ಜೈಲುಪಾಲಾದ ಸಚಿವರ ವಜಾಕ್ಕೆ ಮಸೂದೆಗಳು: ಪರಿಶೀಲನೆಗಾಗಿ ಜಂಟಿ ಸಂಸದೀಯ ಸಮಿತಿಯ 31 ಸದಸ್ಯರಲ್ಲಿ ಎನ್ಡಿಎ ಸಂಸದರ ಸಂಖ್ಯೆ 26

Photo Credit : PTI
ಹೊಸದಿಲ್ಲಿ: ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಕೇವಲ 15 ದಿನಗಳು ಬಾಕಿಯಿದ್ದು, ಬುಧವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಮುಖ್ಯಮಂತ್ರಿಗಳು,ಪ್ರಧಾನಿ ಸೇರಿದಂತೆ ಸಚಿವರು ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ 30 ದಿನಗಳಿಗೂ ಅಧಿಕ ಸಮಯ ಜೈಲುಪಾಲಾಗಿದ್ದರೆ ಅವರನ್ನು ವಜಾಗೊಳಿಸುವ ಮಸೂದೆಗಳನ್ನು ಪರಿಶೀಲಿಸಲು 31 ಸದಸ್ಯರ ಜಂಟಿ ಸಂಸದೀಯ ಸಮಿತಿಗೆ ಅನುಮೋದನೆ ನೀಡಿದ್ದಾರೆ ಎಂದು Indian Express ವರದಿ ಮಾಡಿದೆ.
ತಾನು ಸಮಿತಿಗೆ ಸೇರುವುದಿಲ್ಲ ಎಂದು ಪ್ರತಿಪಕ್ಷವು ಘೋಷಿಸಿರುವುದರಿಂದ ಸಮಿತಿಯ 31 ಸದಸ್ಯರ ಪೈಕಿ 26 ಜನರು ಬಿಜೆಪಿ ಮತ್ತು ಅದರ ಎನ್ಡಿಎ ಮಿತ್ರಪಕ್ಷಗಳಿಗೆ ಸೇರಿದವರಾಗಿದ್ದಾರೆ. ಎನ್ಸಿಪಿ(ಎಸ್ಪಿ)ಯ ಸುಪ್ರಿಯಾ ಸುಲೆ, ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ, ಶಿರೋಮಣಿ ಅಕಾಲಿ ದಳದ ಹರಸಿಮ್ರತ್ ಕೌರ್ ಬಾದಲ್ ಮತ್ತು ರಾಜ್ಯಸಭೆಯ ನಾಮ ನಿರ್ದೇಶಿತ ಸದಸ್ಯೆ ಸುಧಾ ಮೂರ್ತಿ ಇತರ ಸದಸ್ಯರಾಗಿದ್ದಾರೆ. ಬಿಜೆಪಿಯ ಲೋಕಸಭಾ ಸಂಸದೆ ಅಪರಾಜಿತಾ ಸಾರಂಗಿ ಅವರು ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಎನ್ಡಿಪಿ(ಎಸ್ಪಿ) ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿದೆಯಾದರೂ ವಿಷಯದಲ್ಲಿ ತನ್ನ ಅಭಿಪ್ರಾಯಗಳನ್ನು ಮಂಡಿಸಲು ಇದೊಂದು ಅವಕಾಶವಾಗಿರುವುದರಿಂದ ತಾನು ಸಮಿತಿಯ ಭಾಗವಾಗುವುದಾಗಿ ಹಿಂದೆಯೇ ಹೇಳಿತ್ತು. ‘ಕಾಂಗ್ರೆಸ್ ನಮ್ಮನ್ನು ಸಂಪರ್ಕಿಸಿಲ್ಲ ಮತ್ತು ಸಮಿತಿಯ ಭಾಗವಾಗಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ’ ಎಂದು ಸುಲೆ ಸುದ್ದಿಗಾರರಿಗೆ ತಿಳಿಸಿದ್ದರು.
ಜಂಟಿ ಸಂಸದೀಯ ಸಮಿತಿಯು ಮುಂಗಾರು ಅಧಿವೇಶನದಲ್ಲಿ ಮಂಡಿಸಲಾಗಿದ್ದ ಸಂವಿಧಾನ(130ನೇ ತಿದ್ದುಪಡಿ) ಮಸೂದೆ,ಜಮ್ಮುಕಾಶ್ಮೀರ ಪುನರ್ರಚನೆ(ತಿದ್ದುಪಡಿ) ಮಸೂದೆ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರಕಾರ(ತಿದ್ದುಪಡಿ) ಮಸೂದೆಗಳನ್ನು ಪರಿಶೀಲಿಸಲಿದೆ.
