ಬಿಹಾರ ಎಸ್ಐಆರ್ | 2,92,048 ಮತದಾರರ ಮನೆ ಸಂಖ್ಯೆ ‘0’! : ಕರಡು ಮತದಾರರ ಪಟ್ಟಿಗಳಿಂದ ಬಹಿರಂಗ

Photo | thenewsminute
ಪಾಟ್ನಾ,ಆ.11: ಬಿಹಾರದಲ್ಲಿ 2,92,048 ಮತದಾರರು ‘0’, ‘00’ ಮತ್ತು ‘000’ ಮನೆ ಸಂಖ್ಯೆಗಳನ್ನು ಹೊಂದಿರುವುದನ್ನು ಚುನಾವಣಾ ಆಯೋಗವು ವಿವಾದಾತ್ಮಕ ವಿಶೇಷ ತೀವ್ರ ಪರಿಷ್ಕರಣೆ(ಎಸ್ಐಆರ್)ಯ ಬಳಿಕ ಸಿದ್ಧಪಡಿಸಿರುವ ಕರಡು ಮತದಾರರ ಪಟ್ಟಿಗಳ ವಿಶ್ಲೇಷಣೆಯು ತೋರಿಸಿದೆ. ಕರಡು ಪಟ್ಟಿಗಳನ್ನು ಆ.1ರಂದು ಚುನಾವಣಾ ಆಯೋಗ(ಇಸಿಐ)ದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.
ಇಂತಹ ‘ತಪ್ಪುಗಳು’ ಪಟ್ಟಿಗಳಲ್ಲಿ ನುಸುಳಿರುವುದನ್ನು ಒಪ್ಪಿಕೊಂಡ ಬಿಹಾರದ ಉಪ ಮುಖ್ಯ ಚುನಾವಣಾಧಿಕಾರಿ ಅಶೋಕ ಪ್ರಿಯದರ್ಶಿ ಅವರು, ‘‘ಕೆಲವೊಮ್ಮೆ ಮತದಾರರು ತಮ್ಮ ಮನೆ ಸಂಖ್ಯೆಗಳನ್ನು ಭರ್ತಿ ಮಾಡುವುದಿಲ್ಲ, ಆದಾಗ್ಯೂ ಇಸಿಐ ವೆಬ್ಸೈಟ್ ಈಗಲೂ ಅಂತಹ ನೋಂದಣಿ ಅರ್ಜಿಗಳನ್ನು ಸ್ವೀಕರಿಸುತ್ತಿದೆ. ಅದಕ್ಕಾಗಿಯೇ ಮನೆ ಸಂಖ್ಯೆಯ ಡೀಫಾಲ್ಟ್ ಮೌಲ್ಯವನ್ನು ‘0’ ಎಂದು ತೋರಿಸಲಾಗಿದೆ. ಅದನ್ನು ಸರಿಪಡಿಸಲು ನಾವು ಪ್ರಯತ್ನಿಸುತ್ತೇವೆ ’’ಎಂದು ಹೇಳಿದರು.
ಬಿಹಾರದ ಒಟ್ಟು 243 ವಿಧಾನಸಭಾ ಕ್ಷೇತ್ರಗಳ ಪೈಕಿ 235 ಕ್ಷೇತ್ರಗಳಲ್ಲಿಯ 87,898 ಮತಗಟ್ಟೆಗಳ ಏಳು ಕೋ.ಗೂ ಅಧಿಕ ಮತದಾರರ ಕರಡು ಪಟ್ಟಿಗಳನ್ನು ಸುದ್ದಿ ಜಾಲತಾಣ Newslaunndry ವಿಶ್ಲೇಷಿಸಿದೆ. ಚುನಾವಣಾ ಆಯೋಗವು ತನ್ನ ವೆಬ್ಸೈಟ್ನಲ್ಲಿ ಮತದಾರರ ಪಟ್ಟಿಗಳ ಸ್ವರೂಪವನ್ನು ‘ಮಷಿನ್ ರೀಡೇಬಲ್(ಕಂಪ್ಯೂಟರ್ ಓದಬಲ್ಲ)’ ಸಾಧ್ಯವಾಗದ ರೀತಿಗೆ ಬದಲಿಸಿರುವುದರಿಂದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿಯ 2,184 ಮತಗಟ್ಟೆಗಳನ್ನು ವಿಶ್ಲೇಷಿಸಲು ಸಾಧ್ಯವಾಗಿಲ್ಲ. ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ‘ಮತ ಕಳವು’ ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಆ.7ರಂದು ಆರೋಪಿಸಿದ ಬಳಿಕ ಈ ಬದಲಾವಣೆ ನಡೆದಿದೆ. ಅಲ್ಲಿ ಮತದಾರರ ಪಟ್ಟಿಗಳನ್ನು ಆರಂಭದಲ್ಲಿ ಕಂಪ್ಯೂಟರ್ ಓದಬಲ್ಲ ಸ್ವರೂಪದಲ್ಲಿ ಅಪ್ಲೋಡ್ ಮಾಡಲಾಗಿತ್ತು.
ಕಂಪ್ಯೂಟರ್ ಓದಬಲ್ಲ ಸ್ವರೂಪದಲ್ಲಿರುವ ದತ್ತಾಂಶವು ಕಂಪ್ಯೂಟರ್ಗಳು ಅದರಿಂದ ಮಾಹಿತಿಯನ್ನು ಸುಲಭವಾಗಿ ಓದಬಹುದಾದ ಮತ್ತು ಸಂಸ್ಕರಿಸಬಹುದಾದ ರೀತಿಯಲ್ಲಿ ರಚನೆಯಾಗಿರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಕಂಪ್ಯೂಟರ್ ಓದಲಾಗದ ಸ್ವರೂಪದಲ್ಲಿರುವ ದತ್ತಾಂಶಗಳನ್ನು ಕಂಪ್ಯೂಟರ್ಗಳು ಮಾನವ ಹಸ್ತಕ್ಷೇಪವಿಲ್ಲದೆ ಪರಿಣಾಮಕಾರಿಯಾಗಿ ಓದುವುದು ಅಥವಾ ವಿಶ್ಲೇಷಿಸುವುದು ಕಷ್ಟ ಅಥವಾ ಅಸಾಧ್ಯ.
‘0’ ಮನೆ ಸಂಖ್ಯೆಯನ್ನು ಹೊಂದಿರುವ ಮತದಾರರು ಬಿಹಾರದ ಮಗಧ ಮತ್ತು ಪಾಟ್ನಾ ಪ್ರದೇಶಗಳಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಕೃಪೆ: Newslaunndry







