Bihar|ಪ್ಯಾಸೆಂಜರ್ ರೈಲಿನಲ್ಲಿ ಬೆಂಕಿ: ತಪ್ಪಿದ ಅನಾಹುತ

Photo: screengrab/ x.com/nextminutenews7
ಹೊಸದಿಲ್ಲಿ: ಪಾಟ್ನಾಗೆ ತೆರಳುತ್ತಿದ್ದ ಫಾಸ್ಟ್ ಪ್ಯಾಸೆಂಜರ್ ರೈಲಿನ ಒಂದು ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ವರದಿಯಾಗಿದೆ. ಸಸರಾಂ ರೈಲು ನಿಲ್ದಾಣದಲ್ಲಿ ಈ ದುರಂತ ಸಂಭವಿಸಿದ್ದು, ರೈಲಿನ ಒಂದು ಬೋಗಿಯಿಂದ ದಟ್ಟಹೊಗೆ ವ್ಯಾಪಿಸುತ್ತಿರುವ ಹಾಗೂ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವ ದೃಶ್ಯ ತುಣುಕುಗಳು ವೈರಲ್ ಆಗಿವೆ.
ಶಾರ್ಟ್ಸರ್ಕ್ಯೂಟ್ ನಿಂದ ಈ ಬೆಂಕಿ ಆಕಸ್ಮಿಕ ಸಂಭವಿಸಿರಬೇಕು ಎಂದು ಆರಂಭಿಕ ತನಿಖೆಯಿಂದ ತಿಳಿದುಬಂದಿದೆ. ಪ್ಲಾಟ್ಫಾರಂ ನಂಬರ್ 6ರಲ್ಲಿ ಹೊರಡಲು ಸಜ್ಜಾಗಿದ್ದ ಸಸಾರಾಂ- ಪಾಟ್ನಾ ಫಾಸ್ಟ್ ಪ್ಯಾಸೆಂಜರ್ ರೈಲಿನ ಒಂದು ಬೋಗಿಯಲ್ಲಿ ರೈಲು ಹೊರಡುವ ಮುನ್ನ ಬೆಂಕಿ ಕಾಣಿಸಿಕೊಂಡಿದೆ.
ಇದು ಪ್ಲಾಟ್ಫಾರಂನಲ್ಲಿದ್ದ ಪ್ರಯಾಣಿಕರಲ್ಲಿ ಭೀತಿ ಸೃಷ್ಟಿಸಿತು. ಆದರೆ ಯಾವುದೇ ಸಾವು ನೋವು ಸಂಭವಿಸಿದ ವರದಿಯಾಗಿಲ್ಲ.
ಮಧ್ಯಪ್ರದೇಶದ ರತ್ಲಂ ರೈಲು ನಿಲ್ದಾಣದಲ್ಲಿ ದೆಹಲಿಗೆ ಹೊರಟಿದ್ದ ರಾಜಧಾನಿ ಎಕ್ಸ್ಪ್ರೆಸ್ ರೈಲಿನ ಎಸಿ ಬೋಗಿಯಲ್ಲಿ ಭಾರಿ ಬೆಂಕಿ ಅನಾಹುತ ಸಂಭವಿಸಿದ ಮರುದಿನವೇ ಈ ಘಟನೆ ವರದಿಯಾಗಿದೆ.




