ಮುಸ್ಲಿಂ ಸಮುದಾಯವನ್ನು ಸಂಪರ್ಕಿಸಲು ವಿಶೇಷ ಕಾರ್ಯಕ್ರಮಕ್ಕೆ ಕೇರಳ ಬಿಜೆಪಿ ಚಾಲನೆ

Photo | PTI
ತಿರುವನಂತಪುರಂ : ಕೇರಳದಲ್ಲಿ ಮುಸ್ಲಿಂ ಸಮುದಾಯವನ್ನು ಸಂಪರ್ಕಿಸುವ ದೃಷ್ಟಿಯಿಂದ ವಿಶೇಷ ಕಾರ್ಯಕ್ರಮಕ್ಕೆ ಬಿಜೆಪಿ ಚಾಲನೆ ನೀಡಿದೆ. ಇದು ರಾಜಕೀಯ ಅಥವಾ ಮುಸ್ಲಿಂ ಮತಗಳನ್ನು ಗಳಿಸುವು ದೃಷ್ಟಿಯಿಂದ ಅಲ್ಲ. ಬದಲಿಗೆ ಮುಸ್ಲಿಮರಲ್ಲಿ ಪಕ್ಷದ ಬಗ್ಗೆ ವಿಶ್ವಾಸ ಬೆಳೆಸುವ ಕಾರ್ಯಕ್ರಮವಾಗಿದೆ ಎಂದು ಬಿಜೆಪಿ ಹೇಳಿಕೊಂಡಿದೆ.
'ಮುಸ್ಲಿಂ ಸಂಪರ್ಕ ಕಾರ್ಯಕ್ರಮʼ(Muslim Outreach Programme)' ಎಂಬ ವಿಶೇಷ ಕಾರ್ಯಕ್ರಮವನ್ನು ಪ್ರಾರಂಭಿಸುವುದಾಗಿ ಬಿಜೆಪಿ ಕೇರಳ ರಾಜ್ಯ ಘಟಕದ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಘೋಷಿಸಿದರು. ಅವರು ಬಿಜೆಪಿ ಹಿರಿಯ ನಾಯಕ ಮತ್ತು ಪಕ್ಷದ ರಾಜ್ಯ ಉಪಾಧ್ಯಕ್ಷ ಅಬ್ದುಲ್ ಸಲಾಂ ಅವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ನಡೆಸುವುದಾಗಿ ಹೇಳಿದ್ದಾರೆ.
ಈ ಕಾರ್ಯಕ್ರಮದ ಉದ್ದೇಶ ಮತಗಳಿಕೆ ಅಲ್ಲ. ಬದಲಾಗಿ ಬಿಜೆಪಿ ರಾಜ್ಯದಲ್ಲಿ ಮುಸ್ಲಿಂ ಸಮುದಾಯವನ್ನು ವಿರೋಧಿಸುತ್ತದೆ ಮತ್ತು ಅವರ ಪರವಾಗಿ ಕೆಲಸ ಮಾಡಲು ಬಯಸುವುದಿಲ್ಲ ಎಂಬ ಅಸತ್ಯಗಳನ್ನು ಹೋಗಲಾಡಿಸುವ ಗುರಿಯನ್ನು ಹೊಂದಿದೆ. ಕಳೆದ 20-25 ವರ್ಷಗಳಿಂದ ಕೇರಳದ ಮುಸ್ಲಿಂ ಸಮುದಾಯದಲ್ಲಿ ಇಂತಹ ಸುಳ್ಳುಗಳನ್ನು ಪ್ರಚಾರ ಮಾಡಲಾಗುತ್ತಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗ, ಸಂವಿಧಾನವೇ ಮಾರ್ಗದರ್ಶಕ ಎಂದು ಹೇಳಿದ್ದರು ಮತ್ತು “ಸಬ್ಕಾ ಸಾಥ್, ಸಬ್ಕಾ ವಿಕಾಸ್" ಎಂದು ಹೇಳಿದ್ದರು. ಕೇರಳ ಬಿಜೆಪಿ ಕೂಡ ಇದೇ ಸಂದೇಶವನ್ನು ಮುಸ್ಲಿಂ ಸಮುದಾಯಕ್ಕೆ ತಲುಪಿಸಲು ಬಯಸುತ್ತಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದರು.
