SIR ಬಳಿಕವೂ ಎರಡು ರಾಜ್ಯಗಳ ಮತದಾರರ ಪಟ್ಟಿಯಲ್ಲಿ BJP ಸದಸ್ಯನ ಹೆಸರು!
ಪರಿಷ್ಕರಣೆಯ ಉದ್ದೇಶವೇನು ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ ಜನರು

PC : x/@zoo_bear
ಬೆಂಗಳೂರು: ಕರ್ನಾಟಕದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಬಳಿಕ ಅಂತಿಮ ಮತದಾರರ ಪಟ್ಟಿಯೂ ಪ್ರಕಟಗೊಂಡಿರುವ ನಡುವೆಯೇ, BJP ಸದಸ್ಯ ಉದಯ್ ಕುಮಾರ್ ಹಾಗೂ ಅವರ ಪತ್ನಿ ಬಿಂದು ಕುಮಾರಿ ಅವರ ಹೆಸರುಗಳು ಕರ್ನಾಟಕ ಮತ್ತು ಬಿಹಾರ ಎರಡೂ ರಾಜ್ಯಗಳ ಮತದಾರರ ಪಟ್ಟಿಯಲ್ಲಿ ಮುಂದುವರಿದಿವೆ ಎಂಬ ಆರೋಪ ಕೇಳಿಬಂದಿದೆ.
ಆಲ್ಟ್ ನ್ಯೂಸ್ ಸಹಸಂಸ್ಥಾಪಕ ಹಾಗೂ ಫ್ಯಾಕ್ಟ್ ಚೆಕರ್ ಮುಹಮ್ಮದ್ ಝುಬೈರ್ ಅವರು ಅ.27ರಂದು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ದೀರ್ಘಕಾಲದಿಂದ ವಾಸವಿದ್ದು, ಇಲ್ಲಿಯೇ ಮತ ಚಲಾಯಿಸುತ್ತಿರುವ ಉದಯ್ ಕುಮಾರ್ ಅವರು ಬಿಹಾರದ ನವಾಡಾ ಜಿಲ್ಲೆಯ ಸ್ವಗ್ರಾಮದಲ್ಲಿಯೂ ಮತದಾರರಾಗಿ ನೋಂದಣಿಯಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕರ್ನಾಟಕದ ಮತದಾರರ ಪಟ್ಟಿಯಲ್ಲಿ ಉದಯ್ ಕುಮಾರ್ ಅವರ ಹೆಸರು EPIC ಸಂಖ್ಯೆ SOH4526935ರೊಂದಿಗೆ ದಾಖಲಾಗಿದ್ದು, ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಮತದಾರರೆಂದು ನಮೂದಿಸಲಾಗಿದೆ. ಬಿಬಿಎಂಪಿ ಉತ್ತರ ಜಿಲ್ಲೆಯ ವ್ಯಾಪ್ತಿಯ ಆಲ್ವಿನ್ ಪಬ್ಲಿಕ್ ಸ್ಕೂಲ್ ಮತಗಟ್ಟೆ ಅವರ ಮತಗಟ್ಟೆಯಾಗಿದೆ ಎಂದು ಹಂಚಿಕೊಳ್ಳಲಾದ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.
ಇದೇ ವೇಳೆ, ಬಿಹಾರದ ನವಾಡಾ ಜಿಲ್ಲೆಯ ಹಿಸ್ಸುವಾ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲೂ ಉದಯ್ ಕುಮಾರ್ ಅವರ ಹೆಸರಿದ್ದು, EPIC ಸಂಖ್ಯೆ UAO0928291 ಎಂದು ದಾಖಲಾಗಿದೆ. ಬೆರೌಟಾ ಪಶ್ಚಿಮ ಭಾಗದ ಉತ್ಕ್ರಮಿತ ಮಧ್ಯ ವಿದ್ಯಾಲಯ ಮತಗಟ್ಟೆಯನ್ನು ಅವರ ಮತಗಟ್ಟೆಯಾಗಿ ನಮೂದಿಸಲಾಗಿದೆ.
ಉದಯ್ ಕುಮಾರ್ ಅವರ ಪತ್ನಿ ಬಿಂದು ಕುಮಾರಿ ಅವರ ಹೆಸರೂ ಇದೇ ರೀತಿಯಲ್ಲಿ ಎರಡು ರಾಜ್ಯಗಳ ಮತದಾರರ ಪಟ್ಟಿಯಲ್ಲಿ ಕಾಣಿಸುತ್ತಿದೆ ಎಂದು ಝುಬೈರ್ ತಿಳಿಸಿದ್ದಾರೆ. ಎರಡೂ ದಾಖಲೆಗಳಲ್ಲಿರುವ ಭಾವಚಿತ್ರಗಳು ಒಂದೇ ವ್ಯಕ್ತಿಗೆ ಸೇರಿದವು ಎಂದು ಆರೋಪಿಸಲಾಗಿದ್ದು, ತಂದೆಯ ಹೆಸರಿನಲ್ಲಿ ವ್ಯತ್ಯಾಸ ಹಾಗೂ ವಯಸ್ಸಿನಲ್ಲಿ ಕೆಲವು ವರ್ಷಗಳ ಅಂತರವಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ.
