Bihar | ಪತಿಯಿಂದ ಹಲ್ಲೆಗೊಳಗಾಗಿ ಪತ್ನಿ ಮೃತ್ಯು; ಅಮ್ಮ ಬರುವ ನಿರೀಕ್ಷೆಯಲ್ಲಿ ಮೃತದೇಹದ ಪಕ್ಕದಲ್ಲೇ ಗೊಂಬೆಗಳೊಂದಿಗೆ ಆಟವಾಡುತ್ತಿದ್ದ ಮಗು

Photo : x.com/toptamilnews
ಪಾಟ್ನಾ: ತಾಯಿ ಹಾಸಿಗೆಯ ಮೇಲೆ ನಿರ್ಜೀವವಾಗಿ ಬಿದ್ದಿದ್ದರೂ, ಆಕೆ ಇನ್ನು ಎಂದಿಗೂ ಎದ್ದು ಬರುವುದಿಲ್ಲ ಎಂಬುದು ತಿಳಿಯದೆ 5 ವರ್ಷದ ಮಗು ಮೃತದೇಹದಿಂದ ಕೆಲವೇ ಹೆಜ್ಜೆಗಳ ದೂರದಲ್ಲಿ ಗೊಂಬೆಗಳೊಂದಿಗೆ ಆಟವಾಡುತ್ತಿದ್ದ ಮನಕಲಕುವ ಘಟನೆ ಬಿಹಾರದ ವೈಶಾಲಿ ಜಿಲ್ಲೆಯ ಬಿಡುಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಧುರಾಪುರ ಗ್ರಾಮದಲ್ಲಿ ನಡೆದಿದೆ.
22 ವರ್ಷದ ಆಶಾ ದೇವಿಯನ್ನು ಆಕೆಯ ಪತಿ ಸುಜಿತ್ ಪಾಸ್ವಾನ್ ಕೋಲಿನಿಂದ ಹೊಡೆದು ಕೊಂದಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಆಶಾ ಅವರ ಮೃತದೇಹ ಮನೆಯಲ್ಲೇ ಬಿದ್ದಿದ್ದರೂ, ಅವರ ಐದು ವರ್ಷದ ಮಗಳು ಅಂಶಿಕಾ ಕುಮಾರಿ ಮನೆಯ ಅಂಗಳದಲ್ಲಿ ಒಬ್ಬಳೇ ಗೊಂಬೆಗಳೊಂದಿಗೆ ಆಟವಾಡುತ್ತಿದ್ದಳು ಎಂದು ತಿಳಿದು ಬಂದಿದೆ.
ಸ್ಥಳೀಯ ನಿವಾಸಿಯೊಬ್ಬರು ಫೋನ್ ಮೂಲಕ ಆಶಾ ಮೃತಪಟ್ಟಿರುವ ವಿಷಯವನ್ನು ಅವರ ಕುಟುಂಬದವರಿಗೆ ತಿಳಿಸಿದ ಬಳಿಕ ರವಿವಾರ ಘಟನೆ ಬೆಳಕಿಗೆ ಬಂದಿದೆ.
ಕುಟುಂಬದವರು ಮನೆಗೆ ತಲುಪಿದಾಗ ಬಾಗಿಲು ತೆರೆದಿತ್ತು. ಮನೆಯಲ್ಲಿ ಯಾರೂ ಇರಲಿಲ್ಲ. ಹಾಸಿಗೆಯ ಮೇಲೆ ಆಶಾ ಅವರ ಮೃತದೇಹ ಪತ್ತೆಯಾಯಿತು. ಅಂಗಳದಲ್ಲಿ ಅಂಶಿಕಾ ಒಬ್ಬಳೇ ಗೊಂಬೆಗಳೊಂದಿಗೆ ಆಟವಾಡುತ್ತಿದ್ದಳು.
‘ನಾವು ಬರುವಷ್ಟರಲ್ಲಿ ಇಡೀ ಕುಟುಂಬ ಮನೆಯಿಂದ ಪರಾರಿಯಾಗಿತ್ತು. ಮಗುವನ್ನು ಮನೆಯಲ್ಲಿ ಒಬ್ಬಂಟಿಯಾಗಿ ಬಿಟ್ಟುಹೋಗಿದ್ದರು. ಆ ಪುಟ್ಟ ಮಗು ತನ್ನ ತಾಯಿ ಎದ್ದು ಬಂದು ತನ್ನನ್ನು ನೋಡಿಕೊಳ್ಳುತ್ತಾಳೆ ಎಂಬ ನಿರೀಕ್ಷೆಯಲ್ಲಿ ಆಗಾಗ್ಗೆ ತಾಯಿಯನ್ನು ಕೂಗುತ್ತಿತ್ತು’ ಎಂದು ಆಶಾ ಅವರ ತಂದೆ ಗಣೇಶ್ ಪಾಸ್ವಾನ್ ತಿಳಿಸಿದ್ದಾರೆ.