"ನಾವು ನಿಮ್ಮ ಸೇವೆಗಾಗಿ ಇಲ್ಲಿದ್ದೇವೆ. ಪ್ರತಿಯೊಬ್ಬ ಮಲಯಾಳಿಗೂ ಅವರ ಕಷ್ಟದ ಸಮಯದಲ್ಲಿ ನಾವು ಅವರಿಗೆ ಸಹಾಯ ಮಾಡುತ್ತೇವೆ. ಅವರಿಗೆ ಏನೇ ಅಗತ್ಯವಿದ್ದರೂ, ಜಾತಿ, ಮತ, ಸಮುದಾಯ ಅಥವಾ ಧರ್ಮವನ್ನು ಲೆಕ್ಕಿಸದೆ ಸಹಾಯ ಮಾಡುತ್ತೇವೆ” ಎಂದು ರಾಜೀವ್ ಚಂದ್ರಶೇಖರ್ ಹೇಳಿದರು.
ಜಾತಿ, ಸಮುದಾಯ ಅಥವಾ ಧರ್ಮವನ್ನು ಮೀರಿ ಪ್ರತಿಯೊಬ್ಬ ವ್ಯಕ್ತಿಯು ಅಭಿವೃದ್ಧಿ, ಉದ್ಯೋಗಗಳು ಮತ್ತು ಪ್ರಗತಿಗೆ ಸಮಾನ ಅವಕಾಶಗಳನ್ನು ಪಡೆಯುವ 'ವಿಕಾಸಿತ ಕೇರಳ'ವನ್ನು ರಚಿಸುವುದು ಬಿಜೆಪಿಯ ಧ್ಯೇಯವಾಗಿದೆ ಎಂದು ಚಂದ್ರಶೇಖರ್ ಹೇಳಿದರು.
ಆದ್ದರಿಂದ, ಇದು ಮತಗಳ ಬಗ್ಗೆ ಅಲ್ಲ, ನಂಬಿಕೆಯನ್ನು ಬೆಳೆಸುವ ಮತ್ತು ಸಿಪಿಐ(ಎಂ) ಮತ್ತು ಕಾಂಗ್ರೆಸ್ ಸೃಷ್ಟಿಸಿರುವ ಸುಳ್ಳಿನ ವಿಸ್ತಾರವಾದ ಮನೆಯನ್ನು ಕೆಡವುವ ಬಗ್ಗೆ ಎಂದು ಹೇಳಿದರು.
ಕಾರ್ಯಕ್ರಮದ ಬಗ್ಗೆ ವಿವರಗಳನ್ನು ನೀಡುತ್ತಾ, ಬಿಜೆಪಿ ಕಾರ್ಯಕರ್ತರ ತಂಡ ಪ್ರತಿ ಮುಸ್ಲಿಂ ಮನೆಗಳಿಗೆ ಭೇಟಿ ನೀಡಿ ಅಭಿವೃದ್ಧಿಯ ಸಂದೇಶವನ್ನು ತಿಳಿಸುವ ಕರಪತ್ರಗಳನ್ನು ವಿತರಿಸಲಿದ್ದಾರೆ. ಕಳೆದ 70 ವರ್ಷಗಳಲ್ಲಿ ಅವರಿಗೆ ಏನನ್ನೂ ಮಾಡದ ಕಾಂಗ್ರೆಸ್ ಮತ್ತು ಎಡಪಂಥೀಯರ ಸುಳ್ಳು ಮತ್ತು ಪ್ರಚಾರಕ್ಕೆ ಬಲಿಯಾಗಬೇಡಿ ಎಂದು ಸಲಹೆ ನೀಡಲಿದ್ದಾರೆ ಎಂದು ಹೇಳಿದರು.







