ಬಿಹಾರ ಎಸ್ಐಆರ್: ಮೂರು ಕ್ಷೇತ್ರಗಳಲ್ಲಿ ತಪ್ಪು, ನಕಲಿ ವಿಳಾಸಗಳಲ್ಲಿ 80,000 ಮತದಾರರ ನೋಂದಣಿ!

ಚುನಾವಣಾ ಆಯೋಗ | PC ; Election Commission of India
ಪಾಟ್ನಾ: ಬಿಹಾರದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 80,000 ಮತದಾರರು ನಕಲಿ ಅಥವಾ ತಪ್ಪು ವಿಳಾಸಗಳೊಂದಿಗೆ ನೋಂದಣಿಯಾಗಿರುವುದನ್ನು ಅಂತರರಾಷ್ಟ್ರೀಯ ಪತ್ರಕರ್ತರ ಗುಂಪು ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ನ ಇತ್ತೀಚಿನ ತನಿಖೆಯು ಬಯಲಿಗೆಳೆದಿದೆ. ಚುನಾವಣಾ ಆಯೋಗವು ಬಿಹಾರದಲ್ಲಿ ವಿವಾದಾತ್ಮಕ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಯ ಮೊದಲ ಹಂತವನ್ನು ಇತ್ತೀಚಿಗೆ ಪೂರ್ಣಗೊಳಿಸಿದೆ.
ಚುನಾವಣಾ ಆಯೋಗವು ಆ.1ರಂದು ಬಿಡುಗಡೆಗೊಳಿಸಿದ ಕರಡು ಮತದಾರರ ಪಟ್ಟಿಗಳ ಪ್ರಕಾರ, ಪಿಪ್ರಾ, ಬಗಹಾ ಮತ್ತು ಮೋತಿಹಾರಿ ವಿಧಾನಸಭಾ ಕ್ಷೇತ್ರಗಳಲ್ಲಿ ವಂಚನೆ ನೋಂದಣಿಗಳ 3,950 ಪ್ರಕರಣಗಳನ್ನು ʼರಿಪೋರ್ಟರ್ಸ್ ಕಲೆಕ್ಟಿವ್ʼ ರವಿವಾರ ಬಿಡುಗಡೆಗೊಳಿಸಿದ ವರದಿಯು ಬಹಿರಂಗಗೊಳಿಸಿದೆ.
ಹಲವಾರು ಪ್ರಕರಣಗಳಲ್ಲಿ ಅನೇಕ ಮತದಾರರ ಹೆಸರುಗಳನ್ನು ಒಂದೇ ವಿಳಾಸದಡಿ ನೋಂದಾಯಿಸಲಾಗಿದೆ. ಈ ಪೈಕಿ ಅಸ್ತಿತ್ವದಲ್ಲಿಯೇ ಇಲ್ಲದ ಮನೆಸಂಖ್ಯೆಗಳು,ಗ್ರಾಮಗಳು ಅಥವಾ ವಾರ್ಡ್ಗಳ ಹೆಸರುಗಳಿರುವ ವಿಳಾಸಗಳು ಸೇರಿವೆ. ಗಮನಾರ್ಹವಾಗಿ ಈ ಪೈಕಿ ಕೆಲವು ಮತದಾರರು 2003ರ ಮತದಾರರ ಪಟ್ಟಿಗಳಲ್ಲಿ ತಮ್ಮ ಸರಿಯಾದ ವಿಳಾಸಗಳೊಂದಿಗೆ ನೋಂದಾಯಿಸಲ್ಪಟ್ಟಿದ್ದರು, ಈಗ ತಪ್ಪುಗಳನ್ನು ಸೃಷ್ಟಿಸಲು ಈ ಮತದಾರರ ಪಟ್ಟಿಗಳನ್ನು ಪರಿಷ್ಕರಿಸಲಾಗಿದೆ.
‘ನಮ್ಮ ತನಿಖೆಯು ಎಸ್ಐಆರ್ನಲ್ಲಿ ವ್ಯವಸ್ಥಿತ ಮತ್ತು ಭಾರೀ ಪ್ರಮಾಣದ ಲೋಪಗಳ ದಿಗ್ಭ್ರಮೆಗೊಳಿಸುವ ಪುರಾವೆಗಳನ್ನು ಬಹಿರಂಗಗೊಳಿಸಿದೆ. ಚುನಾವಣಾ ಆಯೋಗವು ಆತುರದಿಂದ ನಡೆಸಿದ ಪರಿಷ್ಕರಣೆಯು ಹಿಂದಿನ ಮತದಾರರ ಪಟ್ಟಿಗಳಲ್ಲಿಯ ಸಮಸ್ಯೆಗಳು,ತಪ್ಪುಗಳು ಮತ್ತು ನಕಲಿ ನೋಂದಣಿಗಳನ್ನು ನಿವಾರಿಸುವಲ್ಲಿ ವಿಫಲಗೊಂಡಿದೆ ಎನ್ನುವುದನ್ನು ದತ್ತಾಂಶಗಳು ತೋರಿಸಿವೆ’ ಎಂದು ವರದಿಯು ತಿಳಿಸಿದೆ.
