Bihar | ಸರಕಾರಿ ಶಾಲೆಯ ಶಿಥಿಲಗೊಂಡ ಛಾವಣಿಗೆ ಬೆಂಚ್–ಡೆಸ್ಕ್ಗಳೇ ಆಧಾರ!
ಕಂಬ ಕುಸಿದು ತಿಂಗಳುಗಳು ಕಳೆದರೂ ದುರಸ್ತಿಯಿಲ್ಲ; 191 ವಿದ್ಯಾರ್ಥಿಗಳಿರುವ ಶಾಲೆಯ ದುಸ್ಥಿತಿ

ದರ್ಭಂಗಾ, ಅ.4: ಕಂಬವೊಂದು ಕುಸಿದು ಮೂರರಿಂದ ನಾಲ್ಕು ತಿಂಗಳು ಕಳೆದರೂ ಅದರ ಬದಲಿಗೆ ಹೊಸ ಕಂಬ ಅಳವಡಿಸದೆ, ಛಾವಣಿಗೆ ಬೆಂಚ್ ಗಳು, ಡೆಸ್ಕ್ ಗಳು ಮತ್ತು ಇಟ್ಟಿಗೆಗಳನ್ನೇ ಆಧಾರವಾಗಿ ಇರಿಸಿರುವ ಘಟನೆ ಬಿಹಾರದ ದರ್ಭಂಗಾ ಜಿಲ್ಲೆಯ ಅಲಿನಗರ್ ಬ್ಲಾಕ್ ನ ಕಿರಾತ್ಪುರ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
191 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಈ ಶಾಲೆಯ ಕಟ್ಟಡದ ಸ್ಥಿತಿ ಮಕ್ಕಳ ಸುರಕ್ಷತೆ ಕುರಿತು ಆತಂಕ ಮೂಡಿಸಿದೆ.
ಒಂದರಿಂದ ಐದನೇ ತರಗತಿವರೆಗೆ ತರಗತಿಗಳಿರುವ ಈ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೇವಲ ಎರಡು ಕೊಠಡಿಗಳಿವೆ. ಒಂದು ಕೊಠಡಿಯಲ್ಲಿ ಕಚೇರಿಯ ಪೀಠೋಪಕರಣಗಳು ಮತ್ತು ಬೀರು ಇರುವುದರಿಂದ ತರಗತಿಗಳಿಗೆ ಲಭ್ಯವಿರುವ ಸ್ಥಳ ಮತ್ತಷ್ಟು ಕಡಿಮೆಯಾಗಿದೆ. ಕಟ್ಟಡ ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ಶಾಲಾ ಆವರಣದಲ್ಲಿನ ತೆರೆದ ಪ್ರದೇಶಗಳು ಮತ್ತು ಅಡುಗೆ ಕೋಣೆಯ ಶೆಡ್ನಲ್ಲಿ ಪಾಠ ನಡೆಸಲಾಗುತ್ತಿದೆ.
ಕೇಂದ್ರದ ‘ಆಪರೇಷನ್ ಬ್ಲ್ಯಾಕ್ಬೋರ್ಡ್’ ಕಾರ್ಯಕ್ರಮದಡಿ 1983ರಲ್ಲಿ ಈ ಎರಡು ಕೊಠಡಿಗಳ ಕಟ್ಟಡವನ್ನು ನಿರ್ಮಿಸಲಾಗಿತ್ತು. ನಾಲ್ಕು ದಶಕಗಳ ಬಳಿಕ ಕಟ್ಟಡದ ಸ್ಥಿತಿ ಹದಗೆಟ್ಟಿದೆ.
ಮಳೆ ಬಂದಾಗ ಛಾವಣಿ ಸೋರಿಕೆಯಾಗುತ್ತದೆ. ಹಲವು ಬೀಮ್ ಗಳು ಮತ್ತು ಕಂಬಗಳು ಶಿಥಿಲಗೊಂಡಿವೆ. ಹಲವು ಕಡೆ ಪ್ಲಾಸ್ಟರ್ ಉದುರಿಹೋಗಿದ್ದು, ಬಲವರ್ಧಕ ಸರಳುಗಳು ಹೊರಗೆ ಕಾಣಿಸುತ್ತಿವೆ.
ಸುಮಾರು ಮೂರರಿಂದ ನಾಲ್ಕು ತಿಂಗಳ ಹಿಂದೆ ಕಂಬವೊಂದು ಕುಸಿದ ಬಳಿಕ ಪರಿಸ್ಥಿತಿ ಮತ್ತಷ್ಟು ಅಪಾಯಕಾರಿಯಾಗಿದೆ. ಕುಸಿದ ಕಂಬದ ಬದಲಿಗೆ ಹೊಸ ಕಂಬ ನಿರ್ಮಿಸದೆ, ಅದರ ಕೆಳಗೆ ಬೆಂಚ್ ಗಳು, ಡೆಸ್ಕ್ ಗಳು ಮತ್ತು ಇಟ್ಟಿಗೆಗಳನ್ನು ಇರಿಸಿ ಛಾವಣಿಗೆ ತಾತ್ಕಾಲಿಕ ಆಧಾರ ನೀಡಲಾಗಿದೆ ಎಂದು ಶಾಲಾ ಅಧಿಕಾರಿಗಳು ತಿಳಿಸಿದ್ದಾರೆ.
