ತುರ್ತು ಪರಿಸ್ಥಿತಿ ; ಬಿಜೆಪಿ ಏಟು – ಕಾಂಗ್ರೆಸ್ ತಿರುಗೇಟು!

ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಗೆ 50 ತುಂಬಿರುವಾಗ, ಬಿಜೆಪಿ ಅದನ್ನು ಕಾಂಗ್ರೆಸ್ ವಿರುದ್ಧದ ರಾಜಕೀಯವಾಗಿ ಬಳಸಿದೆ. ತುರ್ತು ಪರಿಸ್ಥಿತಿಯ ವಾರ್ಷಿಕೋತ್ಸವವನ್ನು ಸರ್ಕಾರ ಸಂವಿಧಾನ ಹತ್ಯೆ ದಿವಸ ಎಂದು ಆಚರಿಸುತ್ತಿದೆ. ಮೋದಿ ಸೇರಿದಂತೆ ಕೇಂದ್ರ ಸರ್ಕಾರದ ಸಚಿವರು ಮತ್ತು ಬಿಜೆಪಿ ನಾಯಕರುಗಳೆಲ್ಲ ತುರ್ತು ಪರಿಸ್ಥಿತಿ ಬಗ್ಗೆ ಕಟುವಾಗಿ ಮಾತನಾಡುತ್ತಿದ್ದಾರೆ.
ಅಲ್ಲದೆ, ಇದೇ ನೆಪದೊಂದಿಗೆ ಕಾಂಗ್ರೆಸ್ ವಿರುದ್ಧವೂ ಪ್ರಹಾರ ನಡೆಸಲಾಗುತ್ತಿದೆ. ಆದರೆ ಬಿಜೆಪಿ ಟೀಕೆಗಳಿಗೆ ಕಾಂಗ್ರೆಸ್ ಪ್ರತ್ಯುತ್ತರ ಕೊಡುತ್ತಿದೆ. ಪ್ರಜಾಪ್ರಭುತ್ವ ಸಂರಕ್ಷಣೆಯ ಸೋಗಿನಲ್ಲಿ ಬಿಜೆಪಿ ಮಾತಾಡುತ್ತಿದೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ. ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಗೆ 50 ವರ್ಷಗಳು ತುಂಬಿದ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಅದು ಪ್ರಜಾಪ್ರಭುತ್ವ ಇತಿಹಾಸದ ಅತ್ಯಂತ ಕರಾಳ ಅಧ್ಯಾಯ ಎಂದಿದ್ದಾರೆ. ತುರ್ತು ಪರಿಸ್ಥಿತಿಯ ಕರಾಳತೆಯನ್ನು ಕಂಡ ಯಾವ ಭಾರತೀಯನೂ ಅದನ್ನು ಮರೆಯಲಾರ ಎಂದು ಮೋದಿ ಹೇಳಿದ್ದಾರೆ.
ಎಕ್ಸ್ನಲ್ಲಿ ಸಂವಿಧಾನ ಹತ್ಯೆ ದಿನ ಎಂಬ ಹ್ಯಾಶ್ಟ್ಯಾಗ್ ಅಡಿಯಲ್ಲಿ ಪೋಸ್ಟ್ ಬರೆದಿರುವ ಮೋದಿ, ತುರ್ತು ಪರಿಸ್ಥಿತಿ ಹೇರಿಕೆಗೆ ಇಂದು ಐವತ್ತು ವರ್ಷಗಳು ತುಂಬಿವೆ. ಭಾರತದ ಜನರು ಈ ದಿನವನ್ನು ಸಂವಿಧಾನ ಹತ್ಯೆ ದಿವಸ ಎಂದು ಆಚರಿಸುತ್ತಾರೆ ಎಂದಿದ್ದಾರೆ. ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳನ್ನು ಬದಿಗಿಡಲಾಯಿತು. ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಲಾಯಿತು. ಪತ್ರಿಕಾ ಸ್ವಾತಂತ್ರ್ಯವನ್ನೇ ತೆಗೆದುಹಾಕಲಾಯಿತು ಮತ್ತು ಹಲವಾರು ರಾಜಕೀಯ ನಾಯಕರು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು ಸಾಮಾನ್ಯ ನಾಗರಿಕರನ್ನು ಜೈಲಿಗೆ ಹಾಕಲಾಯಿತು. ಆ ಸಮಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವವನ್ನೆ ಅಮಾನತಿನಲ್ಲಿಟ್ಟಿತ್ತು ಎಂದು ಬರೆದಿದ್ದಾರೆ.
ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ದೃಢವಾಗಿ ನಿಂತ ಪ್ರತಿಯೊಬ್ಬ ವ್ಯಕ್ತಿಗೂ ವಂದಿಸುವುದಾಗಿ ಅವರು ತಮ್ಮ ಪೋಸ್ಟ್ನಲ್ಲಿ ಹೇಳಿದ್ದಾರೆ.
ಭಾರತದಾದ್ಯಂತ, ಎಲ್ಲರೂ ಒಗ್ಗಟ್ಟಿನಿಂದ, ಒಂದೇ ಗುರಿಯೊಂದಿಗೆ ಪರಸ್ಪರ ನಿಕಟವಾಗಿ, ಭಾರತದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಮತ್ತು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ಸಂರಕ್ಷಿಸಲು ಹೋರಾಡಿದರು. ಅವರ ಹೋರಾಟವೇ, ಆಗಿನ ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸಲು ಮತ್ತು ಹೊಸ ಚುನಾವಣೆಗಳಿಗೆ ಕರೆ ನೀಡಲು ಕಾರಣವಾಯಿತು. ಕಾಂಗ್ರೆಸ್ ದೊಡ್ಡ ಸೋಲು ಕಂಡಿತು ಎಂದಿದ್ದಾರೆ ಪ್ರಧಾನಿ ಮೋದಿ.
ದಿ ಎಮರ್ಜೆನ್ಸಿ ಡೈರೀಸ್ ಎಂಬ ಪುಸ್ತಕ ತುರ್ತು ಪರಿಸ್ಥಿತಿಯ ವರ್ಷಗಳಲ್ಲಿನ ನನ್ನ ಅನುಭವಗಳನ್ನು ವಿವರಿಸುತ್ತದೆ. ಅದು ಆ ಕಾಲದ ಅನೇಕ ನೆನಪುಗಳನ್ನು ಮೆಲುಕು ಹಾಕುತ್ತದೆ ಎಂದು ಅವರು ಹೇಳಿದ್ದಾರೆ. ತುರ್ತು ಪರಿಸ್ಥಿತಿಯ ಆ ಕರಾಳ ದಿನಗಳನ್ನು ನೆನಪಿಸಿಕೊಳ್ಳುವ ಎಲ್ಲರೂ ಅಥವಾ ಆ ಸಮಯದಲ್ಲಿ ಬಳಲಿದ ಕುಟುಂಬಗಳು ತಮ್ಮ ಅನುಭವಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವಂತೆ ಅವರು ಕರೆ ನೀಡಿದ್ದಾರೆ.
ತುರ್ತು ಪರಿಸ್ಥಿತಿ ಹೇರಿದಾಗ, ನಾನು ಯುವ ಆರೆಸ್ಸೆಸ್ ಪ್ರಚಾರಕನಾಗಿದ್ದೆ. ತುರ್ತು ಪರಿಸ್ಥಿತಿ ವಿರೋಧಿ ಚಳುವಳಿ ನನಗೆ ಕಲಿಕೆಯ ಅನುಭವವಾಗಿತ್ತು. ಇದು ನಮ್ಮ ಪ್ರಜಾಪ್ರಭುತ್ವ ಚೌಕಟ್ಟನ್ನು ಸಂರಕ್ಷಿಸುವ ಚೈತನ್ಯವನ್ನು ತುಂಬಿತು. ಜನರಿಂದ ನಾನು ಬಹಳಷ್ಟು ಕಲಿಯಲು ಸಾಧ್ಯವಾಯಿತು ಎಂದಿದ್ದಾರೆ.
