಾಘಟಬಂಧನ್ ಅಂಗಪಕ್ಷವೂ ಆದ ಅದು ದೂರಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜೆಎಂಎಂ ಪಕ್ಷದ ಹಿರಿಯ ನಾಯಕ ಸುವಿದ್ಯಾ ಕುಮಾರ್, ಜಾರ್ಖಂಡ್ ನಲ್ಲಿನ ಕಾಂಗ್ರೆಸ್, ಆರ್ಜೆಡಿಯೊಂದಿಗೆ ಮೈತ್ರಿ ಕುರಿತು ಪಕ್ಷ ಪರಾಮರ್ಶೆ ನಡೆಸಲಿದ್ದು, ನಮಗೆ ಸ್ಥಾನಗಳನ್ನು ನಿರಾಕರಿಸಿರುವ ಈ ಪಕ್ಷಗಳಿಗೆ ತಕ್ಕ ಉತ್ತರ ನೀಡಲಾಗುವುದು” ಎಂದು ಎಚ್ಚರಿಸಿದ್ದಾರೆ.
ಇದಕ್ಕೂ ಮುನ್ನ, ಸೀಟು ಹಂಚಿಕೆ ಮಾತುಕತೆಗಳು ವಿಫಲಗೊಂಡಿರುವುದರಿಂದ, ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದ್ದು, ಬಿಹಾರದ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಹೇಳಿಕೆ ನೀಡಿದ್ದರು. ಇದಾದ ಕೇವಲ ಎರಡೇ ದಿನಗಳಲ್ಲಿ ಈ ಪ್ರಕಟನೆ ಹೊರ ಬಿದ್ದಿದೆ.
“ರಾಜಕೀಯ ಪಿತೂರಿಯ ಭಾಗವಾಗಿ ಜೆಎಂಎಂ ಚುನಾವಣೆಯಲ್ಲಿ ಸ್ಪರ್ಧಿಸದಂತಾಗಲು ಆರ್ಜೆಡಿ ಮತ್ತು ಕಾಂಗ್ರೆಸ್ ಪಕ್ಷಗಳೇ ಹೊಣೆ. ಇದಕ್ಕೆ ಜೆಎಂಎಂ ತಕ್ಕ ಪ್ರತ್ಯುತ್ತರ ನೀಡಲಿದ್ದು, ಆರ್ಜೆಡಿ ಮತ್ತು ಕಾಂಗ್ರೆಸ್ ನೊಂದಿಗೆ ಮೈತ್ರಿಯನ್ನು ಪರಾಮರ್ಶೆ ಮಾಡಲಾಗುವುದು” ಎಂದು ಜಾರ್ಖಂಡ್ ರಾಜ್ಯ ಪ್ರವಾಸೋದ್ಯಮ ಸಚಿವರೂ ಆದ ಸುವಿದ್ಯಾ ಕುಮಾರ್ ಹೇಳಿದ್ದಾರೆ.
ನವೆಂಬರ್ 11ರಂದು ಮತದಾನ ನಡೆಯಲಿರುವ ಚಕಾಯಿ, ಧಂದಾಹ, ಕಟೋರಿಯ, ಮನಿಹಾರಿ, ಜಮುಯಿ ಮತ್ತು ಪೀರ್ಪೈಂತಿ ಸ್ಥಾನಗಳಲ್ಲಿ ಸ್ಪರ್ಧಿಸಲಾಗುವುದು ಎಂದು ಇದಕ್ಕೂ ಮುನ್ನ, ಶನಿವಾರ ಜೆಎಂಎಂ ಪ್ರಕಟಿಸಿತ್ತು. ಈ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ಸೋಮವಾರ ಕೊನೆಯ ದಿನವಾಗಿತ್ತು.