2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬೆಂಗಳೂರಿನ ಆಲ್ವಿನ್ ಪಬ್ಲಿಕ್ ಸ್ಕೂಲ್ ಬಳಿ ಉದಯ್ ಕುಮಾರ್ ಮತ ಚಲಾಯಿಸಿರುವ ಚಿತ್ರಗಳು ಹಾಗೂ ಬಳಿಕ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನವಾಡಾದ ಮತಗಟ್ಟೆಯಲ್ಲಿ ಮತ ಚಲಾಯಿಸಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಅವರದೇ ಪೋಸ್ಟ್ ಗಳಲ್ಲಿ ಕಂಡುಬಂದಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಈ ಕುರಿತು ಝುಬೈರ್ ಅವರು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ, ಬೆಂಗಳೂರು ನಗರ ಜಿಲ್ಲಾಧಿಕಾರಿ, ನವಾಡಾ ಜಿಲ್ಲಾಧಿಕಾರಿ ಹಾಗೂ ಚುನಾವಣಾ ಆಯೋಗವನ್ನು ಟ್ಯಾಗ್ ಮಾಡಿ, ಒಬ್ಬ ವ್ಯಕ್ತಿ ಎರಡು EPIC ಕಾರ್ಡ್ಗಳನ್ನು ಹೊಂದಲು ಹಾಗೂ ಎರಡು ರಾಜ್ಯಗಳಲ್ಲಿ ಮತ ಚಲಾಯಿಸಲು ಅವಕಾಶವಿದೆಯೇ ಎಂದು ಪ್ರಶ್ನಿಸಿದ್ದಾರೆ.
ಮತದಾರರ ಪಟ್ಟಿಯನ್ನು ಸ್ವಚ್ಛಗೊಳಿಸಿ, ಶುದ್ಧೀಕರಿಸುವ ಉದ್ದೇಶದಿಂದ ನಡೆಸಲಾದ SIR ಪ್ರಕ್ರಿಯೆಯಲ್ಲಿಯೇ ಎರಡು ರಾಜ್ಯಗಳಲ್ಲಿ ಒಂದೇ ವ್ಯಕ್ತಿಯ ಹೆಸರುಗಳು ಮುಂದುವರಿದಿರುವ ಆರೋಪ ಇದೀಗ ಚುನಾವಣಾ ವ್ಯವಸ್ಥೆಯ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಭಾರತದ ಚುನಾವಣಾ ಕಾನೂನಿನ ಪ್ರಕಾರ, ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಮತದಾರನಾಗಿ ನೋಂದಣಿಯಾಗಲು ಅವಕಾಶವಿಲ್ಲ. ಆದರೆ, ಈ ಪ್ರಕರಣದಲ್ಲಿ ದ್ವಂದ್ವ ನೋಂದಣಿ ಮತ್ತು ಎರಡೂ ಕಡೆ ಮತದಾನ ಮಾಡಿದ ಆರೋಪಗಳು ಕೇಳಿಬಂದಿವೆ.
ಈ ಪೋಸ್ಟ್ಗೆ ಪ್ರತಿಕ್ರಿಯಿಸಿದ ನೆಟ್ಟಿಗರು, SIR ಪ್ರಕ್ರಿಯೆಯ ಉದ್ದೇಶ ಹಾಗೂ ಅದರ ಅನುಷ್ಠಾನದ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ನೈಜ ಮತದಾರರ ಹೆಸರುಗಳನ್ನು ತೆಗೆದುಹಾಕಿ, ಕೆಲವರ ದ್ವಂದ್ವ ನೋಂದಣಿಗಳು ಮುಂದುವರಿಯುತ್ತಿದ್ದರೆ SIR ನ ಉದ್ದೇಶವೇನು ಎಂದು ಪ್ರಶ್ನಿಸಿದ್ದಾರೆ.
ಶಂತನು ಕತ್ರೆ ಎಂಬವರು ಪ್ರತಿಕ್ರಿಯಿಸಿ, “ಮತ ಕಳ್ಳತನಕ್ಕೆ ಕಾನೂನುಬದ್ಧತೆ ನೀಡುವ ಉದ್ದೇಶದಿಂದ ನಡೆಸಲಾಗುತ್ತಿರುವ ನಕಲಿ ಪ್ರಕ್ರಿಯೆಯೇ SIR. ಇದಕ್ಕಿಂತ ಬೇರೆ ಯಾವುದೇ ಉದ್ದೇಶವಿಲ್ಲ. ಇದನ್ನು ಜಾರಿಗೆ ತರಲು ಬಯಸಿದರೂ ಈ ಅಸಮರ್ಥರು ಅದನ್ನು ನಿಭಾಯಿಸುವ ಸ್ಥಿತಿಯಲ್ಲಿಲ್ಲ” ಎಂದು ಹೇಳಿದ್ದಾರೆ.
“ಬಲಪಂಥೀಯ ರಾಜಕಾರಣಿಗಳಿಗೆ SIR ಜಾರಿಯಾಗಲೇ ಇಲ್ಲ ಎಂಬಂತೆ ಕಾಣುತ್ತಿದೆ” ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಅವಧೇಶ್ ಶರ್ಮಾ ಎಂಬವರು ಈ ಕುರಿತು ಪ್ರತಿಕ್ರಿಯಿಸಿ, “ಒಂದು ಪಕ್ಷವನ್ನು ಗೆಲ್ಲಿಸುವ ಉದ್ದೇಶದಿಂದಲೇ ಇಡೀ SIR ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ” ಎಂದಿದ್ದಾರೆ. ಮತ್ತೊಬ್ಬ ನೆಟ್ಟಿಗರು, “ನೈಜ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಿ, ಇಂತಹ ನಕಲಿ ಮತದಾರರ ಹೆಸರುಗಳನ್ನು ಉಳಿಸಿಕೊಳ್ಳುವುದಕ್ಕಾಗಿಯೇ SIR ನಡೆಸಲಾಗುತ್ತಿದೆ” ಎಂದು ಹೇಳಿದ್ದಾರೆ.