ಕೇಂದ್ರ ಗೃಹಸಚಿವ ಅಮಿತ್ ಶಾ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೇಶ ಎಂದಿಗೂ ಸರ್ವಾಧಿಕಾರಕ್ಕೆ ತಲೆಬಾಗುವುದಿಲ್ಲ ಎಂದು ಶಾ ಹೇಳಿದ್ದಾರೆ. ತುರ್ತು ಪರಿಸ್ಥಿತಿ ನೆನಪು ಜನರ ಮನಸಿನಿಂದ ಮರೆಯಾಗತೊಡಗಿದರೆ ಅದು ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಗಂಭೀರ ಅಪಾಯವಾಗಿದೆ ಎಂದು ಶಾ ಹೇಳಿದ್ದಾರೆ. ಈ ದೇಶದ ಜನರು ಎಂದಿಗೂ ಸರ್ವಾಧಿಕಾರವನ್ನು ಸ್ವೀಕರಿಸುವುದಿಲ್ಲ. ಹಾಗಾಗಿಯೇ ನಾವು ತುರ್ತು ಪರಿಸ್ಥಿತಿ ವಿರುದ್ಧದ ಯುದ್ಧವನ್ನು ಗೆದ್ದಿದ್ದೇವೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಚೈತನ್ಯ ಭಾರತದಲ್ಲಿ ಅಂತರ್ಗತವಾಗಿದೆ ಎಂದಿದ್ದಾರೆ ಅಮಿತ್ ಶಾ.
ತುರ್ತು ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತೀಯ ಪ್ರಜಾಪ್ರಭುತ್ವದ ಕತ್ತು ಹಿಸುಕುವ ದುಷ್ಟ ಪ್ರಯತ್ನ ನಡೆದಿತ್ತು ಎಂದಿದ್ದಾರೆ.ಸಂವಿಧಾನವನ್ನು ಬದಿಗೆ ಸರಿಸಿ, ತುರ್ತು ಪರಿಸ್ಥಿತಿ ಹೇರಿದ್ದು ಅಧಿಕಾರದ ದುರ್ಬಳಕೆ ಮತ್ತು ಸರ್ವಾಧಿಕಾರಿ ಧೋರಣೆಯ ಕಟು ಉದಾಹರಣೆಯಾಗಿದೆ ಎಂದು ಅವರು ಹೇಳಿದ್ದಾರೆ.
ತುರ್ತು ಪರಿಸ್ಥಿತಿ ಹೇರಿಕೆ ಸಂವಿಧಾನದ ಹತ್ಯೆಯಾಗಿತ್ತು. ಕಾಂಗ್ರೆಸ್ ಇಂದಿಗೂ ಅದೇ ಮನಸ್ಥಿತಿಯನ್ನು ಮುಂದುವರಿಸಿದೆ ಎಂದು ಜೆಪಿ ನಡ್ಡಾ ಆರೋಪಿಸಿದ್ದಾರೆ.
ವಿದೇಶಾಂಗ ಸಚಿವ ಎಸ್ ಜೈಶಂಕರ್ ಕೂಡ ಎಕ್ಸ್ ಪೋಸ್ಟ್ನಲ್ಲಿ ತುರ್ತು ಪರಿಸ್ಥಿತಿಯ ದಿನಗಳ ನೆನಪು ಮಾಡಿಕೊಂಡಿದ್ದು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಬೇಕಿರುವ ಅಗತ್ಯದ ಬಗ್ಗೆ ಆ ಕರಾಳ ನೆನಪು ಒಂದು ಎಚ್ಚರವಾಗಿದೆ ಎಂದಿದ್ದಾರೆ.
ಉಪರಾಷ್ಟ್ರಪತಿ ಜಗದೀಪ್ ಧನಕರ್, ತುರ್ತುಪರಿಸ್ಥಿತಿಯ ಕರಾಳತೆಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳೆಲ್ಲ ತುಳಿಯಲ್ಪಟ್ಟಿದ್ದವು ಎಂದಿದ್ದಾರೆ.
ತುರ್ತು ಪರಿಸ್ಥಿತಿ ಕುರಿತ ಬಿಜೆಪಿ ಟೀಕೆಗಳಿಗೆ ಕಾಂಗ್ರೆಸ್ ಖಡಕ್ಕಾಗಿಯೇ ಪ್ರತ್ಯುತ್ತರ ಕೊಟ್ಟಿದೆ.
