ಚುನಾವಣಾ ಪ್ರಚಾರಗಳಿಂದ ದೂರ ಉಳಿಯುತ್ತೇನೆ ಎಂದ ಬಿಜೆಪಿ ನಾಯಕಿ ಖುಷ್ಬೂ; ಕಾರಣ ಇಲ್ಲಿದೆ...

ಹೊಸದಿಲ್ಲಿ: ಅನಾರೋಗ್ಯದ ಕಾರಣಕ್ಕೆ ತಾನು ಚುನಾವಣಾ ಪ್ರಚಾರ ಚಟುವಟಿಕೆಗಳಿಂದ ವಿರಾಮ ಪಡೆಯಬೇಕಿದೆ ಎಂದು ಎಪ್ರಿಲ್ 8ರಂದು ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಬಿಜೆಪಿ ಹೈಕಮಾಂಡ್ ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರಿಗೆ ಪತ್ರ ಬರೆದಿರುವ ನಟಿ, ರಾಜಕಾರಣಿ ಖುಷ್ಬೂ ಸುಂದರ್, “2019ರಲ್ಲಿ ನಾನು ಮೂಳೆ ಮುರಿತಕ್ಕೆ ಒಳಗಾಗಿದ್ದೆ. ಕಳೆದ ಐದು ವರ್ಷಗಳಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದೇನೆ” ಎಂದು ತಿಳಿಸಿದ್ದಾರೆ. ವೈದ್ಯಕೀಯ ಸಲಹೆಯ ಹೊರತಾಗಿಯೂ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರಿಂದ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು.
ಅವರಿಗೀಗ ಅಗತ್ಯ ವಿಧಾನಗಳ ಸಲಹೆಯನ್ನು ನೀಡಲಾಗಿದೆ. “ನಾನೀಗ ನನ್ನ ಚಟುವಟಿಕೆಗಳನ್ನು ಗಮನಾರ್ಹವಾಗಿ ತಗ್ಗಿಸಬೇಕಿದ್ದು, ನಿರ್ದಿಷ್ಟವಾಗಿ ಚುನಾವಣಾ ಪ್ರಚಾರದ ಅವಿಭಾಜ್ಯ ಅಂಗವಾಗಿರುವ ಪ್ರಯಾಣ ಹಾಗೂ ಸುದೀರ್ಘ ಕಾಲ ಆಸೀನವಾಗುವ ಚಟುವಟಿಕೆಗಳನ್ನು ತಗ್ಗಿಸಬೇಕಿದೆ” ಎಂದು ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
“ಹೀಗಾಗಿ ನಾನು ಹಾಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ನನ್ನ ಸಕ್ರಿಯ ಪಾಲ್ಗೊಳ್ಳುವಿಕೆಗೆ ಒಂದು ವಿರಾಮವನ್ನು ಪ್ರಕಟಿಸಬೇಕಿದೆ” ಎಂದು ನಡ್ಡಾ ಅವರಿಗೆ ಖುಷ್ಬೂ ಸುಂದರ್ ತಿಳಿಸಿದ್ದಾರೆ.