ಪ್ರಧಾನಿ ಸೇರಿದಂತೆ ಸಚಿವ ಸಂಪುಟದ ನೇಮಕಾತಿ ಮತ್ತು ಹೊಣೆಗಾರಿಕೆಗಳಿಗೆ ಸಂಬಂಧಿಸಿದ ಸಂವಿಧಾನದ 75ನೇ ವಿಧಿಯನ್ನು ತಿದ್ದುಪಡಿ ಮಾಡಲು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ ಜಮ್ಮುಕಾಶ್ಮೀರವನ್ನು ವ್ಯಾಪ್ತಿಯಲ್ಲಿ ಸೇರಿಸಿಕೊಳ್ಳಲು ಅವಕಾಶ ನೀಡುವ ಮಸೂದೆಗಳನ್ನು ಪ್ರತಿಪಕ್ಷ ಬಲವಾಗಿ ವಿರೋಧಿಸಿತ್ತು.
ಬಿಜೆಪಿ ನೇತೃತ್ವದ ಕೇಂದ್ರವು ಬಿಜೆಪಿಯೇತರ/ಎನ್ಡಿಎಯೇತರ ರಾಜ್ಯ ಸರಕಾರಗಳಿಗೆ ಬೆದರಿಕೆಯೊಡ್ಡಲು ಮತ್ತು ಅಸ್ಥಿರಗೊಳಿಸಲು ಈ ಮಸೂದೆಗಳನ್ನು ಬಳಸಿಕೊಳ್ಳಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದ ಪ್ರತಿಪಕ್ಷವು,ದಿಲ್ಲಿಯ ಮುಖ್ಯಮಂತ್ರಿಯಾಗಿದ್ದ ಅರವಿಂದ ಕೇಜ್ರಿವಾಲ್ ಮತ್ತು ಜೆಎಂಎಂ ಮುಖ್ಯಸ್ಥ ಹೇಮಂತ ಸೊರೇನ್(ಬಂಧನಕ್ಕೆ ಮುನ್ನವೇ ಮುಖ್ಯಮಂತ್ರಿ ಹುದ್ದಗೆ ರಾಜೀನಾಮೆ ನೀಡಿದ್ದರು) ಅವರ ಬಂಧನದಂತಹ ನಿದರ್ಶನಗಳನ್ನು ಉಲ್ಲೇಖಿಸಿತ್ತು.
ಕಾಂಗ್ರೆಸ್ನ ಒಂದು ವರ್ಗ ಮತ್ತು ಎಡರಂಗ ಸಮಿತಿಯನ್ನು ಸೇರಲು ಒಲವು ವ್ಯಕ್ತಪಡಿಸಿದ್ದವಾದರೂ ಅಂತಿಮವಾಗಿ ಇಂಡಿಯಾ ಮೈತ್ರಿಕೂಟದ ಇತರ ಪಕ್ಷಗಳ ನಿರ್ಧಾರಕ್ಕೆ ಬದ್ಧತೆಯನ್ನು ವ್ಯಕ್ತಪಡಿಸಿದ್ದವು.
‘ವಿರೋಧ ಪಕ್ಷಗಳು ಸಮಿತಿಯ ಭಾಗವಾಗದಿರುವುದು ಒಂದು ಸಂಕೀರ್ಣ ಸ್ಥಿತಿಯಾಗಿದೆ. ಜಂಟಿ ಸಮಿತಿಯು ವಿವಿಧ ಪಕ್ಷಗಳ ಬಲಾಬಲದ ಆಧಾರದಲ್ಲಿ ಅವುಗಳ ಸದಸ್ಯರನ್ನು ಒಳಗೊಂಡಿರುತ್ತದೆ. ಸ್ಪೀಕರ್ ಭಾಗಶಃ ಸಮಿತಿಯನ್ನು ರಚಿಸಲು ಸಾಧ್ಯವಿಲ್ಲ. ಅದು ಆಡಳಿತ ಮೈತ್ರಿಕೂಟದ ಸದಸ್ಯರನ್ನು ಮಾತ್ರ ಒಳಗೊಂಡಿದ್ದರೆ ಪೂರ್ಣ ಸಮಿತಿಯನ್ನು ರಚಿಸಲಾಗಿದೆ ಎಂದು ನಾವು ಹೇಳಲಾಗುವುದಿಲ್ಲ. ಅದು ಎನ್ಡಿಎ ಸಮಿತಿಯಾಗಿರುತ್ತದೆ,ಸಂಸದೀಯ ಸಮಿತಿಯಲ್ಲ. ಪ್ರಮುಖ ಪ್ರತಿಪಕ್ಷಗಳಿಂದ ಯಾವುದೇ ಸದಸ್ಯರನ್ನು ಸಮಿತಿಯು ಒಳಗೊಂಡಿರದಿದ್ದರೆ ಅದು ಯಾವುದೇ ವಿಶ್ವಾಸಾರ್ಹತೆಯನ್ನು ಹೊಂದಿರುವುದಿಲ್ಲ’ ಎಂದು ಮಾಜಿ ಲೋಕಸಭಾ ಮಹಾ ಕಾರ್ಯದರ್ಶಿ ಪಿ.ಡಿ.ಟಿ.ಆಚಾರ್ಯ ಅವರು ಈ ಹಿಂದೆ ಸುದ್ದಿಸಂಸ್ಥೆಗೆ ತಿಳಿಸಿದ್ದರು.







