ಬಿಹಾರ | ಆಶಾ ಕಾಯಕರ್ತೆಯರ ಪ್ರೋತ್ಸಾಹ ಧನ ಮೂರು ಪಟ್ಟು ಹೆಚ್ಚಳ
ಮಮತಾ ಕಾರ್ಯಕರ್ತೆಯರಿಗೆ ದ್ವಿಗುಣ

Photo Credit: PTI
ಪಾಟ್ನಾ, ಜು.30: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬುಧವಾರ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿರುವ ಆಶಾ ಮತ್ತು ಮಮತಾ ಕಾರ್ಯಕರ್ತೆಯರ ಪ್ರೋತ್ಸಾಹ ಧನದಲ್ಲಿ ಏರಿಕೆಯನ್ನು ಪ್ರಕಟಿಸಿದ್ದಾರೆ.
ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನವನ್ನು 1,000 ರೂ.ಗಳಿಂದ 3,000 ರೂ.ಗಳಿಗೆ ಮತ್ತು ಮಮತಾ ಕಾರ್ಯಕರ್ತೆಯರಿಗೆ ಪ್ರತಿ ಹೆರಿಗೆಗೆ ಈಗ ನೀಡಲಾಗುತ್ತಿರುವ 300 ರೂ.ಗಳ ಪ್ರೋತ್ಸಾಹ ಧನವನ್ನು 600 ರೂ.ಗಳಿಗೆ ಹೆಚ್ಚಿಸಲಾಗುವುದು. ಇದು ಅವರ ಮನೋಬಲವನ್ನು ಹೆಚ್ಚಿಸಲಿದೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳನ್ನು ಬಲಗೊಳಿಸಲಿದೆ ಎಂದು ನಿತೀಶ್ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಮಮತಾ ಕಾರ್ಯಕರ್ತೆಯರು ಸುರಕ್ಷಿತ ಹೆರಿಗೆ ಮತ್ತು ಹೆರಿಗೆ ನಂತರ ತಾಯಿ-ಮಗುವಿನ ಆರೋಗ್ಯದ ಕುರಿತು ಜನರಲ್ಲಿ ಜಾಗ್ರತಿಯನ್ನು ಹೆಚ್ಚಿಸುವ ಕರ್ತವ್ಯ ನಿರ್ವಹಿಸುತ್ತಾರೆ.
ಈ ವರ್ಷಾಂತ್ಯದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಸುರಕ್ಷತಾ ಜಾಲವನ್ನು ವಿಸ್ತರಿಸುವ ಗುರಿಯೊಂದಿಗೆ ಮಾನ್ಯತೆ ಹೊಂದಿರುವ ಪತ್ರಕರ್ತರಿಗೆ ಪಿಂಚಣಿ ಹೆಚ್ಚಳ, ಸರಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ.35 ಮೀಸಲಾತಿ ರಾಜ್ಯದ ಕಾಯಂ ನಿವಾಸಿಗಳಿಗೆ ಮಾತ್ರ ಸೀಮಿತ, ಗೃಹಬಳಕೆ ಗ್ರಾಹಕರಿಗೆ 125 ಯೂನಿಟ್ ಉಚಿತ ವಿದ್ಯುತ್, ರಾಜ್ಯ ನೈರ್ಮಲ್ಯ ಕಾರ್ಮಿಕರ ಆಯೋಗ ರಚನೆ ಸೇರಿದಂತೆ ಸರಣಿ ಸಾಮಾಜಿಕ ಕಲ್ಯಾಣ ಉಪಕ್ರಮಗಳನ್ನು ನಿತೀಶ್ ಸರಕಾರವು ಪ್ರಕಟಿಸಿದೆ.







