ಹವಾಮಾನ ಬದಲಾವಣೆಯಿಂದ ಮುಂದಿನ ಶತಮಾನದಲ್ಲಿ ಶತಕೋಟಿ ಅಕಾಲಿಕ ಸಾವು ಸಾಧ್ಯತೆ: ಅಧ್ಯಯನ ವರದಿ

ಸಾಂದರ್ಭಿಕ ಚಿತ್ರ.
ಹೊಸದಿಲ್ಲಿ: ಜಾಗತಿಕ ತಾಪಮಾನ 2 ಡಿಗ್ರಿ ಸೆಲ್ಸಿಯಸ್ ಗೆ ತಲುಪಿದರೆ, ಮಾನವ ಚಟುವಟಿಕೆಯಿಂದ ಉಂಟಾಗುವ ಹವಾಮಾನ ಬದಲಾವಣೆಯು ಮುಂದಿನ ಶತಮಾನದಲ್ಲಿ ಸುಮಾರು 100 ಕೋಟಿ ಜನರ ಅಕಾಲಿಕ ಸಾವಿಗೆ ಕಾರಣವಾಗಲಿದೆ ಎಂದು ಅಧ್ಯಯನವೊಂದು ಹೇಳಿದೆ.
ತೈಲ ಹಾಗೂ ಅನಿಲ ಕೈಗಾರಿಕೆ ನೇರ ಹಾಗೂ ಪರೋಕ್ಷವಾಗಿ ಶೇ. 40ಕ್ಕಿಂತ ಹೆಚ್ಚು ಕಾರ್ಬನ್ ಹೊರಸೂಸುವಿಕೆಗೆ ಕಾರಣವಾಗಿದೆ. ಇದರ ಪರಿಣಾಮವನ್ನು ಶತಕೋಟಿ ಜನರು ಎದುರಿಸಲಿದ್ದಾರೆ. ಇದರಲ್ಲಿ ಹೆಚ್ಚಿನವರು ಜಗತ್ತಿನ ಅತಿ ಕುಗ್ರಾಮಗಳಲ್ಲಿ ವಾಸಿಸುವವರು ಹಾಗೂ ಕಡಿಮೆ ಸಂಪನ್ಮೂಲ ಹೊಂದಿರುವ ಸಮುದಾಯಗಳು ಎಂದು ಅಧ್ಯಯನ ತಿಳಿಸಿದೆ.
ಎನರ್ಜಿಸ್ ಜರ್ನಲ್ ನಲ್ಲಿ ಪ್ರಕಟವಾದ ಈ ಅಧ್ಯಯನ ಇಂಗಾಲದ ಹೊರಸೂಸುವಿಕೆಯನ್ನು ಕೂಡಲೇ ಗಣನೀಯ ಮಟ್ಟದಲ್ಲಿ ಕಡಿಮೆ ಮಾಡಲು ದಿಟ್ಟ ಇಂಧನ ನೀತಿಗಳನ್ನು ಪ್ರಸ್ತಾಪಿಸಿದೆ. ಜಾಗತಿಕ ಆರ್ಥಿಕತೆಯನ್ನು ಕಾರ್ಬನ್ ಮುಕ್ತಗೊಳಿಸಲು ಸರಕಾರಗಳು, ನಿಗಮಗಳು ಹಾಗೂ ನಾಗರಿಕರು ಕ್ರಮ ಕೈಗೊಳ್ಳಬೇಕು ಎಂದು ಸಂಶೋಧನೆ ಶಿಫಾರಸು ಮಾಡಿದೆ. ಮಾನವ ಸಾವುಗಳನ್ನು ಕಡಿಮೆ ಮಾಡುವ ಉದ್ದೇಶವನ್ನು ಈ ಶಿಫಾರಸು ಹೊಂದಿದೆ ಎಂದು ಅದು ಹೇಳಿದೆ.
ಈ ವಿಷಯದ ಕುರಿತಂತೆ ಈ ಹಿಂದೆ ಪ್ರಬಂಧವೊಂದು ಪ್ರಕಟವಾಗಿತ್ತು. ಅದರಲ್ಲಿ ‘1,000-ಟನ್ ನಿಯಮವೊಂದರನ್ನು ಪ್ರಸ್ತಾವಿಸಲಾಗಿತ್ತು. ಈ ನಿಯಮದ ಪ್ರಕಾರ 1,000 ಟನ್ ಇಂಧನವನ್ನು ಸುಟ್ಟಾಗ ಒಂದು ಅವಧಿಪೂರ್ವ ಸಾವು ಸಂಭವಿಸುತ್ತದೆ. ಆ ನಿಯಮ ಸರಿ ಎಂಬುದನ್ನು ಸಂಶೋಧಕರು ದೃಢಪಡಿಸಿದ್ದಾರೆ.
ಈ ನಿಯಮದ ಬಗ್ಗೆ ವೈಜ್ಞಾನಿಕ ಸಂಶೋಧಕರಲ್ಲಿ ಒಮ್ಮತವಿದೆ. ಈ ನಿಯಮವನ್ನು ನಾವು ಗಂಭೀರವಾಗಿ ತೆಗೆದುಕೊಂಡರೆ, ಜಾಗತಿಕ ತಾಪಮಾನದಿಂದ ಮುಂದಿನ 1 ಶತಮಾನದಲ್ಲಿ ಶತಕೋಟಿ ಅವಧಿ ಪೂರ್ವ ಸಾವು ಸಂಭವಿಸಲಿದೆ. ಆದುದರಿಂದ ನಾವು ತ್ವರಿತವಾಗಿ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಕೆನಡಾ ಪಶ್ಚಿಮ ಒಂಟಾರಿಯೊ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಜೊಸುವಾ ಪೀಯರ್ಸ್ ಹೇಳಿದ್ದಾರೆ.