"ಕಂಬ ಕುಸಿದ ನಂತರ ಛಾವಣಿಗೆ ಆಧಾರ ನೀಡಲು ಬೆಂಚ್ ಗಳು ಮತ್ತು ಡೆಸ್ಕ್ ಗಳನ್ನು ಬಳಸಲಾಗಿದೆ. ಅಪಾಯ ಇನ್ನೂ ಹಾಗೆಯೇ ಇದೆ" ಎಂದು ಸಹಾಯಕ ಶಿಕ್ಷಕ ಪವನ್ ಕುಮಾರ್ ಚೌಧರಿ ಹೇಳಿದರು.
ಕಟ್ಟಡದ ಸ್ಥಿತಿಗತಿ ಕುರಿತು ಶಿಕ್ಷಣ ಇಲಾಖೆ ಮತ್ತು ಇತರ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮಾಹಿತಿ ನೀಡಲಾಗಿದೆ ಎಂದು ಅವರು ತಿಳಿಸಿದರು. ಗ್ರಾಮಸ್ಥರೂ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
"ಮಕ್ಕಳ ಸುರಕ್ಷತೆ ಬಗ್ಗೆ ಪದೇ ಪದೇ ಮನವಿ ಮಾಡಿದ್ದೇವೆ. ಶೀಘ್ರದಲ್ಲೇ ಹೊಸ ಕಟ್ಟಡ ನಿರ್ಮಿಸದಿದ್ದರೆ ಹೋರಾಟ ಆರಂಭಿಸುತ್ತೇವೆ" ಎಂದು ಗ್ರಾಮಸ್ಥ ಪರ್ಜಿತ್ ಯಾದವ್ ಹೇಳಿದರು.
ಶಾಲೆಯ ಕಟ್ಟಡದ ಸ್ಥಿತಿ ಕುರಿತು ಬ್ಲಾಕ್ ಮಟ್ಟದಿಂದ ಜಿಲ್ಲಾ ಮಟ್ಟದ ಅಧಿಕಾರಿಗಳವರೆಗೆ ಸುಮಾರು ಐದರಿಂದ ಆರು ಬಾರಿ ಮಾಹಿತಿ ನೀಡಲಾಗಿದೆ ಎಂದು ಮುಖ್ಯೋಪಾಧ್ಯಾಯ ರಾಜೇಂದ್ರ ಕುಮಾರ್ ತಿಳಿಸಿದರು.
ಲಿಖಿತ ಸಂವಹನವನ್ನೂ ಕಳುಹಿಸಲಾಗಿದೆ. ಅಧಿಕಾರಿಗಳು ಸ್ಥಳ ಪರಿಶೀಲನೆಯನ್ನೂ ನಡೆಸಿದ್ದಾರೆ. ಆದರೆ ಇದುವರೆಗೆ ಶಾಶ್ವತ ದುರಸ್ತಿ ಅಥವಾ ಪರ್ಯಾಯ ಕಟ್ಟಡದ ವ್ಯವಸ್ಥೆ ಮಾಡಲಾಗಿಲ್ಲ ಎಂದು ಅವರು ಹೇಳಿದರು.
ಹೊಸ ಕಟ್ಟಡ ನಿರ್ಮಾಣದ ಕೆಲಸ ಈಗ ನಡೆಯುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಹಳೆಯ ಕಟ್ಟಡವನ್ನು ಅಸುರಕ್ಷಿತ ಎಂದು ಘೋಷಿಸಲಾಗಿದ್ದು, ಅಲ್ಲಿ ಯಾವುದೇ ಬೋಧನಾ ಚಟುವಟಿಕೆ ನಡೆಸಲಾಗುತ್ತಿಲ್ಲ ಎಂದು ದರ್ಭಂಗಾ ಜಿಲ್ಲಾ ಶಿಕ್ಷಣಾಧಿಕಾರಿ (DEO) ವಿದ್ಯಾನಂದ ಠಾಕೂರ್ ಹೇಳಿದರು.
