ಎಪ್ಸ್ಟೀನ್ ಕಡತದಲ್ಲಿ ಭಾರತೀಯ ಸಚಿವರ ಹೆಸರುಗಳಿವೆಯೇ?: ಸ್ಪಷ್ಟನೆ ನೀಡುವಂತೆ ಮೋದಿ ಸರಕಾರಕ್ಕೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಆಗ್ರಹ

ಸುಬ್ರಮಣಿಯನ್ ಸ್ವಾಮಿ | Photo : PTI
ಹೊಸದಿಲ್ಲಿ: ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದ ಜೆಫ್ರಿ ಎಪ್ಸ್ಟೀನ್ ಕಡತಗಳಲ್ಲಿ ಭಾರತೀಯ ಸಚಿವರ ಹೆಸರುಗಳಿವೆಯೇ ಎಂಬ ಬಗ್ಗೆ ಮೋದಿ ಸರಕಾರ ಸ್ಪಷ್ಟನೆಯನ್ನು ನೀಡಬೇಕು ಎಂದು ಬಿಜೆಪಿ ನಾಯಕ, ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ ಶನಿವಾರ ಆಗ್ರಹಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, ಅಮೆರಿಕದ ನ್ಯಾಯ ಇಲಾಖೆ ಎಪ್ಸ್ಟೀನ್ ಸಂಬಂಧಿಸಿದ ಮಹತ್ವದ ಕಡತಗಳನ್ನು ಬಿಡುಗಡೆ ಮಾಡಿದೆ. ಈ ಕಡತಗಳಲ್ಲಿ ಯಾವುದೇ ಪ್ರಮುಖ ಭಾರತೀಯ ಸಚಿವರ ಹೆಸರುಗಳ ಬಗ್ಗೆ ಉಲ್ಲೇಖವಿದೆಯೇ? ಅಮೆರಿಕದ ಎಫ್ಬಿಐ (FBI) ಸಾರ್ವಜನಿಕವಾಗಿ ಪ್ರಕಟಿಸಿರುವ ಅಥವಾ ಬಹಿರಂಗಪಡಿಸಿರುವ ಪಟ್ಟಿಯಲ್ಲಿ ಭಾರತೀಯರ ಹೆಸರುಗಳಿದ್ದರೆ, ಯಾರ್ಯಾರ ಹೆಸರುಗಳಿವೆ ಎಂಬುದನ್ನು ಮೋದಿ ಸರಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಪ್ರಕರಣದ ಕಡತಗಳನ್ನು ಬಿಡುಗಡೆ ಮಾಡುವ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂಕಿತ ಹಾಕಿದಾಗ ಈ ಕಡತದ ಬಿಡುಗಡೆ ಭಾರತದಲ್ಲೂ ಬಿರುಗಾಳಿ ಎಬ್ಬಿಸುವ ಸಾಧ್ಯತೆ ಇದೆ ಎಂದು ಈ ಮೊದಲು ಸುಬ್ರಮಣಿಯನ್ ಸ್ವಾಮಿ ಹೇಳಿದ್ದರು.
ಇದು ಭಾರತೀಯ ರಾಜಕಾರಣಿಗಳಿಗೆ ಮತ್ತು ನಮ್ಮ ದೇಶದ ಪ್ರತಿಷ್ಠೆಗೆ ಹಾನಿ ಮಾಡುವ ಸಾಧ್ಯತೆ ಇರುವುದರಿಂದ ಬಿಜೆಪಿ ಇದಕ್ಕೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಸಭೆ ನಡೆಸುವುದು ಮುಖ್ಯವಾಗಿದೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದರು.
Epstein monumental Files have been released by US’ Department of Justice. Does it have reference to any top Indian Ministers? Modi government must make it clear whose names if any have been declared or made public by FBI of US.
— Subramanian Swamy (@Swamy39) January 31, 2026







