ಮಹಿಳಾ ವರದಿಗಾರ್ತಿಯ ಮೈಕ್ ಒಡೆದು ಹಾಕಿದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್: ವ್ಯಾಪಕ ಆಕ್ರೋಶ

Brij Bhushan Sharan Singh | Photo: PTI
ಹೊಸದಿಲ್ಲಿ: ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ಎದುರಿಸುತ್ತಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಮಹಿಳಾ ಪತ್ರಕರ್ತೆಯೊಬ್ಬರೊಂದಿಗೆ ದಾರ್ಷ್ಟ್ಯದಿಂದ ವರ್ತಿಸಿ ನೆಟ್ಟಿಗರ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಬ್ರಿಜ್ ಭೂಷಣ್ ವಿರುದ್ಧ ಮಾಡಲಾಗಿರುವ ಆರೋಪಗಳ ಕುರಿತು ಹಾಗೂ ದಿಲ್ಲಿ ಪೊಲೀಸರು ಸಲ್ಲಿಸಿದ ಚಾರ್ಜ್ ಶೀಟ್ ಕುರಿತು ಖಾಸಗಿ ಮಾಧ್ಯಮದ ಪತ್ರಕರ್ತೆಯೊಬ್ಬರು ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.
ವರದಿಗಾರ್ತಿ ಬ್ರಿಜ್ ಭೂಷಣ್ ಬಳಿ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೀರಾ ಎಂದು ಕೇಳಿದಾಗ, ಸಿಟ್ಟಿಗೆದ್ದ ಬ್ರಿಜ್ ಭೂಷಣ್, “ನಾನೇಕೆ ರಾಜೀನಾಮೆ ನೀಡುತ್ತೇನೆ? ನೀವೇಕೆ ರಾಜೀನಾಮೆ ಕೇಳುತ್ತಿದ್ದೀರಿ?” ಎಂದು ಕೇಳಿದ್ದಾರೆ.
ಸಂಸದರು ಎದುರಿಸುತ್ತಿರುವ ಗಂಭೀರ ಆರೋಪಗಳ ಬಗ್ಗೆ ಗಮನ ಸೆಳೆಯಲು ವರದಿಗಾರ್ತಿ ಪ್ರಯತ್ನಿಸುತ್ತಿದ್ದಂತೆ, ಕೋಪಗೊಂಡ ಸಂಸದ ಬ್ರಿಜ್ ಭೂಷಣ್ ಸಿಂಗ್, "ಚುಪ್(ಸುಮ್ಮನಿರು" ಎಂದು ಗದರಿದ್ದಾರೆ.
ಉತ್ತರವನ್ನು ಪಡೆಯಲು ವರದಿಗಾರ್ತಿ ಸಿಂಗ್ ಅವರ ಕಾರಿನವರೆಗೆ ಹಿಂಬಾಲಿಸಿದ್ದು, ಸಂಸದ ಬ್ರಿಜ್ ಭೂಷಣ್ ಕಾರಿನ ಬಾಗಿಲನ್ನು ಜೋರಾಗಿ ಹಾಕಿದ್ದಾರೆ. ಇದರಿಂದ ವರದಿಗಾರ್ತಿಯ ಕೈಯಿಂದ ಮೈಕ್ ಕೆಳಗೆ ಬಿದ್ದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸಂಸದರೊಬ್ಬರು ಮಹಿಳಾ ಪತ್ರಕರ್ತೆಯೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕಿತ್ತು ಎಂದು ಹಲವರು ಟೀಕಿಸಿದ್ದಾರೆ.
ಘಟನೆಯ ವೀಡಿಯೊವನ್ನು ಹಂಚಿಕೊಂಡಿರುವ ಭಾರತೀಯ ಯುವ ಕಾಂಗ್ರೆಸ್ ಮುಖ್ಯಸ್ಥ ಶ್ರೀನಿವಾಸ್ ಬಿವಿ, “ಕುಸ್ತಿಪಟುಗಳಿಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮೇಲೆ ಬಿಜೆಪಿ ಸಂಸದರೊಬ್ಬರು ಮಹಿಳಾ ಪತ್ರಕರ್ತೆಗೆ ಕ್ಯಾಮರಾದ ಎದುರಲ್ಲೇ ಬೆದರಿಕೆ ಹಾಕುತ್ತಿದ್ದಾರೆ ಮತ್ತು ಅವರ ಮೈಕ್ ಅನ್ನು ಮುರಿದಿದ್ದಾರೆ. ಇದು ಯಾರ ಸಂಸ್ಕಾರ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಹೇಳಬಹುದೇ??” ಎಂದುಅ ವರು ಟ್ವೀಟ್ ಮಾಡಿದ್ದಾರೆ.
ಘಟನೆಯನ್ನು ದಿಲ್ಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಲಿವಾಲ್ ಖಂಡಿಸಿದ್ದು, ಬ್ರಿಜ್ ಭೂಷಣ್ ಅವರನ್ನು 'ಗುಂಡಾ' ಎಂದು ಕರೆದಿದ್ದಾರೆ.
"ಕ್ಯಾಮೆರಾದ ಎದುರಲ್ಲಿ ಮಹಿಳಾ ವರದಿಗಾರರೊಂದಿಗೆ ಈ ರೀತಿ ವರ್ತಿಸುವ ಧೈರ್ಯವಿರುವಾಗ, ಕ್ಯಾಮೆರಾದ ಹೊರಗೆ ಮಹಿಳೆಯರೊಂದಿಗೆ ಅವರು ಹೇಗೆ ವರ್ತಿಸುತ್ತಾರೆಂದು ಊಹಿಸಿ! ಈ ಮನುಷ್ಯನ ಸ್ಥಾನವು ಜೈಲೇ ಹೊರತು, ಸಂಸತ್ತು ಅಲ್ಲ!” ಎಂದು ಟ್ವೀಟ್ ಮಾಡಿದ್ದಾರೆ.







