Delhi ಹೋಟೆಲ್ ಅಗ್ನಿ ದುರಂತ | ಜೀವದ ಹಂಗು ತೊರೆದು ರಕ್ಷಣೆಗೆ ಧಾವಿಸಿದ ಐವರು ಮುಸ್ಲಿಂ ಯುವಕರು
ಸಾಹಸ ಕಾರ್ಯಾಚರಣೆಗೆ ಬಿಜೆಪಿ ಶಾಸಕ ಮೆಚ್ಚುಗೆ

Photo Credit : maktoobmedia
ಹೊಸದಿಲ್ಲಿ: ದಕ್ಷಿಣ ದಿಲ್ಲಿಯ ಮಾಲ್ವಿಯಾ ನಗರದಲ್ಲಿರುವ ಹೋಟೆಲ್ ನಲ್ಲಿ ಬುಧವಾರ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 21 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ನಡುವೆಯೇ, ತಮ್ಮ ಜೀವದ ಹಂಗು ತೊರೆದು, ಬೆಂಕಿಯ ನಡುವೆ ಸಿಲುಕಿದ್ದವರ ರಕ್ಷಣೆಗೆ ಧಾವಿಸಿದ ಐವರು ಮುಸ್ಲಿಂ ಯುವಕರ ಧೈರ್ಯ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಮಾಲ್ವಿಯಾ ನಗರದ ಬಿಜೆಪಿ ಶಾಸಕ ಸತೀಶ್ ಉಪಾಧ್ಯಾಯ ಅವರು ಈ ಯುವಕರನ್ನು ಸಾರ್ವಜನಿಕವಾಗಿ ಶ್ಲಾಘಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಅವರ ಕಾರ್ಯಕ್ಕೆ ಪ್ರಶಂಸೆಯ ಮಹಾಪೂರವೇ ಹರಿದುಬಂದಿದೆ.
ಅಫ್ಜಲ್, ಮುಹಮ್ಮದ್ ಶಾರುಖ್, ಮುಹಮ್ಮದ್ ಅನೀಶ್, ಮುಹಮ್ಮದ್ ಆಮಿರ್ ಹಾಗೂ ಮುಹಮ್ಮದ್ ವಸೀಮ್ ಎಂಬ ಐವರು ಯುವಕರ ಫೊಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಉಪಾಧ್ಯಾಯ, "ಈ ಧೈರ್ಯಶಾಲಿಗಳಿಗೆ ನನ್ನ ವಂದನೆಗಳು" ಎಂದು ಬರೆದಿದ್ದಾರೆ.
ಈ ಐವರು ದಿಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗೆ ಕೈಜೋಡಿಸಿ ಉರಿಯುತ್ತಿದ್ದ ಕಟ್ಟಡದೊಳಗೆ ಹಲವು ಬಾರಿ ಪ್ರವೇಶಿಸಿ ಬೆಂಕಿಯ ನಡುವೆ ಸಿಲುಕಿದ್ದವರನ್ನು ಸುರಕ್ಷಿತವಾಗಿ ಹೊರತೆಗೆದರು. ಬೆಂಕಿಯ ಜ್ವಾಲೆ ಹಾಗೂ ದಟ್ಟ ಹೊಗೆಯ ನಡುವೆಯೂ ಅವರು ರಕ್ಷಣಾ ಕಾರ್ಯವನ್ನು ಮುಂದುವರಿಸಿದ್ದು, ಹಲವರ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು ಎಂದು ತಿಳಿದು ಬಂದಿದೆ.
