ಪತ್ರಕರ್ತ ಅಭಿಸಾರ್ ಶರ್ಮಾ ಅವರ ತೆರಿಗೆ ಪಾವತಿ ವಿವರ ಟ್ವೀಟ್ ಮಾಡಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ

Photo | newslaundry
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ನಿಂದಿಸುವ ಸಲುವಾಗಿ ಉದ್ಯೋಗ ಬಿಟ್ಟ ಬಳಿಕ ಪತ್ರಕರ್ತರೊಬ್ಬರ ಆದಾಯ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಆಪಾದಿಸಿ ಅವರ ತೆರಿಗೆ ಪಾವತಿ ರಿಟನ್ಸ್ ಪ್ರತಿಯನ್ನು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಟ್ವೀಟ್ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಪತ್ರಕರ್ತ ಯಾರು ಎನ್ನುವುದನ್ನು ಅನುಯಾಯಿಗಳ ಊಹೆಗೆ ಬಿಡುತ್ತೇನೆ ಎಂದು ದುಬೆ ಹೇಳಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಪತ್ರಕರ್ತ ಅಭಿಸಾರ್ ಶರ್ಮಾ ನನ್ನ ತೆರಿಗೆ ವಿವರವನ್ನು ಬಿಜೆಪಿ ಸಂಸದ ಬಹಿರಂಗ ಪಡಿಸಿದ್ದಾರೆ. ಅವರ ವಿರುದ್ಧ ಕ್ರಮವನ್ನು ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.
ಆ ಪತ್ರಕರ್ತರದ್ದು ಎನ್ನಲಾದ ಐಟಿಆರ್ ದಾಖಲೆಯಲ್ಲಿ ಯಾರ ಹೆಸರು ಕೂಡಾ ಇಲ್ಲ; ಆದರೆ ಅವರ ಆದಾಯ 2019ರಲ್ಲಿ 18.9 ಲಕ್ಷ ಇದ್ದುದು 2021-22ರಲ್ಲಿ 1.2 ಕೋಟಿಗೆ ಹೆಚ್ಚಿರುವುದು ಕಂಡುಬರುತ್ತಿದೆ. ಅಂತೆಯೇ 2022-23ರಲ್ಲಿ ಅದು ಮತ್ತೆ 62.7 ಲಕ್ಷಕ್ಕೆ ಕುಸಿದಿದೆ.
"ನಿಮಗೆ ಸಾಧ್ಯವಾದರೆ ಯಾರು ಪತ್ತೆ ಮಾಡಿ; ಇದು ಯಾವ ಶ್ರೇಷ್ಠ ಪತ್ರಕರ್ತರ ಐಟಿಆರ್? ವೇತನ 18 ಲಕ್ಷ. ಉದ್ಯೋಗ ತ್ಯಜಿಸಿದ ಬಳಿಕ ಅಂದರೆ ಮೋದಿಜಿ/ಬಿಜೆಪಿಯನ್ನು ತೆಗಳುತ್ತಾ ಬೀದಿಗಳಲ್ಲಿ ಅಲೆದಾಡುತ್ತಿದ್ದವರ ಆದಾಯ ಕೋಟಿಗಳಲ್ಲಿ.. ಇದು ನಿಜ" ಎಂದು ದುಬೆ ವಿವರಿಸಿದ್ದಾರೆ.
ಕೇಂದ್ರ ಹಣಕಾಸು ಸಚಿವೆಯನ್ನೂ ಟ್ಯಾಗ್ ಮಾಡಿ ಈ ಪೋಸ್ಟನ್ನು ಮರುಟ್ವೀಟ್ ಮಾಡಿರುವ ಪತ್ರಕರ್ತ ಅಭಿಸಾರ್ ಶರ್ಮಾ, "ರಹಸ್ಯ ದಾಖಲೆಗಳು ಮತ್ತು ತೆರಿಗೆ ಪಾವತಿದಾರರ ವಿವರಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಸಂಸದರೇ ಟ್ವೀಟ್ ಮಾಡಿದ್ದಾರೆ" ಎಂದು ಹೇಳಿದ್ದಾರೆ. ಆದಾಯ ತೆರಿಗೆ ಇಲಾಖೆಗೂ ಟ್ಯಾಗ್ ಮಾಡಿರುವ ಶರ್ಮಾ, ಈ ಬಗ್ಗೆ ದುಬೆ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪತ್ರಕರ್ತರ ಹೆಸರು ಬಹಿರಂಗಪಡಿಸುವ ತಾಕತ್ತು ಇಲ್ಲ.. ಇದು ಹೇಡಿತನ ಎಂದು ಹೇಳಿದ್ದಾರೆ. ಪತ್ರಕರ್ತ ರವೀಶ್ ಕುಮಾರ್ ಕೂಡಾ ಈ ಟ್ವೀಟ್ ಬಗ್ಗೆ ಅಪಸ್ವರ ಸೂಚಿಸಿದ್ದಾರೆ. ಬಿಜೆಪಿ ಇದೀಗ ಪ್ರತಿಯೊಬ್ಬರ ಐಟಿಆರ್ ಅಂಶಗಳನ್ನು ಬಹಿರಂಗಪಡಿಸಿ ಗುರಿ ಮಾಡುತ್ತಿದೆಯೇ? ಕೆಲವರ ಕಠಿಣ ಪರಿಶ್ರಮದ ಹಣವನ್ನು ಅಪರಾಧೀಕರಿಸಲಾಗುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ.







