ಬಿಸ್ಲೆರಿ ನೀರಿನಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ: ಕಾನೂನು ಕ್ರಮಕ್ಕೆ FSSAI ಅನುಮತಿ: ವರದಿ
ಮರುಪರೀಕ್ಷೆ ಮಾಡಿದಾಗಲೂ ನೀರು ಅಸುರಕ್ಷಿತ; ನಿಗದಿತ ಮಿತಿಗಿಂತ ಹೆಚ್ಚು ಬ್ರೋಮೇಟ್ ಪತ್ತೆ

Photo Credit : ndtv
ಹೊಸದಿಲ್ಲಿ, ನ. 22: ಪ್ಯಾಕೇಜ್ ಮಾಡಿದ ಕುಡಿಯುವ ನೀರಿನ ಮಾದರಿಯಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಬ್ರೋಮೇಟ್ ಹಾಗೂ ಕ್ಯಾನ್ಸರ್ ಕಾರಕವೆಂದು ವರ್ಗೀಕರಿಸಲಾದ ಪಾಲಿನ್ಯೂಕ್ಲಿಯರ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್ ಗಳು (PAHs) ಪತ್ತೆಯಾದ ಹಿನ್ನೆಲೆಯಲ್ಲಿ ಬಿಸ್ಲೆರಿ ಇಂಟರ್ನ್ಯಾಷನಲ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಅನುಮತಿ ನೀಡಿದೆ ಎಂದು NDTV ವರದಿ ಮಾಡಿದೆ.
ಬಿಸ್ಲೆರಿ ನೀರಿನ ಆರಂಭಿಕ ಪ್ರಯೋಗಾಲಯ ಪರೀಕ್ಷೆಯಲ್ಲಿ ಬ್ರೋಮೇಟ್ ಪ್ರಮಾಣ ನಿಗದಿತ ಮಿತಿಯನ್ನು ಮೀರಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ, 2006ರ ಅಡಿಯಲ್ಲಿ ಮಾದರಿಯನ್ನು ಅಸುರಕ್ಷಿತವೆಂದು ಘೋಷಿಸಲಾಗಿತ್ತು.
ಕಂಪೆನಿಯು ಮೇಲ್ಮನವಿ ಸಲ್ಲಿಸಿದ ಬಳಿಕ ಮಾದರಿಯನ್ನು ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಎರಡನೇ ಹಂತದ ಪರೀಕ್ಷೆಯಲ್ಲೂ ನೀರು ಅಸುರಕ್ಷಿತವೆಂದು ದೃಢಪಟ್ಟಿದ್ದು, ಅದರಲ್ಲಿ ಪಾಲಿನ್ಯೂಕ್ಲಿಯರ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್ ಗಳು (PAHs) ಪತ್ತೆಯಾಗಿವೆ.
ಬಿಸ್ಲೆರಿ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ನ ಘಟಕದಿಂದ ಬಾಟಲಿಗಳಲ್ಲಿ ತುಂಬಿಸಿದ ಕುಡಿಯುವ ನೀರಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷಿಸಲಾಗಿತ್ತು. ಎರಡೂ ಪ್ರಯೋಗಾಲಯಗಳ ವರದಿಗಳು ನೀರು ಅಸುರಕ್ಷಿತ ಎಂದು ದೃಢಪಡಿಸಿವೆ ಎಂದು FSSAI ತಿಳಿಸಿದೆ. ಕಂಪೆನಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಲಾಗಿದೆ.