ಅಗ್ನಿಶಾಮಕ ಸಿಬ್ಬಂದಿಯಷ್ಟೇ ಅಲ್ಲದೆ, ಸ್ಥಳೀಯ ನಿವಾಸಿಗಳು, ಅಂಗಡಿ ಮಾಲೀಕರು, ಕಾರ್ಮಿಕರು ಹಾಗೂ ಸಮೀಪದ ವಸತಿ ಗೃಹಗಳ ಅತಿಥಿಗಳು ಕೂಡ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ತುರ್ತು ಪರಿಸ್ಥಿತಿಯಲ್ಲಿ ಅವರ ಸಹಕಾರದಿಂದ ಡಝನ್ ಗಟ್ಟಲೆ ಜೀವಗಳನ್ನು ಉಳಿಸಲು ಸಾಧ್ಯವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡವರಲ್ಲಿ ಹೋಟೆಲ್ ಎದುರಿನ ಹಾಸಿಗೆ ಅಂಗಡಿ ಮಾಲೀಕ 61 ವರ್ಷದ ರಿಯಾಝುದ್ದೀನ್ ಕೂಡ ಪ್ರಮುಖರಾಗಿದ್ದರು. ಬೆಂಕಿ ಕಟ್ಟಡವನ್ನು ಆವರಿಸುತ್ತಿದ್ದಂತೆ ಅವರು ತಮ್ಮ ಅಂಗಡಿಯಲ್ಲಿದ್ದ ಹಾಸಿಗೆಗಳನ್ನು ಹೊರತೆಗೆದು ಕಟ್ಟಡದ ಕಿಟಕಿಗಳ ಕೆಳಗಿನ ಕಿರಿದಾದ ರಸ್ತೆಯಲ್ಲಿ ಹಾಸಿದರು. ಮೇಲಿನ ಮಹಡಿಗಳಿಂದ ಜಿಗಿದವರ ಜೀವ ಉಳಿಸಲು ಈ ಹಾಸಿಗೆಗಳು ನೆರವಾದವು.
ಈ ಕಾರ್ಯಾಚರಣೆಯಲ್ಲಿ ಅವರಿಗೆ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ನಷ್ಟ ಉಂಟಾಗಿದೆ ಎಂದು ವರದಿಗಳು ತಿಳಿಸಿವೆ. ಆದರೂ ಕನಿಷ್ಠ 10 ಜನರ ಜೀವ ಉಳಿಸಲು ಸಾಧ್ಯವಾಯಿತು ಎಂಬ ತೃಪ್ತಿ ಅವರಿಗೆ ಇದೆ.
ಘಟನೆಯ ವೀಡಿಯೊಗಳಲ್ಲಿ ಮೇಲಿನ ಮಹಡಿಗಳಲ್ಲಿ ಸಿಲುಕಿದ್ದವರು ಹೊಗೆ ಮತ್ತು ಜ್ವಾಲೆಗಳಿಂದ ಪಾರಾಗಲು ಕಟ್ಟಡದಿಂದ ಜಿಗಿಯುತ್ತಿರುವ ದೃಶ್ಯಗಳು ದಾಖಲಾಗಿವೆ. ಕಿಟಕಿಗಳಿಂದ ಹೊರಗೆ ಬಾಗಿ ಸಹಾಯಕ್ಕಾಗಿ ಕೂಗುತ್ತಿದ್ದವರನ್ನು ಕಂಡ ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿದ್ದರು.
ಅಗ್ನಿಶಾಮಕ ದಳ ಆಗಮಿಸುವ ಮುನ್ನವೇ ಕೆಲವರು ಕಟ್ಟಡದೊಳಗೆ ಪ್ರವೇಶಿಸಲು ಯತ್ನಿಸಿದ್ದರೂ, ದಟ್ಟ ಹೊಗೆ ಹಾಗೂ ತೀವ್ರ ಉಷ್ಣತೆಯಿಂದಾಗಿ ಹಿಂದಕ್ಕೆ ಸರಿಯಬೇಕಾಯಿತು. ಹೌಜ್ ರಾಣಿ ಪ್ರದೇಶದಲ್ಲಿ ಆಸ್ಪತ್ರೆಗಳಿಗೆ ಭೇಟಿ ನೀಡುವ ರೋಗಿಗಳು ಮತ್ತು ಅವರ ಸಂಬಂಧಿಕರು ಹೆಚ್ಚಾಗಿ ತಂಗುವ ಬಜೆಟ್ ಲಾಡ್ಜ್ ಗಳು ಹಾಗೂ ಅತಿಥಿ ಗೃಹಗಳು ಹೆಚ್ಚಿನ ಸಂಖ್ಯೆಯಲ್ಲಿವೆ.