ಆಶಾ ಅವರು ವೈಶಾಲಿ ಜಿಲ್ಲೆಯ ರಘೋಪುರ ಬ್ಲಾಕ್ ನ ಜುರವಾನ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪಹಾರ್ಪುರ ಗ್ರಾಮದ ವಾರ್ಡ್ 12ರ ನಿವಾಸಿಯಾಗಿದ್ದರು. ಸುಮಾರು ಎರಡೂವರೆ ವರ್ಷಗಳ ಹಿಂದೆ ಮಧುರಾಪುರ ಗ್ರಾಮದ ವಿಲಾಸ್ ಪಾಸ್ವಾನ್ ಅವರ ಪುತ್ರ ಸುಜಿತ್ ಪಾಸ್ವಾನ್ ನನ್ನು ಅವರು ವಿವಾಹವಾಗಿದ್ದರು.
ಆಶಾ ಮತ್ತು ಸುಜಿತ್ ಇಬ್ಬರಿಗೂ ಇದು ಎರಡನೇ ವಿವಾಹವಾಗಿತ್ತು. ಸುಜಿತ್ ನ ಮೊದಲ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಆ ವಿವಾಹದಿಂದ ಆತನಿಗೆ ಇಬ್ಬರು ಮಕ್ಕಳಿದ್ದರು. ಆಶಾ ಅವರ ಮೊದಲ ಪತಿಯೂ ಅನಾರೋಗ್ಯದಿಂದ ಮೃತಪಟ್ಟಿದ್ದರು. ಆ ವಿವಾಹದಿಂದ ಅಂಶಿಕಾ ಎಂಬ ಮಗಳಿದ್ದಳು.
ಮದುವೆಗೂ ಮುನ್ನ ಇಬ್ಬರಿಗೂ ಮಕ್ಕಳಿರುವ ವಿಷಯ ಎರಡೂ ಕುಟುಂಬಗಳಿಗೆ ತಿಳಿದಿತ್ತು ಎಂದು ಕುಟುಂಬದವರು ತಿಳಿಸಿದ್ದಾರೆ. ಆದರೆ ಮಕ್ಕಳ ವಿಚಾರವಾಗಿ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ಆಶಾ ಅವರ ಸಂಬಂಧಿಕರು ಆರೋಪಿಸಿದ್ದಾರೆ.
ರವಿವಾರ ರಾತ್ರಿ ಕೂಡ ಇದೇ ವಿಚಾರಕ್ಕೆ ದಂಪತಿ ನಡುವೆ ಜಗಳ ನಡೆದಿತ್ತು. ಬಳಿಕ ಸುಜಿತ್, ಆಶಾ ಅವರನ್ನು ಕೋಲಿನಿಂದ ಹೊಡೆದು ಕೊಂದಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಘಟನೆಯ ಮಾಹಿತಿ ಪಡೆದ ಬಳಿಕ ಬಿಡುಪುರ ಪೊಲೀಸ್ ಠಾಣೆಯ ಠಾಣಾಧಿಕಾರಿ (SHO) ರವಿ ಪ್ರಕಾಶ್ ಪೊಲೀಸ್ ತಂಡದೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ
‘ಫೊರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ (FSL) ತಂಡವು ಘಟನಾ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಸಾವಿಗೆ ನಿಖರ ಕಾರಣ ಮತ್ತು ಘಟನೆಯ ಸಂದರ್ಭಗಳನ್ನು ಖಚಿತಪಡಿಸಿಕೊಳ್ಳಲು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಆಶಾ ಅವರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ’ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.
ಘಟನೆಯ ಬಳಿಕ ಪರಾರಿಯಾಗಿದ್ದಾರೆ ಎನ್ನಲಾದ ಸುಜಿತ್ ಹಾಗೂ ಕುಟುಂಬದ ಇತರ ಸದಸ್ಯರಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ಸೌಜನ್ಯ: Times of India