ರಿಪೋರ್ಟರ್ಸ್ ಕಲೆಕ್ಟಿವ್ ಬೆಟ್ಟು ಮಾಡಿರುವ ಪ್ರಕರಣವೊಂದರಲ್ಲಿ ಪಿಪ್ರಾ ವಿಧಾನಸಭಾ ಕ್ಷೇತ್ರದ ಗಾಲಿಮ್ಪುರ ಗ್ರಾಮದ ಎರಡು ಅಕ್ಕಪಕ್ಕದ ಮತಗಟ್ಟೆಗಳ ಮತದಾರರ ಪಟ್ಟಿಗಳಲ್ಲಿ 459 ಮತ್ತು 509 ಜನರು ಅನುಕ್ರಮವಾಗಿ ಮನೆ ಸಂಖ್ಯೆ 39 ಮತ್ತು 4ರಲ್ಲಿ ವಾಸವಾಗಿದ್ದಾರೆಂದು ತೋರಿಸಲಾಗಿದೆ. ಈ ವ್ಯಕ್ತಿಗಳು ವಿಭಿನ್ನ ಕುಟುಂಬಗಳು,ಜಾತಿಗಳು ಮತ್ತು ಸಮುದಾಯಗಳಿಗೆ ಸೇರಿದವರಾಗಿದ್ದಾರೆ.
ಮಾಂಝಿ-ಮುಸಾಹರ್ ಮತ್ತು ಬ್ರಾಹ್ಮಣ-ಬನಿಯಾ ಜಾತಿಗಳ ಜನರು ಒಟ್ಟಿಗೆ ವಾಸಿಸಲು ಹೇಗೆ ಸಾಧ್ಯ? ಇದು ಹೆಸರುಗಳು ಮತ್ತು ಸಂಖ್ಯೆಗಳನ್ನು ಭರ್ತಿ ಮಾಡುವವರ ಕೈವಾಡವಾಗಿದೆ ಎಂದು ಮನೆ ಸಂಖ್ಯೆ 4ರಡಿ ನೋಂದಾಯಿತ 509 ಮತದಾರರಲ್ಲೋರ್ವರು ಹೇಳಿದ್ದನ್ನು ವರದಿಯು ಉಲ್ಲೇಖಿಸಿದೆ.
ಮಾಂಝಿ ಮತ್ತು ಮುಸಾಹರ್ನಂತಹ ದಲಿತ ಸಮುದಾಯಗಳ ಅತ್ಯಂತ ಹಿಂದುಳಿದವರನ್ನು ಬ್ರಾಹ್ಮಣ ಮತ್ತು ಬನಿಯಾಗಳಂತಹ ಮೇಲ್ಜಾತಿಗಳ ಜನರೊಂದಿಗೆ ಒಂದೇ ಸೂರಿನಡಿ ಇರಿಸಿರುವ ಚುನಾವಣಾ ಅಧಿಕಾರಿಗಳ ‘ಧೈರ್ಯ’ವನ್ನು ಪ್ರಶ್ನಿಸಿದ ಮತದಾರ, ಗ್ರಾಮೀಣ ಬಿಹಾರದಲ್ಲಿ ಹೀಗೆ ಜೊತೆಯಾಗಿ ವಾಸವಾಗಿರುವುದು ವಾಸ್ತವಕ್ಕೆ ದೂರವಾಗಿದೆ ಎಂದು ಹೇಳಿದ್ದಾರೆ.
ಈ ನಡುವೆ 2003ರ ಮತದಾರರ ಪಟ್ಟಿಯಲ್ಲಿ ತಮ್ಮ ಸರಿಯಾದ ವಿಳಾಸಗಳೊಂದಿಗೆ ನೋಂದಾಯಿಸಲ್ಪಟ್ಟಿದ್ದ 459 ಮತದಾರರನ್ನು ಕರಡು ಮತದಾರರ ಪಟ್ಟಿಯಲ್ಲಿ ಒಗ್ಗೂಡಿಸಿ ಅಸ್ತಿತ್ವದಲ್ಲಿಲ್ಲದ ಮನೆಸಂಖ್ಯೆಯಡಿ ನೋಂದಾಯಿಸಿರುವುದು ಕಂಡು ಬಂದಿದೆ ಎಂದು ವರದಿಯು ತಿಳಿಸಿದೆ.
22 ವರ್ಷಗಳ ಬಳಿಕ ಎರಡು ತಿಂಗಳುಗಳಲ್ಲಿ ತಂತ್ರಜ್ಞಾನ ಮತ್ತು ಮಾನವ ಶಕ್ತಿಯ ಹೆಚ್ಚಿನ ಬಳಕೆಯೊಂದಿಗೆ ‘ಸ್ವಚ್ಛ’ ಮತದಾರರ ಪಟ್ಟಿಗಳನ್ನು ರಚಿಸುವ ನೆಪದಲ್ಲಿ ಆಯೋಗವು ಇನ್ನೂ ಕೆಟ್ಟದ್ದನ್ನು ಮಾಡಿದೆ ಎಂದು ಬೆಟ್ಟು ಮಾಡಿರುವ ವರದಿಯು, ಬಿಹಾರದ ಚಂಪಾರಣ್ ಪ್ರದೇಶದ ಪಿಪ್ರಾ,ಬಗಹಾ ಮತ್ತು ಮೋತಿಹಾರಿ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ಸುಮಾರು 10 ಲಕ್ಷ ನೋಂದಾಯಿತ ಮತದಾರರಿದ್ದಾರೆ. ಈ ಪೈಕಿ 80,000 ಅಥವಾ ಶೇ.8ರಷ್ಟು ಜನರು ಸಂಶಯಾಸ್ಪದ ವಿಳಾಸಗಳಲ್ಲಿ ನೋಂದಾಯಿಸಲ್ಪಟ್ಟಿರುವುದು ತನಿಖೆಯಿಂದ ಬಹಿರಂಗಗೊಂಡಿದೆ ಎಂದು ಹೇಳಿದೆ.







