BILL C-12 | 9,000ಕ್ಕೂ ಅಧಿಕ ಪಂಜಾಬಿಗಳು ಕೆನಡಾದಿಂದ ಗಡಿಪಾರುಗೊಳ್ಳುವ ಸಾಧ್ಯತೆ!

ಸಾಂದರ್ಭಿಕ ಚಿತ್ರ
ಚಂಡಿಗಡ, ಎ. 19: ಕೆನಡಾದಲ್ಲಿ ನೂತನ ವಲಸೆ ಕಾನೂನು BILL C-12 ಜಾರಿಗೊಂಡ ಬಳಿಕ ಆ ದೇಶದಲ್ಲಿನ ಸುಮಾರು 30,000 ವಲಸಿಗರು ನೋಟಿಸ್ ಗಳನ್ನು ಪಡೆಯಲಿದ್ದು, ಗಡಿಪಾರುಗೊಳ್ಳುವ ಅಪಾಯವನ್ನು ಎದುರಿಸುವ ಸಾಧ್ಯತೆಯಿದೆ.
ಈ 30,000 ವಲಸಿಗರ ಪೈಕಿ ಪಂಜಾಬಿನ 9,000 ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಮತ್ತು ಆಶ್ರಯ ಕೋರಿ ಅರ್ಜಿ ಸಲ್ಲಿಸಿದವರು ಸೇರಿದ್ದಾರೆ. ಕೆನಡಾದ ವಲಸೆ, ನಿರಾಶ್ರಿತರು ಮತ್ತು ಪೌರತ್ವ (IRCC) ಇಲಾಖೆಯು ಈ ಪೈಕಿ ಕೆಲವರಿಗೆ ತಕ್ಷಣವೇ ದೇಶವನ್ನು ತೊರೆಯುವಂತೆ ಸೂಚಿಸುತ್ತಿದೆ.
ಕೆನಡಾ ಮಾಧ್ಯಮಗಳ ಪ್ರಕಾರ, IRCC ಆಶ್ರಯ ಕೋರಿ ಅರ್ಜಿ ಸಲ್ಲಿಸಿರುವ ಸುಮಾರು 30,000 ಜನರಿಗೆ ನೋಟಿಸ್ ಗಳನ್ನು ಹೊರಡಿಸಿದ್ದು, ಅವರ ಹಕ್ಕು ಕೋರಿಕೆಗಳು ಇನ್ನು ಮುಂದೆ ಅರ್ಹವಾಗದಿರಬಹುದು ಎಂದು ತಿಳಿಸಿದೆ. ಸ್ವಯಂ ಪ್ರೇರಿತರಾಗಿ ಕೆನಡಾ ತೊರೆಯುವಂತೆ ಅಥವಾ ಕಾನೂನು ಕ್ರಮವನ್ನು ಎದುರಿಸುವಂತೆ ಅವರಿಗೆ ಸೂಚಿಸಲಾಗಿದೆ.
ಈ ನೋಟಿಸ್ ಗಳು ಅಂತಿಮ ಗಡಿಪಾರು ಆದೇಶಗಳಲ್ಲ ಎಂದು ಸ್ಪಷ್ಟಪಡಿಸಿರುವ IRCC, ಹೆಚ್ಚುವರಿ ಮಾಹಿತಿಗಳನ್ನು ಸಲ್ಲಿಸಲು ಅವರಿಗೆ ಸುಮಾರು 21 ದಿನಗಳ ಕಾಲಾವಕಾಶ ನೀಡಿದೆ. ಇದರಲ್ಲಿ ವಿಫಲವಾದರೆ ಗಡಿಪಾರು ಪ್ರಕ್ರಿಯೆಗೆ ಕಾರಣವಾಗಬಹುದು.