"ಎರಡು ಕೊಠಡಿಗಳಿರುವ ಈಗಿನ ಕಟ್ಟಡವನ್ನು 1983ರಲ್ಲಿ ‘ಆಪರೇಷನ್ ಬ್ಲ್ಯಾಕ್ಬೋರ್ಡ್’ ಯೋಜನೆಯಡಿ ಗ್ರಾಮದ ಮೊದಲ ಪ್ರಾಥಮಿಕ ಶಾಲೆಯಾಗಿ ನಿರ್ಮಿಸಲಾಗಿತ್ತು. ಪ್ರಸ್ತುತ ಶಾಲಾ ಆವರಣದಲ್ಲಿರುವ ಅಡುಗೆ ಕೋಣೆಯ ಶೆಡ್ ನಲ್ಲಿ ಬೋಧನೆ ನಡೆಯುತ್ತಿದೆ" ಎಂದು ಠಾಕೂರ್ ಹೇಳಿದರು.
ಶಾಲೆಯಲ್ಲಿ ಬಳಕೆಗೆ ಲಭ್ಯವಿರುವ ಸ್ಥಳ ಬಹಳ ಸೀಮಿತವಾಗಿದೆ. ಒಂದು ಕೊಠಡಿಯಲ್ಲಿ ಕಪಾಟು ಇರಿಸಲಾಗಿದೆ. ಇನ್ನೊಂದು ಕೊಠಡಿ ಮತ್ತು ವರಾಂಡಾದಲ್ಲಿ ಬೆಂಚ್ ಗಳು ಹಾಗೂ ಡೆಸ್ಕ್ ಗಳನ್ನು ಇರಿಸಲಾಗಿದೆ ಎಂದು ಅವರು ತಿಳಿಸಿದರು.
ಹೊಸ ಕಟ್ಟಡ ನಿರ್ಮಾಣದ ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ಈಗಾಗಲೇ ಇಲಾಖೆಗೆ ಸಲ್ಲಿಸಲಾಗಿದೆ. ಆರು ಕೊಠಡಿಗಳ ಶಾಲಾ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಿದ್ಧಪಡಿಸಲಾಗಿದ್ದು, ಬಿಹಾರ ಶಾಲಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಮೂಲಕ ಕಟ್ಟಡ ನಿರ್ಮಿಸಲಾಗುವುದು ಎಂದು ಠಾಕೂರ್ ಹೇಳಿದರು.
ಹೊಸ ಕಟ್ಟಡ ನಿರ್ಮಾಣವಾದ ಬಳಿಕ ಹಳೆಯ ಕಟ್ಟಡವನ್ನು ಸಂಬಂಧಪಟ್ಟ ಸಂಸ್ಥೆಯು ತೆರವುಗೊಳಿಸಲಿದೆ ಎಂದು ಅವರು ತಿಳಿಸಿದರು.
ಕಿರಾತ್ಪುರ ಪ್ರಾಥಮಿಕ ಶಾಲೆಯನ್ನು ರಾಜ್ಯ ಸರ್ಕಾರದ ‘ಸೇವಾ ಸಂಕಲ್ಪ ಏವಂ ಕಾಯಕಲ್ಪ ಅಭಿಯಾನ’ದಡಿಯೂ ಸೇರಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ದುರಸ್ತಿ, ಬಣ್ಣ ಬಳಿಯುವಿಕೆ ಹಾಗೂ ಅಗತ್ಯವಿರುವ ಕಡೆ ಆವರಣ ಗೋಡೆ ನಿರ್ಮಿಸುವ ಮೂಲಕ ಮೂಲಸೌಕರ್ಯ ಸುಧಾರಿಸುವುದು ಈ ಅಭಿಯಾನದ ಉದ್ದೇಶವಾಗಿದೆ.
ದರ್ಭಂಗಾ ಜಿಲ್ಲೆಯಲ್ಲಿ ಈ ಯೋಜನೆಯ ವ್ಯಾಪ್ತಿ ದೊಡ್ಡದಾಗಿದೆ. ಜಿಲ್ಲೆಯ ಒಟ್ಟು 2,585 ಸರ್ಕಾರಿ ಶಾಲೆಗಳ ಪೈಕಿ 1,968 ಶಾಲೆಗಳನ್ನು ಯೋಜನೆಗೆ ಆಯ್ಕೆ ಮಾಡಲಾಗಿದೆ. ಇದರಲ್ಲಿ 1,300 ಪ್ರಾಥಮಿಕ ಶಾಲೆಗಳೂ ಸೇರಿವೆ ಎಂದು ಠಾಕೂರ್ ಹೇಳಿದರು.
ದರ್ಭಂಗಾ ಜಿಲ್ಲೆಯಲ್ಲಿ 47 ಸಂಸ್ಕೃತ ಶಾಲೆಗಳು, 180 ಮದರಸಾಗಳು ಮತ್ತು 554ಕ್ಕೂ ಹೆಚ್ಚು ನೋಂದಾಯಿತ ಖಾಸಗಿ ಶಾಲೆಗಳಿವೆ ಎಂದು DEO ಮಾಹಿತಿ ನೀಡಿದ್ದಾರೆ.






