1.4 ಕೋಟಿ ರೂ. ಸಾಲ ವಂಚಿಸಲು ಸಾವಿನ ನಾಟಕವಾಡಿದ ಬಿಜೆಪಿ ಮುಖಂಡನ ಪುತ್ರ; ಆರೋಪಿಯ ಬಂಧನ

ಭೋಪಾಲ್: ಮಧ್ಯಪ್ರದೇಶದ ರಾಜಗಢ ಜಿಲ್ಲೆಯ ಬಿಜೆಪಿ ಮುಖಂಡ ಮಹೇಶ್ ಸೋನಿ ಅವರ ಪುತ್ರ ವಿಶಾಲ ಸೋನಿ ಎಂಬಾತ ಬ್ಯಾಂಕಿನಿಂದ ಪಡೆದ ಸಾಲವನ್ನು ವಂಚಿಸುವ ಸಲುವಾಗಿ ನಕಲಿ ದಾಖಲೆ ಸೃಷ್ಟಿಸಿ ತಾನು ಮೃತಪಟ್ಟಿದ್ದಾಗಿ ಬಿಂಬಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದಲ್ಲಿ ಅಡಗಿಕೊಂಡಿದ್ದ ಆರೋಪಿ ಕಾಳಿಸಿಂಧ್ ನದಿಯ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿರುವುದಾಗಿ ವದಂತಿ ಹಬ್ಬಿಸಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು, ಜಿಲ್ಲಾಡಳಿತ, ರಾಜ್ಯ ವಿಪತ್ತು ಸ್ಪಂದನೆ ಪಡೆ 10 ದಿನಗಳ ಕಾಲ ನದಿಯ 20 ಕಿಲೋಮೀಟರ್ ಉದ್ದಕ್ಕೂ ಶೋಧ ಕಾರ್ಯಾಚರಣೆ ನಡೆಸಿತ್ತು.
ಸೆಪ್ಟೆಂಬರ್ 5ರಂದು ಕಾಳಿಸಿಂಧ್ ನದಿಯಲ್ಲಿ ಕಾರು ಮುಳುಗಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾದ ಹಿನ್ನೆಲೆಯಲ್ಲಿ ಈ ನಾಟಕೀಯ ಪ್ರಹಸನ ಆರಂಭವಾಗಿತ್ತು. ಮುಳುಗುತಜ್ಞರು ಕಾರನ್ನು ಪತ್ತೆ ಮಾಡಿದ್ದರು. ಆದರೆ ಕಾರು ಖಾಲಿ ಇದ್ದು, ಇದರಲ್ಲಿ ಇದ್ದ ಎನ್ನಲಾದ ವಿಶಾಲ್ ಸೋನಿಯ ಪತ್ತೆಗೆ ದೊಡ್ಡ ಪ್ರಮಾಣದ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭವಾಯಿತು. ವಿಶಾಲ್ ತಂದೆ ಮಾಡಿದ ನಿರ್ಲಕ್ಷ್ಯ ಆರೋಪದ ಹಿನ್ನೆಲೆಯಲ್ಲಿ ಸುಮಾರು ಎರಡು ವಾರಗಳ ಕಾಲ ಮೂರು ಪ್ರತ್ಯೇಕ ತಂಡಗಳು 20 ಕಿಲೋಮೀಟರ್ ಉದ್ದಕ್ಕೂ ಶೋಧ ಕಾರ್ಯಾಚರಣೆ ನಡೆಸಿದವು.
ಎಂಟು ದಿನಗಳ ಕಾಲ ವಿಶಾಲ್ ಇರುವಿಕೆ ಬಗ್ಗೆ ಯಾವುದೇ ಸುಳಿವು ಸಿಗದಿದ್ದಾಗ ಸಂಶಯ ಮತ್ತಷ್ಟು ದಟ್ಟವಾಯಿತು. ಪೊಲೀಸ್ ಠಾಣಾಧಿಕಾರಿ ಆಕಾಂಕ್ಷ ಹಾಡಾ ಅವರು ವಿಶಾಲ್ ನ ಮೊಬೈಲ್ ಕರೆ ಮಾಹಿತಿ ಕಲೆ ಹಾಕಿದಾಗ ಆತ ಮಹಾರಾಷ್ಟ್ರದಲ್ಲಿ ಇರುವುದು ದೃಢಪಟ್ಟಿತು.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮಹಾರಾಷ್ಟ್ರ ಪೊಲೀಸರ ಸಹಾಯದಿಂದ ಮಹಾರಾಷ್ಟ್ರದ ಸಂಭಾಜಿನಗರ ಜಿಲ್ಲೆಯ ಫರ್ದಾಪುರ ಠಾಣೆ ವ್ಯಾಪ್ತಿಯಲ್ಲಿ ವಿಶಾಲ್ ನನ್ನು ಬಂಧಿಸಿದರು. ತಾನು ಆರು ಟ್ರಕ್ ಹಾಗೂ ಎರಡು ಪ್ರಯಾಣಿಕ ವಾಹನಗಳನ್ನು ಹೊಂದಿದ್ದು, 1.40 ಕೋಟಿ ರೂಪಾಯಿ ಸಾಲ ಹೊಂದಿರುವುದಾಗಿ ವಿಚಾರಣೆ ವೇಳೆ ಆತ ಒಪ್ಪಿಕೊಂಡಿದ್ದಾನೆ."ನಾನು ಮರಣ ಪ್ರಮಾಣಪತ್ರ ಪಡೆದರೆ ಈ ಸಾಲ ಮನ್ನಾ ಆಗುತ್ತದೆ ಎಂದು ಹೇಳಿದ ಹಿನ್ನೆಲೆಯಲ್ಲಿ ಈ ನಾಟಕವಾಡಿದ್ದೆ" ಎಂದು ತಪ್ಪೊಪ್ಪಿಕೊಂಡಿದ್ದಾನೆ.
ಸೆಪ್ಟೆಂಬರ್ 5ರಂದು ಟ್ರಕ್ ಚಾಲಕನಿಂದ ಗೋಪಾಲಪುರ ಬಳಿ ಹಣ ಪಡೆದು ನದಿ ದಂಡೆಗೆ ಕಾರಿನಲ್ಲಿ ಪ್ರಯಾಣಿಸಿ ಕಾರಿನ ದೀಪಗಳನ್ನು ಆರಿಸಿ ವಾಹನವನ್ನು ನದಿಗೆ ತಳ್ಳಿ ಚಾಲಕನ ಬೈಕ್ ನಲ್ಲಿ ಪರಾರಿಯಾಗಿದ್ದ. ಪತ್ರಿಕೆಗಳಲ್ಲಿ ತನ್ನ ಸಾವಿನ ಸುದ್ದಿಯನ್ನು ಓದಿ, ಶಿರಡಿ ಹಾಗೂ ಶನಿಸಿಂಗಾನಪುರಕ್ಕೆ ಪ್ರಯಾಣ ಬೆಳೆಸಿದ್ದ.
ಪೊಲೀಸರು ತನ್ನ ಜಾಡು ಹಿಡಿದದ್ದು ಗೊತ್ತಾದಾಗ ಬಟ್ಟೆ ಹರಿದುಕೊಂಡು ಅಪಹರಣದ ನಾಟಕವಾಡಿದ್ದುಕೂಡಾ ವಿಚಾರಣೆ ವೇಳೆ ದೃಢಪಟ್ಟಿದೆ.