ಒಂದು ವರ್ಷಕ್ಕೂ ಹೆಚ್ಚು ಕಾಲ ಕೆನಡಾದಲ್ಲಿ ವಾಸವಿದ್ದ ಬಳಿಕ ಆಶ್ರಯ ಕೋರಿ ಅರ್ಜಿ ಸಲ್ಲಿಸಿರುವ ಪಂಜಾಬಿನ ಹಲವಾರು ಮಾಜಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ. ಇವರಲ್ಲಿ ಹೆಚ್ಚಿನವರು ತಮ್ಮ ವಾಸ್ತವ್ಯವನ್ನು ವಿಸ್ತರಿಸಿಕೊಳ್ಳಲು ಆಶ್ರಯ ಕೋರುವ ಮಾರ್ಗವನ್ನು ಅನುಸರಿಸಿದ್ದಾರೆ ಎನ್ನಲಾಗಿದೆ.
ಕಟ್ಟುನಿಟ್ಟಿನ ಅಧ್ಯಯನ ಅನುಮತಿ ನಿಯಮಗಳು ಮತ್ತು ಶಾಶ್ವತ ವಾಸಕ್ಕೆ ಸೀಮಿತ ಮಾರ್ಗಗಳು ಇದಕ್ಕೆ ಕಾರಣವಾಗಿವೆ.
ಗಮನಾರ್ಹವಾಗಿ, BILL C-12 ಜೂನ್ 24, 2020ರಿಂದ ಪೂರ್ವಾನ್ವಯವಾಗಿದ್ದು, ಜೂನ್ 3, 2025ರಂದು ಅಥವಾ ನಂತರ ಸಲ್ಲಿಸಲಾದ ಹಕ್ಕು ಕೋರಿಕೆಗಳಿಗೆ ಅನ್ವಯಿಸುತ್ತದೆ.
ಈ ನೋಟಿಸ್ ಗಳು ಪೀಡಿತ ಸಮುದಾಯಗಳಲ್ಲಿ ಆತಂಕವನ್ನು ಸೃಷ್ಟಿಸಿವೆ. ಗಮನಾರ್ಹ ಸಂಖ್ಯೆಯ ಪಂಜಾಬಿಗಳು ಅಧ್ಯಯನ ಪರವಾನಿಗೆಯಡಿ ಕೆನಡಾಕ್ಕೆ ತೆರಳಿ, ತಮ್ಮ ವೀಸಾ ಅವಧಿ ಮುಕ್ತಾಯಗೊಂಡ ಬಳಿಕ ಆಶ್ರಯ ಕೋರಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.
‘ಕೆನಡಾ ವಲಸೆ ವ್ಯವಸ್ಥೆ ಮತ್ತು ಗಡಿಗಳನ್ನು ಬಲಗೊಳಿಸುವ ಕಾಯ್ದೆ’ ಎಂದು ಔಪಚಾರಿಕವಾಗಿ ಕರೆಯಲಾಗುವ ಈ ಕಾನೂನು ಮಾ. 26ರಂದು ರಾಯಲ್ ಒಪ್ಪಿಗೆಯನ್ನು ಪಡೆದುಕೊಂಡಿದ್ದು, ತನ್ಮೂಲಕ ಆಶ್ರಯ ಕೋರುವ ನಿಯಮಗಳನ್ನು ಇನ್ನಷ್ಟು ಕಟ್ಟುನಿಟ್ಟುಗೊಳಿಸಲಾಗಿದೆ.
ನೂತನ ನಿಬಂಧನೆಗಳಡಿ, ಕೆನಡಾಕ್ಕೆ ಬಂದ ಒಂದು ವರ್ಷಕ್ಕೂ ಅಧಿಕ ಸಮಯದ ಬಳಿಕ ಆಶ್ರಯ ಕೋರಿ ಅರ್ಜಿ ಸಲ್ಲಿಸುವ ವ್ಯಕ್ತಿಗಳನ್ನು ವಲಸೆ ಮತ್ತು ನಿರಾಶ್ರಿತರ ಮಂಡಳಿಯ ಮುಂದೆ ಪೂರ್ಣ ವಿಚಾರಣೆಗೆ ಅನರ್ಹರೆಂದು ಪರಿಗಣಿಸಲಾಗುತ್ತದೆ.






