ಚುನಾವಣೋತ್ತರ ಸಮೀಕ್ಷೆ | ಎನ್ ಡಿಎ ಗೆ ಗಾಬರಿಯಾಯಾಗುತ್ತಿದೆ: RJD ನಾಯಕ ತೇಜಸ್ವಿ ಯಾದವ್

ತೇಜಸ್ವಿ ಯಾದವ್ |Photo Credit : ANI
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಎರಡನೆ ಮತ್ತು ಅಂತಿಮ ಹಂತದ ಮತದಾನ ಮುಕ್ತಾಯಗೊಂಡ ನಂತರ, ಚುನಾವಣಾ ತಜ್ಞರ ಚುನಾವಣೋತ್ತರ ಸಮೀಕ್ಷೆಗಳನ್ನು ಬುಧವಾರ ತಳ್ಳಿ ಹಾಕಿರುವ ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್, ಚುನಾವಣೋತ್ತರ ಸಮೀಕ್ಷೆಗಳ ಮಾನ್ಯತೆ ಕುರಿತು ಪ್ರಶ್ನೆ ಎತ್ತಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತೇಜಸ್ವಿ ಯಾದವ್, “ಮಹಾಘಟಬಂಧನ್ ಮೈತ್ರಿಕೂಟ ಸುಲಭವಾಗಿ ಗೆಲುವು ಸಾಧಿಸುತ್ತಿರುವುದರಿಂದ ಎನ್ಡಿಎ ತುಂಬಾ ಹೆದರಿಕೊಂಡಿದೆ” ಎಂದು ಹೇಳಿದ್ದಾರೆ. ಚುನಾವಣೆ ಮುಕ್ತಾಯಗೊಳ್ಳುವ ಮುನ್ನವೇ ಚುನಾವಣೋತ್ತರ ಸಮೀಕ್ಷೆಗಳ ಪ್ರಕಟಗೊಂಡಿರುವ ಕುರಿತು ರಾಜ್ಯದ ಜನತೆ ಕೂಡಾ ಆಕ್ರೋಶಗೊಂಡಿದ್ದಾರೆ ಎಂದೂ ಅವರು ಹೇಳಿದ್ದಾರೆ.
“ನಮಗೆ ಸಿಗುತ್ತಿರುವ ಮಾಹಿತಿಯ ಪ್ರಕಾರ, ಬಿಜೆಪಿ ಹಾಗೂ ಎನ್ಡಿಎಗೆ ಹೆದರಿಕೆಯಾಗಿದೆ. ಅದು ಗಾಬರಿಗೊಳಗಾಗಿರುವುದು ಕಂಡು ಬರುತ್ತಿದೆ. ಜನರು ಆಕ್ರೋಶಿತರಾಗಿದ್ದಾರೆ. ಮತದಾನ ಆಗಿರುವ ರೀತಿಯಿಂದ ಅವರು ಭಯಭೀತರಾಗಿದ್ದಾರೆ. ನಿನ್ನೆಯ ಮತದಾನದ ವೇಳೆ ಜನರು ಸಂಜೆ 6ರಿಂದ 7 ಗಂಟೆಯವರೆಗೂ ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು ಹಾಗೂ ಇನ್ನೂ ಮತದಾನ ನಡೆಯುತ್ತಿರುವಾಗಲೇ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶಗಳು ಹೊರಬರತೊಡಗಿದವು” ಎಂದು ಅವರು ಆಕ್ಷೇಪಿಸಿದ್ದಾರೆ.
ಚುನಾವಣೋತ್ತರ ಸಮೀಕ್ಷೆಯ ವೈಜ್ಞಾನಿಕ ಮಾನ್ಯತೆಯ ಕುರಿತೂ ಪ್ರಶ್ನಿಸಿದ ತೇಜಸ್ವಿ ಯಾದವ್, “ಇಡೀ ಮತದಾನ ಪ್ರಕ್ರಿಯೆ ಕುರಿತು ಮಾತನಾಡಲು ಅವರು ಬಳಿ ಸಾಕಷ್ಟು ಸ್ಯಾಂಪಲ್ ಗಳಿಲ್ಲದೆ ಇರುವುದರಿಂದ, ಚುನಾವಣಾ ಫಲಿತಾಂಶವನ್ನು ಯಾರೂ ಕೂಡಾ ನಿಖರವಾಗಿ ಅಂದಾಜಿಸಲು ಸಾಧ್ಯವಿಲ್ಲ” ಎಂದು ಪ್ರತಿಪಾದಿಸಿದ್ದಾರೆ.
1995ರಲ್ಲಿ ಈ ಹಿಂದಿನ ಜನತಾ ದಳದ ಚಿಹ್ನೆಯ ಮೇಲೆ ಲಾಲೂ ಪ್ರಸಾದ್ ಯಾದವ್ ಸ್ಪರ್ಧಿಸಿದ್ದ ಚುನಾವಣೆಗಿಂತಲೂ ಈ ಬಾರಿಯ ಚುನಾವಣೆಯಲ್ಲಿ ನಮಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದೂ ಅವರು ಹೇಳಿದ್ದಾರೆ.
1995ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜನತಾ ದಳ ಪಕ್ಷವು 167 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದರೆ, ಬಿಜೆಪಿ, ಕಾಂಗ್ರೆಸ್ ಕ್ರಮವಾಗಿ 41 ಮತ್ತು 29 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು. ಎಡಪಕ್ಷಗಳಾದ ಸಿಪಿಐ, ಸಿಪಿಐ(ಎಂಎಲ್) ಹಾಗೂ ಸಿಪಿಐ(ಎಂ) ಕ್ರಮವಾಗಿ 26, 6 ಮತ್ತು 2 ಸ್ಥಾನಗಳಲ್ಲಿ ಜಯ ಗಳಿಸಿದ್ದವು.
ನಿನ್ನೆ ಬಿಹಾರ ವಿಧಾನಸಭಾ ಚುನಾವಣೆ ಕುರಿತು ಪ್ರಕಟಗೊಂಡ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಬಿಹಾರದಲ್ಲಿ ಎನ್ಡಿಎ ಮೈತ್ರಿಕೂಟ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಲಿದೆ ಎಂದು ಅಂದಾಜಿಸಿವೆ