ಸ್ಥಳೀಯರ ಪ್ರಕಾರ, ಸಿಲುಕಿದ್ದ ಅತಿಥಿಗಳಲ್ಲಿ ಹಲವರು ಈ ಪ್ರದೇಶಕ್ಕೆ ಹೊಸಬರಾಗಿದ್ದ ಕಾರಣ, ತುರ್ತು ಸಂದರ್ಭದಲ್ಲಿನ ನಿರ್ಗಮನ ಮಾರ್ಗಗಳನ್ನು ಪತ್ತೆಹಚ್ಚುವುದು ಅವರಿಗೆ ಕಷ್ಟವಾಯಿತು ಎನ್ನಲಾಗಿದೆ.
ಸಾಕೇತ್ನ ಮ್ಯಾಕ್ಸ್ ಆಸ್ಪತ್ರೆ ಸಮೀಪ ವಾಸಿಸುವ ಭದ್ರತಾ ಸಿಬ್ಬಂದಿ ವಾಸಿಮ್ ರಝಾ ಕೂಡ ರಕ್ಷಣಾ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಅವರು ಹಲವು ಬಾರಿ ಹೊಗೆಯಿಂದ ತುಂಬಿದ್ದ ಕಟ್ಟಡದೊಳಗೆ ಪ್ರವೇಶಿಸಿ ಬದುಕುಳಿದವರನ್ನು ಹುಡುಕಿದರು.
"ನೆಲಮಾಳಿಗೆಯಿಂದ ಮೂರನೇ ಮಹಡಿಯವರೆಗೆ ಕನಿಷ್ಠ 10 ಮಂದಿಗೆ CPR ನೀಡಿದ್ದೇನೆ" ಎಂದು ಅವರು ತಿಳಿಸಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ ನಂತರವೂ ಸ್ಥಳೀಯ ಸ್ವಯಂಸೇವಕರು ಅವರೊಂದಿಗೆ ಸೇರಿ ಕಟ್ಟಡದೊಳಗೆ ಶೋಧ ಕಾರ್ಯ ನಡೆಸಿದರು. ಒಳಗಿನ ಪರಿಸ್ಥಿತಿ ಅತ್ಯಂತ ಭೀಕರವಾಗಿತ್ತು ಎಂದು ಅವರು ವಿವರಿಸಿದ್ದಾರೆ.
ಬೆಂಕಿ ಭಾಗಶಃ ನಿಯಂತ್ರಣಕ್ಕೆ ಬಂದ ಬಳಿಕ ಕಟ್ಟಡದೊಳಗೆ ಪ್ರವೇಶಿಸಿದ 40 ವರ್ಷದ ಮುಹಮ್ಮದ್ ಇಸ್ರಾರ್ ಖಾನ್, "ಜನರು ಮಸಿಯಿಂದ ಆವೃತವಾಗಿದ್ದರು. ಕೆಲವರು ಸಹಾಯಕ್ಕಾಗಿ ಅಳುತ್ತಿದ್ದರು, ಕೂಗುತ್ತಿದ್ದರು. ಅನೇಕರಿಗೆ ಗಂಭೀರ ಗಾಯಗಳಾಗಿದ್ದವು. ಹಲವು ಮೃತದೇಹಗಳನ್ನು ನೋಡಿದ್ದೇವೆ. ಅವುಗಳನ್ನು ಬೆಡ್ ಶೀಟ್ ಗಳಲ್ಲಿ ಸುತ್ತಿ ಹೊರಗೆ ಸಾಗಿಸಲು ಸಹ ನೆರವಾಗಿದ್ದೇವೆ" ಎಂದು ಹೇಳಿದ್ದಾರೆ.
ಅಗ್ನಿಶಾಮಕ ತುರ್ತು ಸೇವೆಯ ಮಾಜಿ ತರಬೇತುದಾರರಾದ 35 ವರ್ಷದ ಮುಹಮ್ಮದ್ ಶೋಯೆಬ್ ಕೂಡ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ರಕ್ಷಣಾ ತಂಡಗಳು ತಲುಪುವ ಮೊದಲೇ ಹಲವು ಮಂದಿ ಕಟ್ಟಡದಿಂದ ಜಿಗಿದಿದ್ದರು ಎಂದು ಅವರು ಹೇಳಿದ್ದಾರೆ.
