ಬಿಲ್ ಗೆ ಸ್ವಯಂಚಾಲಿತ ಸೇವಾಶುಲ್ಕ ಸೇರಿಸುತ್ತಿದ್ದ ಬಿಹಾರ ಕೆಫೆಗೆ 30 ಸಾವಿರ ರೂ. ದಂಡ

ಹೊಸದಿಲ್ಲಿ: ಮಾರ್ಗಸೂಚಿಯನ್ನು ಉಲ್ಲಂಘಿಸಿ ಗ್ರಾಹಕರಿಂದ ಸೇವಾ ಶುಲ್ಕವನ್ನು ಸಂಗ್ರಹಿಸುತ್ತಿದ್ದ ಪಾಟ್ನಾ ಹೋಟೆಲ್ ಒಂದಕ್ಕೆ ಕೇಂದ್ರೀಯ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) 30 ಸಾವಿರ ರೂಪಾಯಿ ದಂಡ ವಿಧಿಸಿದೆ. ಈ ದಂಡ ವಿಧಿಸುವ ಜತೆಗೆ ಸಂಗ್ರಹಿಸಿದ ಎಲ್ಲ ಸೇವಾ ಶುಲ್ಕವನ್ನು ಮರಳಿಸುವಂತೆಯೂ ನಿದೇರ್ಶನ ನೀಡಲಾಗಿದೆ. ತಕ್ಷಣದಿಂದಲೇ ಸೇವಾ ಶುಲ್ಕ ವಿಧಿಸುವ ಕ್ರಮ ಕೈಬಿಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಸೇವಾ ಶುಲ್ಕಕ್ಕೆ ಸಂಬಂಧಿಸಿದಂತೆ ಸಿಸಿಪಿಎ ನೀಡಿರುವ ಮಾರ್ಗಸೂಚಿಗಳಿಗೆ ಎಲ್ಲ ರೆಸ್ಟೋರೆಂಟ್ ಗಳು ಬದ್ಧವಾಗಿರಬೇಕು ಎಂದು ದೆಹಲಿ ಹೈಕೋರ್ಟ್ ಮಾರ್ಚ್ 28ರಂದು ತೀರ್ಪು ನೀಡಿದ ಬಳಿಕ ಮಾರ್ಗಸೂಚಿ ಉಲ್ಲಂಘಿಸಿದ ರೆಸ್ಟೋರೆಂಟ್ ಗೆ ಸಿಸಿಪಿಎ ಈ ದಂಡ ವಿಧಿಸಿದೆ. ಮಾರ್ಗಸೂಚಿಗೆ ಅನುಸಾರವಾಗಿ ನಡೆದುಕೊಳ್ಳದ ರೆಸ್ಟೋರೆಂಟ್ ಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಹೈಕೋರ್ಟ್ ಸಲಹೆ ನೀಡಿತ್ತು.
ಸಿಸಿಪಿಎ 2022ರ ಜುಲೈ 4ರಂದು ಮಾರ್ಗಸೂಚಿ ಹೊರಡಿಸಿ, ಯಾವುದೇ ಹೋಟೆಲ್ ಗಳು ಬಿಲ್ ನಲ್ಲಿ ಸ್ವಯಂಚಾಲಿತವಾಗಿ ಸೇವಾ ಶುಲ್ಕವನ್ನು ವಿಧಿಸುವಂತಿಲ್ಲ ಅಥವಾ ತಿಂಡಿ ತಿನಿಸಿನ ಬಿಲ್ ಹಾಗೂ ಜಿಎಸ್ ಟಿ ಜತೆಗೆ ಗ್ರಾಹಕರಿಂದ ಸೇವಾಶುಲ್ಕ ಸೇರಿದ ಬಿಲ್ ಸಂಗ್ರಹಿಸುವಂತಿಲ್ಲ. ಸೇವಾ ಶುಲ್ಕ ಐಚ್ಛಿಕ ಮತ್ತು ಗ್ರಾಹಕರಿಗೆ ಈ ಬಗ್ಗೆ ಮಾಹಿತಿ ನೀಡುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿತ್ತು.
ಕೆಫೆ ಬ್ಲೂ ಬಾಟಲ್ ಎಂಬ ಪಾಟ್ನಾ ರೆಸ್ಟೋರೆಂಟ್ ಜಿಎಸ್ ಟಿ ಜತೆಗೆ 801 ರೂಪಾಯಿ ಸೇವಾ ಶುಲ್ಕವನ್ನು ವಿಧಿಸಿದೆ ಎಂದು ಆಪಾದಿಸಿ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯಲ್ಲಿ ರವಿ ನಂದನ್ ಕುಮಾರ್ ಎಂಬವರು ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಸಿಸಿಪಿಎ ವಿಚಾರಣೆ ಕೈಗೆತ್ತಿಕೊಂಡಿತ್ತು.
ರವಿನಂದನ್ ಕುಮಾರ್ ಹೇಳಿಕೆಯನ್ನು ಪರಿಶೀಲಿಸಿದ ಸಿಸಿಪಿಎ, ಇಂಥ ಕ್ರಮದಿಂದ ಗ್ರಾಹಕ ವರ್ಗಕ್ಕೆ ಪರಿಣಾಮ ಆಗುತ್ತದೆಯೇ ಎಂದು ತನಿಖೆ ಕೈಗೊಂಡಿತ್ತು. ಇದಕ್ಕೆ ಪ್ರತಿಯಾಗಿ ರೆಸ್ಟೋರೆಂಟ್, ಸೇವಾ ಶುಲ್ಕ ಐಚ್ಛಿಕ; ಗ್ರಾಹಕರು ಅದನ್ನು ಪಾವತಿಸಲು ನಿರಾಕರಿಸಿದರೆ, ಬಿಲ್ನಿಂದ ಅದನ್ನು ಕಿತ್ತುಹಾಕಲಾಗುತ್ತದೆ ಎಂಬ ವಾದ ಮಂಡಿಸಿತ್ತು. ಗ್ರಾಹಕರಿಗೆ 591 ರೂಪಾಯಿ ಮರುಪಾವತಿ ಮಾಡಿದ ದಾಖಲೆಯನ್ನು ಕೂಡಾ ಸಿಸಿಪಿಎಗೆ ಸಲ್ಲಿಸಿತ್ತು.







