ಬಿಹಾರ ಚುನಾವಣೆ: ಪ್ರತಿ ಮೂವರಲ್ಲಿ ಒಬ್ಬ ಅಪರಾಧ ಹಿನ್ನೆಲೆಯ ಅಭ್ಯರ್ಥಿ

PC: x.com/the_hindu
ಪಾಟ್ನಾ: ಬಿಹಾರ ವಿಧಾನಸಭೆಗೆ ನ.6ರಂದು ನಡೆಯುವ ಮೊದಲ ಹಂತದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪ್ರತಿ ಮೂವರು ಅಭ್ಯರ್ಥಿಗಳ ಪೈಕಿ ಒಬ್ಬರು ಅಪರಾಧ ಹಿನ್ನಲೆ ಹೊಂದಿರುವ ಆತಂಕಕಾರಿ ಅಂಶ, ಅಭ್ಯರ್ಥಿಗಳು ಸಲ್ಲಿಸಿದ ಅಫಿಡವಿಟ್ ವಿಶ್ಲೇಷಣೆಯಿಂದ ಬೆಳಕಿಗೆ ಬಂದಿದೆ.
ಚುನಾವಣಾ ಸುಧಾರಣೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ಬಿಹಾರ್ ಎಲೆಕ್ಷನ್ ವಾಚ್ (ಬಿಇಡಬ್ಲ್ಯು), ಮೊದಲ ಹಂತದಲ್ಲಿ ಚುನಾವಣೆ ನಡೆಯುವ 121 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ 1314 ಅಭ್ಯರ್ಥಿಗಳ ಪೈಕಿ 1303 ಅಭ್ಯರ್ಥಿಗಳ ಅಫಿಡವಿಟ್ ವಿಶ್ಲೇಷಿಸಿ ಈ ವರದಿ ತಯಾರಿಸಿದೆ.
ಈ ವರದಿಯ ಪ್ರಕಾರ, 432 ಅಭ್ಯರ್ಥಿಗಳು ಅಂದರೆ ಶೇಕಡ 32ರಷ್ಟು ಮಂದಿ ತಮ್ಮ ವಿರುದ್ಧ ಅಪರಾಧ ಪ್ರಕರಣಗಳು ಇರುವುದನ್ನು ಘೋಷಿಸಿಕೊಂಡಿದ್ದಾರೆ. ಈ ಪೈಕಿ 354 ಮಂದಿ (ಶೇಕಡ 27) ಗಂಭೀರ ಅಪರಾಧ ಆರೋಪಗಳನ್ನು ಎದುರಿಸುತ್ತಿದ್ದಾರೆ. ಈ ಪೈಕಿ 33 ಅಭ್ಯರ್ಥಿಗಳ ವಿರುದ್ಧ ಕೊಲೆ ಆರೋಪಗಳಿದ್ದು, 86 ಮಂದಿಯ ವಿರುದ್ಧ ಕೊಲೆ ಯತ್ನ ಆರೋಪಗಳಿವೆ.
ಅಪರಾಧ ಪ್ರಕರಣಗಳು ಇರುವ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿರುವಲ್ಲಿ ಸಿಪಿಎಂ ಹಾಗೂ ಸಿಪಿಐಗೆ ಅಗ್ರಸ್ಥಾನ. ಈ ಪಕ್ಷಗಳ ಎಲ್ಲ ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನಲೆ ಹೊಂದಿದ್ದು, ಸಿಪಿಐ(ಎಂಎಲ್) ಕಣಕ್ಕೆ ಇಳಿಸಿದ ಅಭ್ಯರ್ಥಿಗಳ ಪೈಕಿ ಶೇಕಡ 93ರಷ್ಟು ಮಂದಿ ಈ ಹಿನ್ನೆಲೆಯವರು. ಪ್ರಮುಖ ಪಕ್ಷಗಳ ಪೈಕಿ ಆರ್ಜೆಡಿ (76%), ಬಿಜೆಪಿ ಹಾಗೂ ಕಾಂಗ್ರೆಸ್ (ಶೇಕಡ 65), ಎಲ್ಜೆಪಿ (54%), ಜೆಡಿಯು (39%), ಎಎಪಿ (27%) ಅಭ್ಯರ್ಥಿಗಳು ಕೂಡಾ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಮೊದಲ ಬಾರಿಗೆ ಕಣಕ್ಕೆ ಧುಮುಕಿರುವ ಜನ ಸುರಾಜ್ ಪಕ್ಷ ಕೂಡಾ ಇತರ ಪಕ್ಷಗಳಿಗಿಂತ ಹಿಂದುಳಿದಿಲ್ಲ. ಪಕ್ಷದ 114 ಅಭ್ಯರ್ಥಿಗಳ ಪೈಕಿ ಶೇಕಡ 44ರಷ್ಟು ಮಂದಿ ಅಂದರೆ 50 ಮಂದಿ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ಅಫಿಡವಿಟ್ ವಿಶ್ಲೇಷಣೆಗೆ ಒಳಪಟ್ಟ 1303 ಅಭ್ಯರ್ಥಿಗಳ ಪೈಕಿ 519 ಮಂದಿ (ಶೇಕಡ 40) ಕೋಟ್ಯಾಧೀಶರು. ಪ್ರಮುಖ ಪಕ್ಷಗಳ ಪೈಕಿ ಅತಿಹೆಚ್ಚು ಶ್ರೀಮಂತರನ್ನು ಹೊಂದಿರುವ ಹೆಗ್ಗಳಿಕೆ ಆರ್ಜೆಡಿಯದ್ದು. ಪಕ್ಷದ ಶೇಕಡ 97ರಷ್ಟು ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದರೆ, ಬಿಜೆಪಿ (92), ಜೆಡಿಯು (91), ಕಾಂಗ್ರೆಸ್ (78) ಎಲ್ಜೆಪಿ(77), ಜನ ಸುರಾಜ್ (71), ಸಿಪಿಎಂ (67), ಸಿಪಿಐ (60) ಕೂಡಾ ಕೋಟ್ಯಧಿಪತಿಗಳಿಗೆ ಮಣೆ ಹಾಕುವಲ್ಲಿ ಹಿಂದೆ ಬಿದ್ದಿಲ್ಲ. ಸಿಪಿಐ(ಎಂಎಲ್) ವತಿಯಿಂದ ಕಣಕ್ಕೆ ಇಳಿದವರ ಪೈಕಿ ಶೇಕಡ 14ರಷ್ಟು ಮಂದಿ ಮಾತ್ರ ಕೋಟ್ಯಧಿಪತಿಗಳು.