ಮೋದಿ ಸರ್ಕಾರದ ವಿರುದ್ಧ ಪ್ರತಿದಾಳಿ ನಡೆಸಿರುವ ಕಾಂಗ್ರೆಸ್, ಕಳೆದ 11 ವರ್ಷಗಳಲ್ಲಿ ತುರ್ತು ಪರಿಸ್ಥಿತಿಗಿಂತ ಐದು ಪಟ್ಟು ಹೆಚ್ಚಾಗಿ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥಿತ ಮತ್ತು ಅಪಾಯಕಾರಿ ದಾಳಿಗೆ ಒಳಗಾಗಿದೆ ಎಂದು ಆರೋಪಿಸಿದೆ. ಮೋದಿ ಸರ್ಕಾರದ 11 ವರ್ಷಗಳನ್ನು ಅದು ಅಘೋಷಿತ ತುರ್ತುಪರಿಸ್ಥಿತಿ ಎಂದು ಟೀಕಿಸಿದೆ.
ಮೋದಿ ಸರ್ಕಾರ ಸಂಸತ್ತನ್ನು ದುರ್ಬಲಗೊಳಿಸುತ್ತಿದೆ ಮತ್ತು ನಿರಂತರವಾಗಿ ಸಂಸದೀಯ ಮಾನದಂಡಗಳನ್ನು ಚೂರುಚೂರು ಮಾಡುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ.ಸಾರ್ವಜನಿಕ ಕಾಳಜಿಯ ವಿಷಯ ಎತ್ತಿದ ಸಂಸದರನ್ನು ಅಮಾನತುಗೊಳಿಸಲಾಗಿದೆ. ಪ್ರಮುಖ ಶಾಸನಗಳನ್ನು ಬುಲ್ಡೋಜರ್ ಮೂಲಕ ದಮನಿಸಲಾಗಿದೆ ಎಂದು ಅವರು ಹೇಳಿದ್ದಾರೆ. ದ್ವೇಷ ಭಾಷಣ ಮತ್ತು ನಾಗರಿಕ ಸ್ವಾತಂತ್ರ್ಯಗಳ ದಮನದ ಬಗ್ಗೆಯೂ ಅವರು ಹೇಳಿದ್ದಾರೆ.
ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಖಾಲಿಸ್ತಾನಿಗಳು ಎನ್ನಲಾಯಿತು. ಜಾತಿ ಜನಗಣತಿಯ ಪ್ರತಿಪಾದಕರನ್ನು ನಗರ ನಕ್ಸಲರು ಎಂದು ಹಣೆಪಟ್ಟಿ ಕಟ್ಟಲಾಯಿತು ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಮಹಾತ್ಮ ಗಾಂಧಿಯವರ ಹಂತಕರನ್ನು ವೈಭವೀಕರಿಸಲಾಗುತ್ತದೆ. ಅಲ್ಪಸಂಖ್ಯಾತರು ತಮ್ಮ ಜೀವ ಮತ್ತು ಆಸ್ತಿಯ ಭಯದಲ್ಲಿ ಬದುಕುವಂತಾಗಿದೆ. ದಲಿತರು ಮತ್ತು ಅಂಚಿನಲ್ಲಿರುವ ಗುಂಪುಗಳನ್ನು ಸತತ ಗುರಿಯಾಗಿಸಲಾಗಿದೆ. ದ್ವೇಷ ಭಾಷಣ ಮಾಡುವರಿಗೆ ಬಿಜೆಪಿಯಲ್ಲಿ ಮತ್ತು ಮೊದಿ ಸರ್ಕಾರದಲ್ಲಿ ಬಡ್ತಿ ಸಿಗುತ್ತಿದೆ ಎಂದು ಅವರು ಟೀಕಿಸಿದ್ದಾರೆ. ವಿರೋಧ ಪಕ್ಷದ ರಾಜ್ಯ ಸರ್ಕಾರಗಳ ವಿರುದ್ಧವೂ ಮೋದಿ ಸರ್ಕಾರ ಕತ್ತಿ ಮಸೆಯುತ್ತಲೆ ಬಂದಿರುವುದರ ಬಗ್ಗೆ ಜೈರಾಮ್ ರಮೇಶ್ ಉಲ್ಲೇಖಿಸಿದ್ದಾರೆ.