"ಸುಮಾರು ಒಂಭತ್ತು ಮಂದಿ ಕಟ್ಟಡದಿಂದ ಜಿಗಿದಿದ್ದರು" ಎಂದು ಶೋಯೆಬ್ ತಿಳಿಸಿದ್ದಾರೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಘಟನೆಯಲ್ಲಿ ಕನಿಷ್ಠ 47 ಮಂದಿಯನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಆದರೂ, 21 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಆಫ್ರಿಕಾದ ವಿವಿಧ ದೇಶಗಳ ಒಂಭತ್ತು ನಾಗರಿಕರು ಹಾಗೂ ತುರ್ಕಮೆನಿಸ್ತಾನದ ಇಬ್ಬರು ನಾಗರಿಕರು ಸೇರಿದ್ದಾರೆ. ಗಾಯಗೊಂಡವರಲ್ಲಿ ಐವರು ವಿದೇಶಿ ಪ್ರಜೆಗಳೂ ಇದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಹೋಟೆಲ್ ನಲ್ಲಿ ಗಂಭೀರ ಸುರಕ್ಷತಾ ನಿಯಮ ಉಲ್ಲಂಘನೆಗಳು ನಡೆದಿರುವುದು ಬೆಳಕಿಗೆ ಬಂದಿದೆ. ಅಗ್ನಿಶಾಮಕ ಇಲಾಖೆಯ ಕಡ್ಡಾಯ ಅನುಮತಿ ಇಲ್ಲದೆ ಹೋಟೆಲ್ ಕಾರ್ಯನಿರ್ವಹಿಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಕಟ್ಟಡದ ಮಾಲೀಕ ಲವ್ಕೇಶ್ ಬಜಾಜ್ ಅವರನ್ನು ಬಂಧಿಸಿದ್ದು, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 105 (ಕೊಲೆಗೆ ಸಮಾನವಲ್ಲದ ಅಪರಾಧಿ ನರಹತ್ಯೆ) ಹಾಗೂ ಸೆಕ್ಷನ್ 326 (ಬೆಂಕಿಯಿಂದ ಹಾನಿ ಉಂಟುಮಾಡುವುದು) ಅಡಿಯಲ್ಲಿ FIR ದಾಖಲಿಸಿದ್ದಾರೆ.
ದಿಲ್ಲಿ ಮಹಾನಗರ ಪಾಲಿಕೆ ಮೂಲಗಳ ಪ್ರಕಾರ, ಕಟ್ಟಡಕ್ಕೆ ಕೇವಲ ಆರು ಕೊಠಡಿಗಳಿಗೆ ಮಾತ್ರ ಅನುಮೋದನೆ ನೀಡಲಾಗಿತ್ತು. ಆದರೆ 20ಕ್ಕೂ ಹೆಚ್ಚು ಕೊಠಡಿಗಳನ್ನು ನಡೆಸಲಾಗುತ್ತಿತ್ತು. ಅಲ್ಲದೆ, ಕಟ್ಟಡದಲ್ಲಿ ಒಂದೇ ಒಂದು ಪ್ರವೇಶ ಮತ್ತು ನಿರ್ಗಮನ ದ್ವಾರವಿದ್ದು, ಬೆಂಕಿ ಅವಘಡದ ವೇಳೆ ಜನರ ಸ್ಥಳಾಂತರ ಕಾರ್ಯಕ್ಕೆ ಇದು ಅಡ್ಡಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ನಡುವೆ, ತಮ್ಮ ಪ್ರಾಣವನ್ನು ಲೆಕ್ಕಿಸದೆ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಮುಸ್ಲಿಂ ಯುವಕರು ಹಾಗೂ ಸ್ಥಳೀಯ ಸ್ವಯಂಸೇವಕರ ಧೈರ್ಯ ಮತ್ತು ಮಾನವೀಯ ಸೇವೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಶಂಸಿಸಲಾಗುತ್ತಿದೆ.






