ಬಿಹಾರ: 2005ರ ಬಳಿಕ ಮೊದಲ ಬಾರಿಗೆ ಕಡಿಮೆಯಾಗಲಿರುವ ಮತದಾರರ ಸಂಖ್ಯೆ

ಹೊಸದಿಲ್ಲಿ: ಬಿಹಾರದಲ್ಲಿ ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಯ ಮೊದಲ ಹಂತದಲ್ಲಿ 72.4 ದಶಲಕ್ಷ ಗಣತಿ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಭಾರತದ ಚುನಾವಣಾ ಆಯೋಗ ಪ್ರಕಟಿಸಿದೆ. ಈ ಸಂಖ್ಯೆ ಎಸ್ಐಆರ್ ಚಾಲನೆಗೊಂಡ ಜೂನ್ 24ರಂದು ರಾಜ್ಯದಲ್ಲಿದ್ದ ಒಟ್ಟು ಮತದಾರರ ಸಂಖ್ಯೆಗೆ ಹೋಲಿಸಿದರೆ ಸುಮಾರು 65 ಲಕ್ಷ (ಶೇಕಡ 8)ದಷ್ಟು ಕಡಿಮೆ. ಜತೆಗೆ 2024ರ ಲೋಕಸಭಾ ಚುನಾವಣೆಯ ವೇಳೆ ಇದ್ದ ಮತದಾರರ ಸಂಖ್ಯೆಗೆ ಹೋಲಿಸಿದರೆ 48 ಲಕ್ಷದಷ್ಟು ಹಾಗೂ 2020ರ ವಿಧಾನಸಭಾ ಚುನಾವಣೆಯಲ್ಲಿದ್ದ ಮತದಾರರ ಸಂಖ್ಯೆಗೆ ಹೋಲಿಸಿದರೆ 12 ಲಕ್ಷದಷ್ಟು ಕಡಿಮೆ.
ಚುನಾವಣಾ ಆಯೋಗ ಪರಿಷ್ಕರಣೆಯ ಬಳಿಕ ಅಂತಿಮ ಮತದಾರರ ಪಟ್ಟಿಯನ್ನು ಸೆಪ್ಟೆಂಬರ್ 30ರಂದು ಪ್ರಕಟಿಸಲಿದ್ದು, ಸಹಜವಾಗಿಯೇ ಮತದಾರರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ. 2005ರ ಬಳಿಕ ರಾಜ್ಯದಲ್ಲಿ ಎರಡು ಚುನಾವಣೆಗಳ ನಡುವೆ ಮತದಾರರ ಸಂಖ್ಯೆ ಕಡಿಮೆಯಾಗುತ್ತಿರುವುದು ಇದೇ ಮೊದಲು.
ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಾಗಿ ನೋಂದಾಯಿತ ಮತದಾರರ ಪಟ್ಟಿಯ ಅಂಕಿ ಅಂಶಗಳನ್ನು ಗಮನಿಸಿದರೆ ಸಹಜವಾಗಿಯೇ ಒಂದು ಚುನಾವಣೆಯಿಂದ ಮತ್ತೊಂದಕ್ಕೆ ಏರಿಕೆಯಾಗುತ್ತದೆ. ಆದರೆ 1977ರ ಬಳಿಕದ ಅಂಕಿ ಅಂಶಗಳನ್ನು ವಿಶ್ಲೇಷಿಸಿದಾಗ, 2005ರ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳ ನಡುವೆ ಮಾತ್ರ ಮತದಾರರ ಸಂಖ್ಯೆ 52.7 ದಶಲಕ್ಷದಿಂದ 51.3 ದಶಲಕ್ಷಕ್ಕೆ ಕಡಿಮೆಯಾಗಿತ್ತು.