ಬಿಜೆಪಿಯೇತರ ರಾಜ್ಯ ಸರ್ಕಾರಗಳನ್ನು ಉರುಳಿಸಲು ಬಿಜೆಪಿ ಹಣಬಲ ಬಳಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ರಾಜ್ಯಪಾಲರನ್ನು ಬಳಸಿ ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಮಸೂದೆಗಳನ್ನು ತಡೆಯಲು ಮತ್ತು ವಿಶ್ವವಿದ್ಯಾಲಯಗಳ ನೇಮಕಾತಿಗಳಲ್ಲಿ ಹಸ್ತಕ್ಷೇಪ ಮಾಡಲು ಯತ್ನಿಸಲಾಗಿದೆ ಎಂದು ಅವರು ನೆನಪಿಸಿದ್ದಾರೆ. ರಾಜ್ಯಗಳ ಸರಿಯಾದ ಆದಾಯದ ಪಾಲನ್ನು ಕಸಿದುಕೊಳ್ಳಲು ಕೇಂದ್ರ ಸರ್ಕಾರ ಸೆಸ್ಗಳನ್ನು ಅತಿಯಾಗಿ ಬಳಸುವ ಮೂಲಕ ಸಾಂವಿಧಾನಿಕ ಹಣಕಾಸಿನ ವ್ಯವಸ್ಥೆಗಳನ್ನು ಮೀರಿದೆ ಎಂದು ಅವರು ಹೇಳಿದ್ದಾರೆ.ಇದಲ್ಲದೆ, ಭಾರತದ ಸಮಗ್ರತೆಯ ಮೇಲೆ ಚುನಾವಣಾ ಆಯೋಗ ದೊಡ್ಡ ಮಟ್ಟದಲ್ಲಿ ರಾಜಿ ಮಾಡಿಕೊಂಡಿದೆ ಎಂದೂ ಅವರು ಟೀಕಿಸಿದ್ದಾರೆ. ಪ್ರಧಾನಿ ಮತ್ತು ಹಿರಿಯ ಬಿಜೆಪಿ ನಾಯಕರು ಚುನಾವಣಾ ಪ್ರಚಾರದ ವೇಳೆ ಸಮಾಜವನ್ನು ಒಡೆಯುವಂತೆ ಮಾತಾಡಿದ್ದರು. ಅದರ ವಿರುದ್ಧ ಆಯೋಗ ಮೌನವಾಗಿತ್ತು ಎಂದು ರಮೇಶ್ ಆರೋಪಿಸಿದ್ದಾರೆ.
ನ್ಯಾಯಾಂಗಕ್ಕೆ ಸದ್ದಿಲ್ಲದೆ ಬೆದರಿಕೆ ಹಾಕುವ ಕೆಲಸ ಕೂಡ ನಡೆಯುತ್ತಿದೆ. ಅಲ್ಲದೆ, ಈಡಿ, ಸಿಬಿಐ ಮತ್ತು ಐಟಿ ಸೇರಿದಂತೆ ತನಿಖಾ ಸಂಸ್ಥೆಗಳನ್ನು ವಿರೋಧ ಪಕ್ಷದ ನಾಯಕರ ವಿರುದ್ದ ಆಯುಧವಾಗಿ ಬಳಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಪ್ರಧಾನಿ ಮೋದಿ ಸಹಿತ ಬಿಜೆಪಿ ನಾಯಕರು ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ಮೇಲೆ ದಾಳಿ ಮಾಡಿದರೆ, ಕಾಂಗ್ರೆಸ್ ಈಗಿರುವುದು ಅಘೋಷಿತ ತುರ್ತು ಪರಿಸ್ಥಿತಿ ಹಾಗು ಅದಕ್ಕಿಂತ ಇದು ಐದು ಪಟ್ಟು ಘೋರವಾಗಿದೆ ಎಂದು ತಿರುಗೇಟು ನೀಡಿದ್ದಾರೆ.







